ತೆಂಗಿನಕಾಯಿ ತುಂಬುವ ವೇಳೆ ನಡೆದ ಜಟಾಪಟಿ: ಅಕ್ಕ ಪಕ್ಕದ ತೋಟದ ಮಾಲೀಕರ ಮತ್ತು ಕುಟುಂಬದವರ ನಡುವೆ ಮಾರಾ -ಮಾರಿ
ತೆಂಗಿನಕಾಯಿ ಕೊಯ್ಯುವ ಸಂದರ್ಭದಲ್ಲಿ ಅಕ್ಕ ಪಕ್ಕದ ತೋಟಗಳ ಮಾಲಿಕರ ನಡುವೆ ಸಂಭವಿಸಿದ ಜಗಳ ಪರಸ್ಪರ ಹಲ್ಲೆ ಮಾರಾಮಾರಿಯ ವರೆಗೆ ಮುಂದುವರಿದು, ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾದ ಘಟನೆ ತಾಲೂಕಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಹೆಗ್ಗಾರ – ಕೋನಾಳದಲ್ಲಿ ನಡೆದಿದೆ. ಹೆಗ್ಗಾರ ನಿವಾಸಿ ಸುಬ್ರಹ್ಮಣ್ಯ ಶ್ರೀನಿವಾಸ ನಾಯ್ಕ ಎನ್ನುವವರ ತೋಟದಲ್ಲಿ ತೆಂಗಿನಕಾಯಿ ಕೊಯ್ಯುತ್ತಿರುವ ಸಂದರ್ಭದಲ್ಲಿ ಪಕ್ಕದ ತೋಟದಲ್ಲಿ ತೆಂಗಿನಕಾಯಿ ಬಿದ್ದ ಕಾರಣ ತೋಟದ ಮಾಲಿಕ ಸುರೇಶ ರಾಮಾ ಪಟಗಾರ (28), ಆತನ ಪತ್ನಿ ವಾಣಿ ಸುರೇಶ ಪಟಗಾರ ಎನ್ನುವವರು ಸೇರಿ ತೆಂಗಿನಕಾಯಿ ತುಂಬುತ್ತಿದ್ದ ಸುಬ್ರಹ್ಮಣ್ಯ ಅವರ ಮಾವ ನರಸಿಂಹ ಗೋವಿಂದ ನಾಯ್ಕ ಎನ್ನುವವರ ಮೇಲೆ ಕಟ್ಟಿಗೆಯ ದೊಣ್ಣೆ ಮತ್ತು ಕತ್ತಿಯಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದೇ ವೇಳೆ ತಪ್ಪಿಸಲು ಬಂದ ಅತ್ತೆ ಮೂಕಾಂಬಿಕಾ ನರಸಿಂಹ ನಾಯ್ಕ ಅವರನ್ನು ಎಳೆದು ಕಟ್ಟಿಗೆಯ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಮತ್ತು ಸುಬ್ರಹ್ಮಣ್ಯ ನಾಯ್ಕ ಅವರಿಗೂ ಅವಾಚ್ಯ ಶಬ್ದಗಳಿಂದ ಬಯ್ದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು, ಈ ಸಂಬAಧಿಸಿದAತೆ ಸುಬ್ರಹ್ಮಣ್ಯ ನಾಯ್ಕ ಅವರು ಆರೋಪಿತ ಸುರೇಶ ರಾಮಾ ಪಟಗಾರ ಮತ್ತು ಅವರ ಪತ್ನಿ ವಾಣಿ ಸುರೇಶ ಪಟಗಾರ ಎನ್ನುವವರ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬoಧಿಸಿದoತೆ ಪ್ರತಿದೂರು ದಾಖಲಾಗಿದ್ದು ಆರೋಪಿಗಳಾದ ಸುಬ್ರಹ್ಮಣ್ಯ ಶ್ರೀನಿವಾಸ ನಾಯ್ಕ, ನರಸಿಂಹ ಗೋವಿಂದ ನಾಯ್ಕ, ಭವ್ಯಾ ಸುಬ್ರಹ್ಮಣ್ಯ ನಾಯ್ಕ, ಮೂಕಾಂಬಿ ನರಸಿಂಹ ನಾಯ್ಕ ಅವರು ತಮ್ಮ ತೋಟದಲ್ಲಿ ತೆಂಗಿನಕಾಯಿ ಕೊಯ್ಯುತ್ತಿರುವ ಸಂದರ್ಭದಲ್ಲಿ ಸ್ವಲ್ಪ ತೆಂಗಿನಕಾಯಿ ಸುರೇಶ ರಾಮಾ ಪಟಗಾರ ಅವರ ತೋಟದಲ್ಲಿ ಬಿದ್ದ ಕಾರಣ ಆರೋಪಿತರೆಲ್ಲ ಸೇರಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ತಂತಿಬೇಲಿ ಹಾಕಿ ತೊಂದರೆ ನೀಡುತ್ತಿದ್ದೀರಿ, ಅದನ್ನು ತೆಗೆಯಿರಿ ಎಂದು ಎಷ್ಟು ಸಲ ಹೇಳುವುದು ಎಂದು ಕೇಳಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬಯ್ದು ಸುರೇಶ ಪಟಗಾರ ಮತ್ತು ಅವರ ಪತ್ನಿ ವಾಣಿ ಪಟಗಾರ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಕುರಿತು ದೂರಲಾಗಿದೆ. ದೂರು ಪ್ರತಿ ದೂರು ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಲ್ಲೆಗೊಳಗಾಗಿ ಮಾರಣಾಂತಿಕ ಗಾಯಗೊಂಡ ನರಸಿಂಹ ನಾಯ್ಕ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ