Follow Us On

WhatsApp Group
Important
Trending

ಗಣರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ನಾರೀ ಶಕ್ತಿ ಪ್ರದರ್ಶನ: ಪದ್ಮಶ್ರೀ ತ್ರಿವಳಿಗಳಾದ ಸಾಲುಮರದ ತಿಮ್ಮಕ್ಕ,ತುಳಸಿ ಗೌಡ, ನರಸಮ್ಮರ ಸ್ಥಬ್ದ ಚಿತ್ರ: ಜನಪದ ಸುಗ್ಗಿ ಕುಣಿತ ಪ್ರದರ್ಶನ

ಅಂಕೋಲಾ: ದೇಶದ ಗಣತಂತ್ರ ದಿನದಂದು ( ಜನವರಿ 26 ) ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಡೆಯುವ ಪಥಸಂಚಲನ (ಗಣರಾಜ್ಯೋತ್ಸವ ಪರೇಡ್ ) ವಿಶ್ವ ಪ್ರಸಿದ್ಧಿಯಾಗಿದೆ. ಈ ವೇಳೆ ಕರ್ನಾಟಕ ರಾಜ್ಯದಿಂದ ಪ್ರದರ್ಶಿಸಲ್ಪಡುವ ಸ್ಥಬ್ದ ಚಿತ್ರ ತನ್ನದೇ ಆದ ಮಹತ್ವ ಪಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷಮಾತೆ ಎಂದೇ ಪ್ರಸಿದ್ಧಿಯಾದ ತುಳಸಿ ಗೌಡ, ಹೆದ್ದಾರಿ ಅಂಚಿಗೆ ಸಾವಿರಾರು ಗಿಡಗಳನ್ನು ನೆಟ್ಟು,ಪದ್ಮಶ್ರೀ ಪುರಸ್ಕೃತರಾಗಿರುವ ಮತ್ತು ರಾಜ್ಯದ ಪರಿಸರ ರಾಯಭಾರಿಯಾಗಿ ಸಂಪುಟ ದರ್ಜೆ ಸ್ಥಾನಮಾನ ಗಳಿಸಿರುವ ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮದ ಸಾಲು ಮರದ ತಿಮ್ಮಕ್ಕ, ಸಾವಿರಾರು ಗರ್ಭಿಣಿಯರಿಗೆ ಉಚಿತವಾಗಿ ಸಾಂಪ್ರದಾಯಿಕ ಹೆರಿಗೆ ಮಾಡಿಸಿರುವ ಪಾವಗಡದ ಸೂಲಗಿತ್ತಿ ನರಸಮ್ಮ ಅವರ ಪ್ರತಿಮೆಗಳು ರಾಜ್ಯದ ಸ್ಥಬ್ದ ಚಿತ್ರ ಮೆರವಣಿಗೆಯಲ್ಲಿ ಕಂಡು ಬರಲಿದ್ದು, ಭರದ ಸಿದ್ಧತೆ ನಡೆಯುತ್ತಿದೆ.

ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ – ಅಂಕೋಲಾ ಭಾಗದ ಜಾನಪದ ಕಲಾವಿದರ ತಂಡದಿಂದ ಇಲ್ಲಿನ ಸಾಂಪ್ರದಾಯಿಕ ಸುಗ್ಗಿ ಕುಣಿತದ ಪ್ರದರ್ಶನಕ್ಕೂ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಅವಕಾಶ ದೊರೆತಿದೆ.
ರಾಷ್ಟ್ರಪತಿಗಳು,ಪ್ರಧಾನ ಮಂತ್ರಿಗಳು, ದೇಶ – ವಿದೇಶದ ಗಣ್ಯರೂ ಸೇರಿದಂತೆ ಲಕ್ಷಾಂತರ ಜನರು ಪಥಸಂಚಲನ ಕಣ್ಮುಂಬಿಸಿಕೊಳ್ಳಲಿರುವ ಈ ಸಂಭ್ರಮದ ಘಳಿಗೆಯನ್ನು ದೂರದರ್ಶನ ಮತ್ತಿತರ ಮಾಧ್ಯಮಗಳ ಮೂಲಕ ಕೋಟ್ಯಾಂತರ ಮಂದಿ ವೀಕ್ಷಿಸಲಿದ್ದಾರೆ.

ಈ ಬಾರಿಯ ಸ್ತಬ್ಧ ಚಿತ್ರ ಮೆರವಣಿಗೆ ನಮ್ಮ ರಾಜ್ಯದ ನಾರಿ ಶಕ್ತಿಯ ಪ್ರದರ್ಶನ ಮತ್ತು ಹಸಿರು ಪರಿಸರದ ಮಹತ್ವ ಸಾರುವ ಸಂದೇಶದೊಂದಿಗೆ, ಕಾರವಾರ – ಅಂಕೋಲಾ ಕ್ಷೇತ್ರ, ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯದ ಹಿರಿಮೆಗೆ ಸಾಕ್ಷಿ ಆಗಿ ಗಣರಾಜ್ಯೋತ್ಸವದ ಮೆರಗನ್ನು ಹೆಚ್ಚುವಂತೆ ಮಾಡಿರುವುದು ನಮಗೆಲ್ಲ ಹೆಮ್ಮೆ ಹಾಗೂ ಅಭಿಮಾನ ಮೂಡಿಸಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಸಂತಸ ವ್ಯಕ್ತಪಡಿಸಿ,ನಾಡಿನ ಹಾಗೂ ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಸಲ್ಲಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button