ಅಂಕೋಲಾ: ರಾಜ್ಯದ ವಿವಿಧಡೆ ಸಿನೀಮೀಯ ರೀತಿಯಲ್ಲಿ ಹಲವು ಬೈಕ್ ಕಳ್ಳತನ ಮಾಡಿ, ಕ್ರೇಜಿಯಾಗಿ ಸವಾರಿ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ವಶಕ್ಕೆ ಪಡೆಯುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳು ಅಪರಿಚಿತ ಯುವಕನೋರ್ವ, ತನ್ನ ಚಾಲಾಕಿ ಬುದ್ಧಿ ಪ್ರದರ್ಶಿಸಿ, ಸ್ಥಳೀಯ ಮಂಜುಗುಣಿ ಯುವಕನನ್ನು ಯಾಮಾರಿಸಿ,ನಿನ್ನ ಹೊಸ ಬೈಕ್ ಚೆನ್ನಾಗಿದೆ, ನಾನೂ ಇಂಥಹದೇ ಬೈಕ್ ಖರೀದಿಸಬೇಕೆಂದಿರುವೆ .ಒಂದು ಟೆಸ್ಟ್ ರೈಡ್ ಗೆ ಕೊಡು ಎಂದು ಸುಳ್ಳು ಹೇಳಿ ಬೈಕ್ ಏರಿ ನಾಪತ್ತೆಯಾಗಿದ್ದ. ತನ್ನ ಬೈಕ್ ಏರಿ ಹೋದ ಅಪರಿಚಿತ ಬಹು ಹೊತ್ತಾರೂ ಬೈಕ್ ಅನ್ನು ಮರಳಿ ತಂದು ಕೊಡದಿದ್ದರಿಂದ,ತಾನು ಮೋಸ ಹೋದೆ ಎಂದು ಡ್ಯೂಕ್ ಬೈಕ್ ಮಾಲಕ ಆತಂಕಿತನಾಗಿ ಪೊಲೀಸ್ ಠಾಣೆಗೆ ಒಂದು ಘಟನೆ ಕುರಿತಂತೆ ದೂರು ನೀಡಿದ್ದ . ತಾಲೂಕಿನ ಬಾಳೇಗುಳಿಯ ಬೈಕ್ ಶೋ ರೂಮ್ ಒಂದರ ಬಳಿ ನಡೆದ ಈ ಘಟನೆ ಹಲವು ರೀತಿಯ ಚರ್ಚೆಗ ಕಾರಣವಾಗಿತ್ತು.
ತಾಲೂಕಿನ ಮಂಜಗುಣಿ ಹೊನ್ನೇಬೈಲ ನಿವಾಸಿ ಹಟ್ಟಿಕೇರಿ ಟೋಲ್ ಗೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಅರವಿಂದ ತಾಂಡೇಲ್ ಎಂಬಾತ ಇತ್ತೀಚೆಗಷ್ಟೇ ಶಿರಸಿಯಿಂದ ಕೆಟಿಎಂ ಕಂಪನಿಯ ಹೊಸ ಡ್ಯೂಕ್ ಬೈಕ್ ಖರೀದಿ ಮಾಡಿದ್ದ. ನಂತರ ತನ್ನ ಕೆಟಿಎಂ ಡ್ಯೂಕ್ ಬೈಕ್ ಮೇಲೆ, ಬಾಳೇಗುಳಿ ಯಮಹಾ ಶೋ ರೂಮ್ ಗೆ ಬೇರೆ ಕೆಲಸದ ನಿಮಿತ್ತ ತೆರಳಿದವನು ಅಲ್ಲಿಂದ ವಾಪಸ್ತಾಗುತ್ತಿದ್ದಾಗ, ಶೋರೂಂ ಎದುರಿನ ಹೆದ್ದಾರಿಯಲ್ಲಿ ನಿಂತಿದ್ದ ತನ್ನ ಅಪರಿಚಿತ ತಾನು ತಂದಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ್ನು ಅಲ್ಲಿಯೇ ಬಿಟ್ಟು ಕೆಟಿಎಂ ಬೈಕ್ ಟ್ರಯಲ್ ನೋಡುವುದಾಗಿ ಹೇಳಿ ಪಡೆದುಕೊಂಡು ನಾಪತ್ತೆಯಾಗಿದ್ದ. ಘಟನೆಯ ಆರಂಭಿಕ ಕೆಲ ದೃಶ್ಯಾವಳಿಗಳು ಬೈಕ್ ಶೋ ರೂಮಿನ ಸಿ.ಸಿ ಟಿವಿ ಕ್ಯಾಮೆರಾ ದಲ್ಲಿ ಸೆರೆಯಾಗಿತ್ತು.
ಅಪರಿಚಿತ ವ್ಯಕ್ತಿ ಬಿಟ್ಟು ಹೋದ ಬೈಕ್ ಅಸಲಿಗೆ ಆತನದಾಗಿರದೇ ಅದೂ ಸಹ ಕದ್ದ ಬೈಕ್ ಎನ್ನುವುದು ನಂತರ ತಿಳಿದು ಬಂದಿತ್ತು. ಈ ಕಳ್ಳತನ ಪ್ರಕರಣ ಹಲವು ಟ್ವಿಸ್ಟ್ ಗಳಿಂದ ಕೂಡಿದ್ದು ಪ್ರಕರಣ ಭೇದಿಸುವುದು ಸುಲಭ ಸಾಧ್ಯವಿರಲಿಲ್ಲ.ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿರುವಾಗಲೇ ಅಂಕೋಲಾದಲ್ಲಿ ಕದ್ದ ಡ್ಯೂಕ್ ಬೈಕ್ ಚಿಕ್ಕಮಂಗಳೂರಿನಲ್ಲಿ ಪತ್ತೆಯಾಯಿತಾದರೂ, ಕಳ್ಳನ ಕರಾ ಮತ್ತಿನಿಂದ ಇಲ್ಲಿಯೂ ಪೊಲೀಸರು ತಲೆಕೆರೆದುಕೊಳ್ಳುವಂತೆ ಮಾಡಿತ್ತು. ಚಿಕ್ಕಮಂಗಳೂರಿಗೆ ಬಂದಿದ್ದ ಆಂಧ್ರ ಮೂಲದ ಪ್ರವಾಸಿಗರಿಗೆ ಅಂಕೋಲಾದಲ್ಲಿ ಕಳ್ಳತನ ನಡೆಸಿದ ಮಾದರಿಯಲ್ಲಿಯೇ ನಂಬಿಸಿ,ಅವರಿoದ ಹಿರೋ ಪಲ್ಸ್ ಬೈಕ್ ಪಡೆದಿದ್ದ ಕಿಲಾಡಿ ಕಳ್ಳ, ಅನುಮಾನ ಬಾರದಂತೆ ತಾನು ಕದ್ದು ತಂದಿದ್ದ ಡ್ಯೂಕ್ ಬೈಕ್ ಅಲ್ಲಿಯೇ ಬಿಟ್ಟು ಮತ್ತೆ ನಾಪತ್ತೆಯಾಗಿದ್ದ .
ಈ ಕುರಿತು ಚಿಕ್ಕ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡ್ಯೂಕ್ ಬೈಕ್ ಏನೋ ಪತ್ತೆಯಾಯಿತಾದರೂ ಕಳ್ಳ ಮಾತ್ರ ಎಲ್ಲರಿಗೂ ಚಳ್ಳೆ ಹಣ್ಣು ತಿನ್ನಿಸಿ ನಾಪತ್ತೆ ಯಾಗಿದ್ದ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಬಾರಿ ಕಳ್ಳನನ್ನು ಹಿಡಿಯಲೇ ಬೇಕೆಂದು ಪಣತೊಟ್ಟಂತಿದ್ದ ಅಂಕೋಲಾ ಪಿಎಸೈ ಪ್ರೇಮ ನಗೌಡ ಪಾಟೀಲ್ ಮತ್ತು ತಂಡ ಕೊನೆಗೂ ಚಾಲಾಕಿ ಕಳ್ಳನನ್ನು ಆಂಧ್ರ ನೊಂದಣೆ ಬೈಕನೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹಾವೇರಿ ಮೂಲದ ಅರಾಪತ್ ಅತ್ತರ್ (30) ಬಂಧಿತ ಆರೋಪಿಯಾಗಿದ್ದು ಈತನ್ನು ಬೆಳ್ತಂಗಡಿ,ಹೊನ್ನಾವರದ ಉಪ್ಪೋಣಿ ಭಾಗಗಳಲ್ಲಿ ವಾಸವಾಗಿದ್ದುಕೊಂಡು ಕಳೆದ ಕೆಲವು ವರ್ಷಗಳಿಂದ ಕಟ್ಟಡ (ಸೆಂಟ್ರಿಗ್ – ಟೈಲ್ ಫಿಟಿಂಗ್ ನಂತಹ ) ಕೆಲಸ ಮಾಡಿ ಕೊಂಡಿದ್ದ ಎನ್ನಲಾಗಿದ್ದು ತನ್ನ ಮೋಜು ಮಸ್ತಿಯ ಜೀವನಕ್ಕಾಗಿ ಬೈಕ್ ಕಳ್ಳತನ, ಮೊಬೈಲ್ ಕಳ್ಳತನದಂತಹ ಅಡ್ಡಕಸುಬಿಗೆ ಇಳಿದಿದ್ದ ಎನ್ನಲಾಗಿದೆ.
ಈ ಹಿಂದೆ ಈತ ರಾಜ್ಯದ ಬೇರೆ ಬೇರೆ ಕಡೆ 20ಕ್ಕೂ ಹೆಚ್ಚು ಬೈಕ್ ಗಳನ್ನು ಕಳವು ಮಾಡಿರುವ ಸಾಧ್ಯತೆ ಕೇಳಿ ಬಂದಿದ್ದು,ಚಿತ್ರದುರ್ಗ, ಹುಬ್ಬಳ್ಳಿ, ಅಂಕೋಲಾ ಹಾಗೂ ಚಿಕ್ಕ ಮಂಗಳೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನದ ಬೆರಳಣಿಕೆಯ ಪ್ರಕರಣಗಳಷ್ಟೇ ದಾಖಲಾಗಿದ್ದರೆ, ಹಲವೆಡೆ ಪ್ರಕರಣ ದಾಖಲಾಗದಿರುವುದು ಕಳ್ಳನ ಪಾಲಿಗೆ ವರದಾನವಾಗಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಖತರ್ನಾಕ್ ಕಳ್ಳನನ್ನು ಬಂಧಿಸಿದ ಅಂಕೋಲಾ ಪೋಲೀಸರ ಕುರಿತು ನಾಗರಿಕ ವಲಯದಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ