ಅಂಕೋಲಾ: ಮಂಗಳೂರು ರೈಲ್ವೆ ನಿಲ್ದಾಣದಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು, ದೂರದೂರಿನ ಪಯಣಕ್ಕೆ.ಟಿಕೆಟ್ ಪಡೆದುಕೊಳ್ಳಲು ಸಹಾಯ ಮಾಡುವುದಾಗಿ ನಂಬಿಸಿ ಕಾರವಾರದತ್ತ ಕರೆದುಕೊಂಡು ಬಂದು ಇಲ್ಲಿ ಅವಳ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ, ಅಂಕೋಲಾ ಮೂಲದ ಈರ್ವರು ಯುವಕರನ್ನು ವಶಕ್ಕೆ ಪಡೆದು,ಕೇಸ್ ದಾಖಲಿಸಲಾಗಿತ್ತು. ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಸಚಿನ್ ನಾಯ್ಕ ಮತ್ತು ಪ್ರವೀಣ್ ನಾಯ್ಕ್ ಎಂಬ ಇಬ್ಬರು ಆರೋಪಿತರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ ಕಳೆದ ವರ್ಷ ಏಪ್ರಿಲ್ 12 ರಂದು ಹರಿಯಾಣಕ್ಕೆ ಹೋಗುವ ಟಿಕೆಟ್ ಖರೀದಿಸಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿದ್ದ ವೇಳೆ , ಅವಳನ್ನು ಪರಿಚಯ ಮಾಡಿಕೊಂಡ ಅಂಕೋಲಾ ಮೂಲದ ಯುವಕರು, ಅವಳಿಗೆ ರೈಲ್ವೆ ಟಿಕೆಟ್ ಪಡೆದುಕೊಳ್ಳಲು ಸಹಾಯ ಮಾಡುವುದಾಗಿ ನಂಬಿಸಿ, ಮಂಗಳೂರಿನಿಂದ ರೈಲ್ವೆ ಮೂಲಕ ಅವಳನ್ನು ಕಾರವಾರದತ್ತ ಕರೆದುಕೊಂಡು ಬಂದು ಮನೆ ಹಾಗೂ ನಂತರ ಲಾಡ್ಜ್ ನಲ್ಲಿ ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ. ಎರಡು ದಿನಗಳ ಬಳಿಕ ಪುನಃ ಮಂಗಳೂರು ರೈಲು ನಿಲ್ದಾಣದಲ್ಲಿ ಬಾಲಕಿಯನ್ನು ಬಿಟ್ಟು ಬಂದಿದ್ದರು ಎನ್ನಲಾಗಿದ್ದು, ಈ ವೇಳೆ ಬಾಲಕಿಯನ್ನು ಗಮನಿಸಿದ ರೈಲ್ವೆ ಪೊಲೀಸರು ಆಕೆಯನ್ನು ವಿಚಾರಿಸಿದ್ದು, ನೊಂದ ಬಾಲಕಿ ನಡೆದ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದಳು.
ಈ ಕುರಿತು ಪೊಲೀಸ್ ಪ್ರಕರಣ ದಾಖಲಾಗಿ , ಆರೋಪಿತ ಯುವಕರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಮುಂದುವರಿಸಲಾಗಿತ್ತು. ಪೋಕ್ಸೋ ಕಾಯಿದೆಯ ಕಲಂ 6 ರ ಅಡಿಯಲ್ಲಿ ಆರೋಪಿತ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ ರೂ.50 ಸಾವಿರ ದಂಡವನ್ನೂ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಸಂತ್ರಸ್ಥ ಬಾಲಕಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.ನ್ಯಾಯಾಲಯದ ತ್ವರಿತ ವಿಚಾರಣೆಯಿಂದ ಆರೋಪಿತರಿಗೆ ಕಠಿಣ ಶಿಕ್ಷೆಯಾಗಿದ್ದು, ಪೋಕ್ಸೊ ಪ್ರಕರಣದ ಗಂಭೀರತೆಯನ್ನು ಎತ್ತಿ ಹಿಡಿಯುವ ಮೂಲಕ,ಇಂತಹ ಕುಕೃತ್ಯ ಎಸಗುವವರಿಗೆ ಎಚ್ಚರಿಕೆಯ ಘಂಟೆ ಭಾರಿಸಿದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ