ಕರಾವಳಿಯಲ್ಲಿ ರಂಗೇರಿದ ಚುನಾವಣಾ ಕಾವು: ಮೀನುಗಾರ ಮತಗಳ ಮೇಲೆ ಕಣ್ಣಿಟ್ಟ ಬಿಜೆಪಿ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇನ್ನು ಬಿಜೆಪಿಯ ಭದ್ರಕೋಟೆಯಾಗಿರುವ ಕರಾವಳಿ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಮೀನುಗಾರ ಮತಗಳ ಮೇಲೆ ಕಣ್ಣಿಟ್ಟಿದೆ. ಪಕ್ಷದ ಅಭ್ಯರ್ಥಿಗಳ ಪರ ಮೀನುಗಾರರನ್ನ ಸೆಳೆಯೋದಕ್ಕೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮೀನುಗಾರ ಮುಖಂಡರು ಪ್ರಚಾರ ಪ್ರಾರಂಭಿಸಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ರಾಜ್ಯದಲ್ಲಿ ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಅಬ್ಬರದ ಪ್ರಚಾರವನ್ನ ಮಾಡಲಾಗುತ್ತಿದ್ದು ರಾಜಕೀಯ ಪಕ್ಷದ ನಾಯಕರುಗಳು ಅಧಿಕಾರಕ್ಕೆ ಬರಲೇ ಬೇಕು ಎಂದು ಪ್ರಯತ್ನ ನಡೆಸಿದ್ದಾರೆ. ಇನ್ನು ಕರಾವಳಿ ಜಿಲ್ಲೆಯಲ್ಲಿ ಮೀನುಗಾರ ಮತಗಳ ಮೇಲೆ ಬಿಜೆಪಿ ಮತ್ತೆ ಕಣ್ಣಿಟ್ಟು ಪ್ರಚಾರಕ್ಕೆ ಇಳಿದಿದೆ. ಕರಾವಳಿ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗುತ್ತದೆ. ಅದರಲ್ಲೂ ಮೀನುಗಾರರ ಮತಗಳು ಹೆಚ್ಚಾಗಿ ಬಿಜೆಪಿ ಪರವೇ ಬರಲಿದ್ದು ಈ ಬಾರಿ ಮತ್ತೆ ಆ ಮತಗಳನ್ನ ಸೆಳೆಯೋದಕ್ಕೆ ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಕ್ಷೇತ್ರದಲ್ಲಿ ಮೀನುಗಾರ ಮುಖಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಟಾಸ್ಕ್ ನೀಡಲಾಗಿದೆ. ಮೀನುಗಾರ ಸಮುದಾಯಕ್ಕೆ ಪ್ರಮೋದ್ ಮಧ್ವರಾಜ್ ಸೇರಿದ್ದು ಈ ನಿಟ್ಟಿನಲ್ಲಿ ಮತಗಳನ್ನ ಪಕ್ಷದ ಅಭ್ಯರ್ಥಿಗಳತ್ತ ಬರುವಂತೆ ಮಾಡಲು ಪ್ರಚಾರದ ನೇತೃತ್ವವನ್ನ ವಹಿಸಲಾಗಿದೆ.

ಇನ್ನು ಕಾರವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಪರ ಪ್ರಮೋದ್ ಮಧ್ವರಾಜ್ ಪ್ರಚಾರಕ್ಕೆ ಇಳಿದಿದ್ದಾರೆ. ಕಾರವಾರ ಹಾಗೂ ಅಂಕೋಲಾ ತಾಲೂಕಿನಲ್ಲಿ ಪ್ರಚಾರ ನಡೆಸಿ, ನಂತರ ಕುಮಟಾ ಹಾಗೂ ಭಟ್ಕಳ ಕ್ಷೇತ್ರದ ಕರಾವಳಿಯಲ್ಲೂ ಮೀನುಗಾರರು ಹೆಚ್ಚಿರುವ ಪ್ರದೇಶದಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ಇನ್ನು ಮಧ್ವರಾಜ್ ಗೆ ಮೀನುಗಾರ ಸಮುದಾಯಕ್ಕೆ ಸೇರಿದ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಸಹ ಸಾಥ್ ನೀಡುತ್ತಿದ್ದು ಈ ಬಾರಿ ಸಹ ಮೀನುಗಾರರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೇ 3 ರಂದು ಪ್ರಧಾನಿ ನರೇಂದ್ರ ಮೋದಿ ಕಾರವಾರ ಕ್ಷೇತ್ರಕ್ಕೆ ಬರುತ್ತಿದ್ದು ಮೀನುಗಾರರನ್ನ ಹೆಚ್ಚಾಗಿ ಸೇರಿಸುವ ಕಾರ್ಯಕ್ಕೆ ಸಹ ಈ ಮೂಲಕ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸದ್ಯ ಬಿಜೆಪಿ ತಮ್ಮ ಸಾಂಪ್ರದಾಯಿಕ ಮತಗಳನ್ನ ಉಳಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದು ಈ ಬಾರಿ ಇದರಲ್ಲಿ ಯಶಸ್ವಿಯಾಗಲಿದೆಯೋ ಇಲ್ಲವೋ ಅನ್ನುವುದನ್ನ ಕಾದು ನೋಡಬೇಕಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version