ಕುಮಟಾ: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕುಮಟಾ ತಾಲೂಕಿನ ಕೆನರಾ ಕಾಲೇಜು ಸೊಸೈಟಿಯ ಡಾ. ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯಕ್ಕೆ ಇದೇ ಏಪ್ರಿಲ್ 5 ಮತ್ತು 6 ರಂದು ನ್ಯಾಕ್ ತಂಡವು ಭೇಟಿ ನೀಡಲಿದ್ದು, ಈ ಕುರಿತಾಗಿ ಮಾಹಿತಿ ನೀಡಲು ಇಂದು ಡಾ. ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸುದ್ಧಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಸುದ್ಧಿಗೋಷ್ಠಿಯಲ್ಲಿ ಪ್ರಾಚಾರ್ಯರಾದ ಡಾ. ಎಸ್.ವಿ ಗಾಂವ್ಕರ ಅವರು ಮಾತನಾಡಿ, ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗದಿಂದ ಮಾನ್ಯತೆಗೊಳಗಾದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತಾ ಶ್ರೇಣಿಯನ್ನು ನೀಡುವ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮೌಲ್ಯಾಂಕನ ಸಮಿತಿ ಬೆಂಗಳೂರು ಇದರಿಂದ ನೇಮಿಸಲ್ಪಡುವ ಪರಿಣಿತರ ತಂಡವು ನಮ್ಮ ಮಹಾ ವಿದ್ಯಾಲಯಕ್ಕೆ ಇದೇ ಏಪ್ರಿಲ್ 5 ಮತ್ತು 6 ರಂದು ಭೇಟಿ ನೀಡಲಿದೆ.
ನಮ್ಮ ಮಹಾವಿದ್ಯಾಲಯವು ಈಗ 4 ನೇ ಆವರ್ತದ ನ್ಯಾಕ್ ಮೌಲ್ಯಮಾಪನ ಹಾಗೂ ಮೌಲ್ಯಾಂಕನದ ಪ್ರಕ್ರಿಯೆಗೆ ಒಳಪಡುತ್ತಿದೆ. ಕಳೆದ ಮೂರು ಆವರ್ತಗಳಲ್ಲಿ ನಮ್ಮ ಮಹಾವಿದ್ಯಾಲಯವು ಅನುಕ್ರಮವಾಗಿ ಬಿ++, ಎ ಹಾಗೂ ಎ ಶ್ರೇಣಿಯನ್ನು ಪಡೆದಿದೆ. ನ್ಯಾಕ್ ಪರಿಶಿಲನಾ ತಂಡವು ಕರ್ನಾಟಕೇತರ ರಾಜ್ಯಗಳ ಮೂವರು ಸದಸ್ಯರನ್ನು ಒಳಗೊಂಡಿರುತ್ತದೆ. ದೇಶದ ಯಾವುದೇ ರಾಜ್ಯದ ಒಂದು ವಿಶ್ವವಿದ್ಯಾಲಯದ ಉಪಕುಲಪತಿಗಳು ಪರಿಶೀಲನಾ ತಂಡದ ಮುಖ್ಯಸ್ಥರಾಗಿರುತ್ತಾರೆ. ಇನ್ನೊಬ್ಬ ಸದಸ್ಯರು ಒಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿರುತ್ತಾರೆ. ಮತ್ತೋರ್ವ ಸದಸ್ಯರು ಒಂದು ವಿಶ್ವವಿದ್ಯಾಲಯದ ಪ್ರಾಚಾರ್ಯರಾಗಿರುತ್ತಾರೆ ಎಂದು ಸಂಕ್ಷಿಪ್ತ ವಿವರಣೆ ನೀಡಿದರು. ಸುದ್ಧಿಗೋಷ್ಠಿಯಲ್ಲಿ ಕೆನರಾ ಕಾಲೇಜು ಸೊಸೈಟಿಯ ಕಾರ್ಯದರ್ಶಿಗಳಾದ ಹನುಮಂತ ಶಾನಭಾಗ, ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ಎನ್.ಕೆ ನಾಯಕ, ಉಪನ್ಯಾಸಕರಾದ ಪಿ.ಆರ್ ಪಂಡಿತ್, ಲೋಕೇಶ ಹೆಗಡೆ, ವಿ.ಡಿ ಭಟ್ ಹಾಜರಿದ್ದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ