ಅಂಕೋಲಾ: ಅಂಡಮಾನ್ – ನಿಕೋಬಾರ್ ದ್ವೀಪ ಪ್ರದೇಶದಲ್ಲಿ ನೌಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕು ಮೂಲದ ಭಾರತೀಯ ನೌಕಾ ಸೇನಾ ಸಿಬ್ಬಂದಿಯೋರ್ವರು ಕಳೆದ 3-4 ದಿನಗಳ ಹಿಂದೆ ಆಕಸ್ಮಿಕ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆ (ಜ. 5 ರಂದು )ಹುಟ್ಟೂರಿಗೆ ತರಲಾಗುತ್ತಿದೆ. ಅಂಕೋಲಾ ತಾಲೂಕಿನ ಪುರಸಭೆ ವ್ಯಾಪ್ತಿಯ ಲಕ್ಷೇಶ್ವರ ವಾರ್ಡ್ ನಿವಾಸಿಯಾಗಿದ್ದ ನಾಗರಾಜ ಮುಕುಂದ ಕಳಸ (33 ) ಅಕಾಲಿಕವಾಗಿ ವಿಧಿವಶರಾಗಿದ್ದು, 2010 ರಲ್ಲಿ ಐ.ಎನ್.ಎಸ್. ಚಿಲಕ ಕಾರವಾರದ ಮೂಲಕ ಭಾರತೀಯ ನೌ ಸೇನಾ ಸಿಬ್ಬಂದಿಯಾಗಿ ಸೇವೆ ಆರಂಭಿಸಿ , ಬಳಿಕ ಮುಂಬೈಯಲ್ಲಿಯೂ ಸೇವೆ ಸಲ್ಲಿಸಿ ನಂತರ ಅಂಡಮಾನ್ – ನಿಕೋಬಾರ್ ದ್ವೀಪಗಳಲ್ಲಿ ಸೇವೆ ಮುಂದುವರೆಸಿದ್ದರು.
ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿಗೆ ಒಂದೆರಡು ವರ್ಷಗಳು ಬಾಕಿ ಇರುವಾಗ ಮರಳಿ ಬಾರದ ಲೋಕಕ್ಕೆ ತೆರಳುವಂತಾಗಿರುವುದು ವಿಧಿಯಾಟವೇ ಸರಿ . ದೂರದೂರಿನಲ್ಲಿ ನಡೆದಿರಬಹುದಾದ ಅದಾವುದೋ ಆಕಸ್ಮಿಕ ಅವಘಡದಿಂದ ನಾಗು ಜೀವ ಕಳೆದುಕೊಳ್ಳುವಂತಾಗಿದ್ದು, ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸಬೇಕಿದ್ದ ಮನೆಯಲ್ಲಿ , ಗರಬಡಿದಂತೆ ಕೇಳಿ ಬಂದ ಸಾವಿನ ಸುದ್ದಿ ಆತನ ತಂದೆ ತಾಯಿ, ಸಹೋದರ- ಸಹೋದರಿಯರು, ಪತ್ನಿ ಹಾಗೂ ಮುದ್ದಾದ 2 ಮಕ್ಕಳು ಮತ್ತು ಕುಟುಂಬ ಸಂಬಂಧಿಗಳ , ಗೆಳೆಯರ ಹಾಗೂ ಊರ ನಾಗರಿಕರ ತೀವ್ರ ಶೋಕಕ್ಕೆ ಕಾರಣವಾಗಿದೆ.
ಅಂಡಮಾನ್ ನಿಕೋಬಾರ್ ನಿಂದ ಹೈದ್ರಾಬಾದ್ , ಗೋವಾ ಮಾರ್ಗವಾಗಿ ಪಾರ್ಥಿವ ಶರೀರವನ್ನು ಗುರುವಾರ ಬೆಳಗಿನ ಜಾವ ಅಂಕೋಲಾಕ್ಕೆ ತಲುಪಿಸಲಾಗುತ್ತಿದೆ ಎನ್ನುವ ಮಾಹಿತಿ ಇದ್ದು, ಲಕ್ಷ್ಮೇಶ್ವರ ದ ಮೂಲ ಮನೆಯಲ್ಲಿ ಬೆಳಿಗ್ಗೆ 7 ಘಂಟೆಯಿಂದ 1- 2 ತಾಸುಗಳ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು, ಆ ಬಳಿಕ ಕಿರಣ ಐಸ್ ಫ್ಯಾಕ್ಟರಿ ರಸ್ತೆಯಿಂದ – ಕೆ.ಸಿ. ರಸ್ತೆ ಹಾಗೂ ಕೆ. ಎಲ್ ಇ ರಸ್ತೆಯಲ್ಲಿ ಸಾಗಿ ಕೋಟೆವಾಡಾದ ಹಿಂದೂ ಸ್ಮಶಾನ ಭೂಮಿಯಲ್ಲಿ ಸಕಲ ಧಾರ್ಮಿಕ ವಿಧಿವಿಧಾನ ಹಾಗೂ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಇದ್ದು ಸಂಬಂಧಿಸಿದ ಅಧಿಕಾರಿ ವರ್ಗ ಹಾಗೂ ಕುಟುಂಬಸ್ಥರು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ