ಫ್ರಿಜ್ ರಿಪೇರಿ ಮಾಡಲು ಬಂದಿರುವೆ ಎಂದು ಹೇಳಿ ಮಹಿಳೆಯ ಕುತ್ತಿಗೆಯಲ್ಲಿದ್ದ ಬಂಗಾರದ ಸರಕ್ಕೆ ಕೈ ಹಾಕಿದ್ದ ಖದೀಮ:  ಆರೋಪಿಗೆ ಮೂರು ವರ್ಷ ಕಠಿಣ ಶಿಕ್ಷೆ

ಹತ್ತು ಸಾವಿರ ರೂ ದಂಡ ವಿಧಿಸಿದ ನ್ಯಾಯಾಲಯ

ಅಂಕೋಲಾ: ಮಹಿಳೆಯೋರ್ವರ ಕುತ್ತಿಗೆಯಿಂದ ಬಂಗಾರದ ಹವಳದ ಸರವನ್ನು ಹರಿದು ಓಡಿ ಹೋಗಿದ್ದ ಆರೋಪಿತನಿಗೆ ಅಂಕೋಲಾ ಜೆ.ಎಂ.ಎಫ್. ಸಿ ನ್ಯಾಯಾಲಯ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಕನಸೆಗದ್ದೆ ನಿವಾಸಿ ನಾಗರಾಜ ವಿಜಯ ಭೋವಿ ಎಂಬಾತನೇ ನ್ಯಾಯಾಲಯದ  ಶಿಕ್ಷೆಗೊಳಪಟ್ಟ ಆರೋಪಿತನಾಗಿದ್ದಾನೆ.

ಅನ್ನ-ಆಹಾರವಿಲ್ಲದೆ ನರಳಾಡುತ್ತಿದ್ದ ವೃದ್ಧೆಯ ನೆರವಿಗೆ ನಿಂತ ನ್ಯಾಯಾಧೀಶೆ: ರಾತ್ರೋರಾತ್ರಿ ಸ್ಥಳಕ್ಕೆ ತೆರಳಿ ರಕ್ಷಣೆ

2015 ರ ಅಕ್ಟೋಬರ್ 14 ರಂದು ಪಟ್ಟಣದ (ಪುರಸಭೆ ಹಳೆಯ ಕಟ್ಟಡದ ) ಎದುರಿನ ಓಣಿಯಂಚಿನ ಮನೆಯಲ್ಲಿ ವಾಸವಾಗಿದ್ದ, ಶಾಲಿನಿ ನಾಗೇಶ ಕಾಳೆ ಎನ್ನುವವರು ತಮ್ಮ  ಮನೆಗೆ ಬಂದು ಚಾವಿ ತೆಗೆಯುತ್ತಿರುವ ಸಂದರ್ಭದಲ್ಲಿ, ಅವರೂ ಕರೆಯದಿದ್ದರೂ ಮನೆಯ ಮೆಟ್ಟಿಲ ಬಳಿ ಬಂದಿದ್ದ  ಆರೋಪಿತ, ಮಹಿಳೆಗೆ ಸುಳ್ಳು ಹೇಳಿ ಅವಳ ಮಗ   ಪ್ರಿಡ್ಜ್ ರಿಪೇರಿ ಮಾಡಲು ಕಳುಹಿಸಿದ್ದಾನೆ ಎಂದು ಮಾತುಕತೆ ಆರಂಭಿಸಿದ್ದ.  ತಮ್ಮ ಮನೆಯಲ್ಲಿ ಯಾವುದೇ ಪ್ರಿಡ್ಜ್ ರಿಪೇರಿ ಇಲ್ಲ ಎಂದು ಶಾಲಿನಿ ಕಾಳೆ  ತಿಳಿಸುತ್ತಿದ್ದಾಗ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಹವಳದ ಸರ ಹರಿದು ಸರದ ತುಂಡಿನೊಂದಿಗೆ ಪರಾರಿಯಾಗಿದ್ದ  ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ  ಪ್ರಕರಣ ದಾಖಲಿಸಲಾಗಿತ್ತು. 

ಈ ಕುರಿತು ಅಂದಿನ ಅಂಕೋಲಾ ಪೊಲೀಸ್ ನಿರೀಕ್ಷಕ ಅರುಣಕುಮಾರ ಕೋಳೂರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಅಂಕೋಲಾ ಸಿವಿಲ್ ಮತ್ತು ಜೆ.ಎಂ.ಎಫ್. ಸಿ ನ್ಯಾಯಾಧೀಶರಾದ ಪ್ರಶಾಂತ ಬಾದವಾಡಗಿ ಅವರು ಆರೋಪಿತನಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.  ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಗಿರೀಶ್ ಪಟಗಾರ ವಾದಿಸಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version