ಅಂಕೋಲಾ: ತಾಲೂಕಿನ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಬಸ್ ನಿರ್ವಾಹಕರೊಬ್ಬರು ಆಯತಪ್ಪಿ ಜಾರಿ ಬಿದ್ದು ಬಲ ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದ್ದು, ಬಸ್ ಚಾಲಕ ಮತ್ತು ಬಸ್ ನಿಲ್ದಾಣದ ಅಂಗಡಿ ಮಳಿಗೆ ಮಾಲಿಕರು ಗಾಯಾಳು ಕಂಡಕ್ಟರ್ ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ,ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಕುಮಟಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿಜಾಪುರ ನಿವಾಸಿ ದೇಸಾಯಿ ರಾಥೋಡ್ (49) ಗಾಯಗೊಂಡ ವ್ಯಕ್ತಿಯಾಗಿದ್ದು (ನಿರ್ವಾಹಕ )ಕಾರವಾರದಿಂದ ಅಂಕೋಲಾ ಮಾರ್ಗವಾಗಿ ಕುಮಟಾಕ್ಕೆ ಕರ್ತವ್ಯಕ್ಕೆ ಹೊರಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಂಕೋಲಾ ಬಸ್ ನಿಲ್ದಾಣದ ಕಂಟ್ರೋಲ್ ರೂಂನಲ್ಲಿ ನೋಂದಣಿ ಮಾಡಿ ಬಸ್‌ನತ್ತ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ನಿಲ್ದಾಣದ ಇಳಿಜಾರು ಪ್ರದೇಶ ಹಾಗೂ ಮೆಟ್ಟಿಲುಗಳ ಬಳಿ ಆಯತಪ್ಪಿ ಜಾರಿ ಬಿದ್ದಿರುವುದಾಗಿ ಹೇಳಲಾಗುತ್ತಿದ್ದು, ಚಾಲಕ ದತ್ತು ನಾಯ್ಕ, ಅಂಗಡಿ ಮಳಿಗೆಗಳ ಕೆಲಸಗಾರ ಪ್ರವೀಣ ಗುನಗಾ, ರಾಜು ಶೆಟ್ಟಿ ಮತ್ತಿತರರು ಸೇರಿ ಕೂಡಲೇ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು.
ತಾಲೂಕಿನ ನೂತನ ಬಸ್ ನಿಲ್ದಾಣದ ಅವೈಜ್ಞಾನಿಕ ಕಾಮಗಾರಿ ಹಲವಾರು ಅವಾಂತರಗಳಿಗೆ ಕಾರಣವಾಗುತ್ತಲೇ ಬಂದಿದ್ದು ಯಾವುದೇ ರೀತಿಯ ಸರಿಯಾದ ಯೋಜನೆ ಇಲ್ಲದೇ ನಿರ್ಮಿಸಲಾಗಿರುವ ಪ್ಲಾಟ್ ಫಾರ್ಮ್, ಕಂಟ್ರೋಲ್ ರೂಂಗೆ ಸಾಗುವ ದಾರಿ ಗೊಂದಲಕ್ಕೆ ಕಾರಣರಾಗಿ ಸಿಬ್ಬಂದಿಗಳು ಸೇರಿದಂತೆ ಹಲವಾರು ಪ್ರಯಾಣಿಕರು ಆಗಾಗ ಎಡವಿ ಬಿದ್ದು ಗಾಯಗೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ ಎನ್ನಲಾಗಿದೆ.
ಬಸ್ ನಿಲ್ದಾಣದ ವಿಚಾರಣಾ ಕೊಠಡಿ, ನಿಲ್ದಾಣ ನಿಯಂತ್ರಕರ ಕಚೇರಿಗೆ ಸಾಗುವ ಸ್ಥಳ, ವಿಕಲಚೇತನರು ಸಾಗಲು ಅಥವಾ ಇನ್ನಿತರೇ ಕಾರಣಗಳಿಂದ ಜಾರುಬಂಡಿ ತರದಲ್ಲಿ ನಿರ್ಮಾಣವಾಗಿದ್ದು ಅದರ ಅತೀ ಹತ್ತಿರದಲ್ಲೇ ಬಸ್‌ಗಳು ಬಂದು ತಂಗುವುದರಿಂದ, ದಾರಿ ಅಂದಾಜಿಸಲಾಗದೇ ಕೆಲವರು ಜಾರಿ ಬೀಳುವುದು, ಆಯ ತಪ್ಪಿ ಎಡವಿ ಬೀಳುವ ಹತ್ತಾರು ಚಿಕ್ಕ ಪುಟ್ಟ ಅವಘಡ ಆಗಾಗ ಸಂಭವಿಸುತ್ತಲೇ ಇರುತ್ತದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಬಸ್ ನಿಲ್ದಾಣದ ಆವರಣವೂ ಇಳಿಜಾರಿನಿಂದ ಕೂಡಿದ್ದು ಮುಖ್ಯ ರಸ್ತೆ ಕೂಡುವೆಡೆ ಆಗಾಗ ಕಿತ್ತು ಬೀಳುವ ಕಬ್ಬಿಣ ಪಟ್ಟಿ (ಕ್ಯಾಟಲ್ ರ್ಯಾಕ್ ) , ತಗ್ಗು ಪ್ರದೇಶ ಮತ್ತು ಹೊಂಡ -ಗುಂಡಿಗಳಿಂದ ಹದಗೆಟ್ಟ ರಸ್ತೆಯಿಂದಾಗಿ ಹತ್ತಾರು ರೀತಿಯ ತೊಂದರೆಗಳಾಗುತ್ತಿದ್ದು,ಇತ್ತೀಚೆಗಷ್ಟೇ ಡಕೋಟ ಬಸ್ ಒಂದು ಬೈಕ್ ಮೇಲೆ ಹರಿಹಾಯ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಅದೃಷ್ಟವಶಾತ್ ಸಂಘಟನೆಯಲ್ಲಿ ಅದೃಷ್ಟವಶಾತ್ ಆ ಘಟನೆಯಲ್ಲಿ ತಂದೆಯೊಂದಿಗೆ ಬೈಕ್ ನಲ್ಲಿದ್ದ ಪುಟಾಣಿ ಬಾಲಕನೋರ್ವ ಸ್ಥಳೀಯರ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದ. ಬಸ್ ನಿಲ್ದಾಣದ ಅವ್ಯವಸ್ಥೆ,ಗ್ರಾಮೀಣ ಭಾಗದಲ್ಲಿ ನಿಲುಗಡೆಯಾಗದ ಕೆಲ ಬಸಗಳು ,ಮತ್ತಿತರ ಸಮಸ್ಯೆಗಳ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನೂತನ ಜಿಲ್ಲಾಧಿಕಾರಿಗಳು ಡಿಪೋ ಮ್ಯಾನೇಜರ್ ಅವರಿಗೆ ಅವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದ್ದರು.ಸಂಬಂಧಿಸಿದವರು ಈಗಲಾದರೂ ಎಚ್ಚೆತ್ತು ತಮ್ಮ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಯೋಗ್ಯಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ