ಅಂಕೋಲಾ: ಮೇ 3ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ,ಅಂಕೋಲಾಕ್ಕೆ ಆಗಮಿಸಲಿದ್ದು ತನ್ನಿಮಿತ್ತ ಕರಾವಳಿಯಲ್ಲಿ ಭದ್ರತೆ ದೃಷ್ಟಿಯಿಂದ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ ಅಂಕೋಲಾ ಪಟ್ಟಣ ವ್ಯಾಪ್ತಿಯ ಪೊಲೀಸ್ ಠಾಣೆ ಎದುರಿನ ಮುಖ್ಯ ಸರ್ಕಲ್ ಬಳಿ ಹಾಗೂ ಅಕ್ಕ ಪಕ್ಕದ ರಸ್ತೆಗಳ ಡಿವೈಡರ್ ಮತ್ತು ಲೈಟಿಂಗ್ ಕಂಬಗಳ ಬಳಿ ನಿಲ್ಲಿಸಲಾಗಿದ್ದ,ಮೋದಿ ಸೇರಿದಂತೆ ಅಮಿತ್ ಶಾ,ಜೆಪಿ ನಡ್ದ ಮತ್ತಿತರ ಘಟಾನುಘಟಿ ನಾಯಕರ ಕಟೌಟ್ ಗಳನ್ನು ರಾತ್ರಿಯ ವೇಳೆ ಅದಾರೋ ಹೊತ್ತೊಯ್ದಿದ್ದಾರೆ.
ಅಷ್ಟಕ್ಕೂ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವಿದ್ದರೂ,ಕೇಂದ್ರ ನಾಯಕರ ಕಟೌಟ್ ನೆಗೆಯುವ ಧೈರ್ಯ ಮಾಡಿದವರಾರು ಎನ್ನುವ ಪ್ರಶ್ನೆ ಅಲಲ್ಲಿ ಕೇಳ ಬರುತ್ತಿದೆ. ಈ ಘಟನೆ ಕೆಲ ಸ್ಥಳೀಯ ಪೊಲೀಸ್ ಸಿಬ್ಬಂದಿಗಳ ಗಮನಕ್ಕೆ ಬಂದಿದ್ದರೂ ಅವರೂ ಸುಮ್ಮನಿದ್ದದ್ದಾದರೂ ಏಕೆ ಎನ್ನುವ ಪ್ರಶ್ನೆ ಕೇಳಿ ಬಂದಿತ್ತಾದರೂ ಅಷ್ಟಕ್ಕೂ ಈ ಕಟೌಟ್ಗಳನ್ನು ರಾತೋ ರಾತ್ರಿ ಹೊತ್ತೈದವರು ಬಿಜೆಪಿ ಪಕ್ಷದ ವಿರೋಧಿಗಳಾಗಲಿ,ಇತರೆ ಯಾವುದೇ ಕಿಡಿಗೇಡಿಗಳಾಗದಿರುವುದು ಇಲ್ಲಿ ಗಮನಿಸಬೇಕಾದ ವಿಷಯವಾಗಿದ್ದು ಇದು ಪೊಲೀಸರಿಗೂ ಮನದಟ್ಟಾದಂತಿದೆ.
ಮೋದಿ ಪ್ರಚಾರ ಸಭೆಗೆ ಬರುವ ಹುಮ್ಮಸ್ಸಿನಲ್ಲಿ ಸ್ಥಳೀಯ ಕೆಲ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕರ ಕಟೌಟ್, ಪಕ್ಷದ ಬಂಟಿಗ್ಸ್, ಪತಾಕೆಗಳನ್ನು ಪಟ್ಟಣದ ಸರ್ಕಲ್ ಹಾಗೂ ಮುಖ್ಯ ರಸ್ತೆ ಅಂಚಿಗೆ ಅಳವಡಿಸಿದ್ದರಾದರೂ, ಈ ಕುರಿತಂತೆ ಅದಾವುದೋ ಕಾರಣದಿಂದ ಸ್ಥಳೀಯ ಸಂಸ್ಥೆಯ ಪರವಾನಿಗೆ ಪತ್ರ ಪಡೆದುಕೊಳ್ಳದಿರುವುದರಿಂದ, ಕರ್ತವ್ಯ ನಿರತ ಚುನಾವಣಾ ವೀಕ್ಷಕದಳದ ಸಿಬ್ಬಂದಿಗಳು ಮತ್ತು ಸ್ಥಳೀಯ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅನಧಿಕೃತ ಕಟೌಟ್,ಪತಾಕೆಗಳನ್ನು ತೆರವುಗೊಳಿಸಿ ತಮ್ಮ ವಾಹನದಲ್ಲಿ ತೆಗೆದುಕೊಂಡು ಹೋದ ಬಗ್ಗೆ ಮಾಹಿತಿ ಇದೆ.
ಇತ್ತೀಚೆಗೆ ಬಿಜೆಪಿ ಪಕ್ಷ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆಯ ವೇಳೆಯೂ ಪಟ್ಟಣದ ಹಲವೆಡೆ ಸಾರ್ವಜನಿಕ ಸ್ಥಳವೂ ಸೇರಿ ಹೆಚ್ಚಿನ ಪ್ರಮಾಣದಲ್ಲಿ ಫ್ಲೆಕ್ಸ್ ಅಳವಡಿಕೆ,ಬ್ಯಾನರ್ ಹಾಗೂ ಬಂಟಿಂಗ್ಸ್ ಮೂಲಕ ಸ್ವಾಗತ ಕೋರುವ ಉತ್ಸಾಹದಲ್ಲಿ ಪಟ್ಟಣವನ್ನೇ ಕೇಸರಿಮಯ ಮಾಡಲಾಗಿತ್ತು.ಈ ವೇಳೆ ಪುರಸಭೆಯ ಆಡಳಿತ ವೈಖರಿ ಕಣ್ಣಿದ್ದೂ ಕುರುಡಾಗಿತ್ತೆ ಎಂಬ ಬಗ್ಗೆಯೂ ಕೆಲವರು ಅಲ್ಲಲ್ಲಿ ಪ್ರಶ್ನೆ ಎತ್ತಿದ್ದರು ಎನ್ನಲಾಗಿದೆ.
ಆದರೆ ಅಂದು ಚುನಾವಣೆ ನೀತಿ ಸಂಹಿತೆ ಜಾರಿ ಆಗಿರಲಿಲ್ಲ. ಹೀಗಾಗಿ ಅಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದ್ದು,ಚುನಾವಣಾ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ವಿಷಯಗಳನ್ನು ಲಘುವಾಗಿ ಪರಿಗಣಿಸದೇ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಅನಿವಾರ್ಯತೆ ಅಧಿಕಾರಿಗಳ ಮೇಲಿರುತ್ತದೆ. ಈ ಮಟ್ಟಿಗೆ ಹೇಳುವುದಾದರೆ ಆಡಳಿತರೂಢ ಪಕ್ಷ ಎಂಬುದು ಗೊತ್ತಿದ್ದೂ, ಸಂಬಂಧಿಸಿದ ಅಧಿಕಾರಿ ವರ್ಗದವರು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸಿದಂತೆ ಇದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಈ ಹಿಂದೆ ರಾಹುಲ್ ಗಾಂಧಿಯವರು ಅಂಕೋಲಾಕ್ಕೆ ಬಂದಾಗ ಸುರಕ್ಷತೆ ದೃಷ್ಟಿಯಿಂದ ಅಳವಡಿಸಲಾಗಿದ್ದ ಬ್ಯಾರಿಕೇಡ್ ಗಳಿಗೆ, ದಾರಿಯುದ್ದಕ್ಕೂ ಕಾಂಗ್ರೆಸ್ ಚಿಹ್ನೆಗಳುಳ್ಳ ಪತಾಕೆ ಸರಗಳನ್ನು ಸುತ್ತಿ ಕಾಂಗ್ರೆಸ್ ಪಕ್ಷ ಸಹ ಇಂಥಹುದೇ ಅಡ್ಡ ಕತ್ತರಿ ಸನ್ನಿವೇಶದಲ್ಲಿ ಸಿಲುಕಿಕೊಳ್ಳುವಂತಾಗಿತ್ತು ಎಂದು ನೆನಪಿಸುವ ಸ್ಥಳೀಯ ಕೆಲವರು, ಅಧಿಕಾರಿಗಳ ಇಂತಹ ನಿಷ್ಪಕ್ಷಪಾತ ನಿಲುವು ಚುನಾವಣಾ ವ್ಯವಸ್ಥೆಯ ಕಟ್ಟುನಿಟ್ಟಿನ ಬಗ್ಗೆ ಜನರಲ್ಲಿ ಮತ್ತಷ್ಟು ಗೌರವ ತರುವಂತೆ ಪ್ರೇರೇಪಿಸುತ್ತದೆ.
ಇದೇ ವೇಳೆ ಯಾವುದೇ ರಾಜಕೀಯ ಪಕ್ಷಗಳಿರಲಿ ಅವರು ತಮ್ಮ ಪ್ರಚಾರದ ಸರಕುಗಳನ್ನು ಬೇಕಾಬಿಟ್ಟಿ ಅಳವಡಿಸುವ ಮುನ್ನ ಕಾನೂನಿನ ಪರಿಮಿತಿಯಲ್ಲಿ,ಸೂಕ್ತ ಪರವಾನಿಗೆ ಯೊಂದಿಗೆ ನಿಗದಿತ ಸ್ಥಳಗಳಲ್ಲಿ ಅಳವಡಿಸಿ ತಮ್ಮ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕೆನ್ನುವ ಮಾತು ಕೇಳಿಬಂದಿದೆ.ಒಟ್ಟಿನಲ್ಲಿ ವಿಶ್ವ ನಾಯಕ ಮೋದಿ ಹೋದಲ್ಲಿ ಬಂದಲ್ಲಿ ಸುದ್ದಿಯಾಗುವುದು ಅವರ ಜನಪ್ರಿಯತೆಯ ಜೊತೆ ಜೊತೆಯಲ್ಲೇ ಹಲವು ಬಾರಿ ಬಿಜೆಪಿಗೆ ಪುಕ್ಕಟೆ ಪ್ರಚಾರ ತಂದು ಕೊಡುವುದು ಅಷ್ಟೇ ಸತ್ಯ ಎನ್ನುವಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ