ದುಸ್ವಪ್ನ ಕಾಡಿ ಹಾಸಿಗೆಯಿಂದ ಬಿದ್ದ ಪತ್ನಿ: ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮರಣ: ಆಘಾತದಿಂದ ಗಂಡನೂ ಕುಸಿದು ಬಿದ್ದು ಸಾವು

ಅಂಕೋಲಾ: ದುಸ್ವಪ್ನ ಕಾಡಿ ಹಾಸಿಗೆಯಿಂದೆದ್ದು ಗಾಬರಿಗೊಂಡಿದ್ದ ಮನೆಯ ಯಜಮಾನತಿಯ ಆರೋಗ್ಯದಲ್ಲಿ ಹಠಾತ್ತನೆ ಏರುಪೇರಾದಾಗ, ಮನೆಯವರು ಅವಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ದಾರಿಮಧ್ಯೆ ತನ್ನ ಹೆಂಡತಿಯ ಸಾವಿನಿಂದ ಆಘಾತಗೊಂಡ ಗಂಡನೂ ಅಲ್ಲಿಯೇ ಕುಸಿದು ಬಿದ್ದು, ಬಾಳ ಸಂಗಾತಿಯೊಂದಿಗೇ ತನ್ನ ಬಾಳ ಪಯಣ ಮುಗಿಸಿದ್ದು, ಅನ್ಯೋನ್ಯ ಜೋಡಿಯ ಅಕಾಲಿಕ ಸಾವು ಅಮರ ಪ್ರೇಮ ಕಥೆಗಳ ಸಾಲಿನಲ್ಲಿ ಸೇರುವಂತಾಗಿದೆ.

KFCSC Recruitment: 386 ಹುದ್ದೆಗಳು: 83 ಸಾವಿರದ ವರೆಗೆ ಸಂಬಳ: ಪಿಯುಸಿ, ಪದವಿ ಆದವರು ಅರ್ಜಿ ಸಲ್ಲಿಸಿ

ಅಂಕೋಲಾ  ತಾಲೂಕಿನ ಬಬ್ರುವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಡಿಕುಳಿ ಗ್ರಾಮದಲ್ಲಿ  ಸಂಭವಿಸಿದ ಘಟನೆಯೊಂದು ವೃದ್ಧ ದಂಪತಿಗಳ ನಡುವಿನ ಪ್ರೀತಿ ಮತ್ತು ಅನ್ಯೋನ್ಯತೆಗೆ ಸಾಕ್ಷಿಯಂತಿದೆ. ದಿನ ಒಂದರಲ್ಲಿಯೇ ಒಬ್ಬರ ಬೆನ್ನಿಗೊಬ್ಬರು ಬಾರದ ಲೋಕಕ್ಕೆ ತೆರಳಿರುವುದು, ಮೃತರ ಕುಟುಂಬಸ್ಥರು ಮತ್ತು ಊರಿನಲ್ಲಿ ನೀರವ ಮೌನಕ್ಕೆ ಕಾರಣವಾಗಿದೆ. ಮಧು ರಾಮಾ ತಾಂಡೇಲ ಎನ್ನುವ ಅಂದಾಜು 75 ವರ್ಷ ವಯಸ್ಸಿನ ನಿವೃತ್ತ ಉದ್ಯೋಗಿಯೋರ್ವ, ತನ್ನ ಹೆಂಡತಿ ಶೋಭಾ ರಾಮಾ ತಾಂಡೇಲ ಹಾಗೂ ಮಕ್ಕಳು ಮತ್ತು ಮೊಮ್ಮೊಕ್ಕಳೊಂದಿಗೆ ಶೇಡಿಕುಳಿ ಗ್ರಾಮದಲ್ಲಿ ಸುಖ ಸಂಸಾರ ನಡೆಸಿಕೊಂಡಿದ್ದ. ಎಂದಿನಂತೆ ರಾತ್ರಿ ಊಟ ಮುಗಿಸಿ ಎಲ್ಲರೂ ಮಲಗಿದ್ದಾಗ , ಮನೆಯ ಯಜಮಾನತಿಗೆ ಅದೇನೋ ಕೆಟ್ಟ ಕನಸು ಬಿದ್ದಿದೆ.

ಕಾಡಿದ ದುಸ್ವಪ್ನದಿಂದ ಹಾಸಿಗೆಯಿಂದೆದ್ದು ತಡಬಡಾಯಿಸಿದ ಶೋಭಾ ತಾಂಡೇಲ, ಅತೀವ ಗಾಬರಿಗೊಂಡು,ಹಠಾತ್ತನೇ ಆರೋಗ್ಯದಲ್ಲಿ ಏರುಪೇರಾಗಿ ನಿಸ್ತೇಜಳಾದಳು ಎನ್ನಲಾಗಿದೆ.  ಗಂಡನಾದ ಮಧು ತಾಂಡೇಲ ತನ್ನ ಮಗ ಮತ್ತು ಸೊಸೆಯ  ಜೊತೆಗೂಡಿ ಖಾಸಗಿ ವಾಹನದಲ್ಲಿ ಶೋಭಾಳನ್ನು  ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವೇಳೆ,ದಾರಿ ಮಧ್ಯೆ ಬೇಳಾ ಬಂದರಿನ ಸರ್ಕಾರಿ ಐಟಿಐ ಕಾಲೇಜು ಬಳಿ ಮನಕಲಕುವ  ಘಟನೆಯೊಂದು ನಡೆದು ಹೋಗಿದೆ. ತನ್ನ ಎದೆಗೊರಗಿಕೊಂಡಿದ್ದ ಹೆಂಡತಿಯ ಉಸಿರು ನಿಂತು ಹೋಗಿರುವುದು   ಗಮನಕ್ಕೆ ಬರುತ್ತಲೇ, ನೋವು ತಾಳಿಕೊಳ್ಳದ ಆತನ ಹೃದಯ ಭಾರವಾಗಿ ಅಲ್ಲೇ ಪಕ್ಕಕ್ಕೆ ವಾಲಿದ ಎನ್ನಲಾಗಿದೆ.

ಅಚಾನಕ್ ಆಗಿ ನಡೆದ ಈ ಹೃದಯ ವಿದ್ರಾವಕ ಘಟನೆಯಿಂದ ಮತ್ತಷ್ಟು ಆತಂಕಿತರಾದ ಮನೆಯವರು, ಅವರೀರ್ವರನ್ನೂ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ  ಇಬ್ಬರ ಪ್ರಾಣವೂ ಹೋಗಿದೆ ಎಂದು ವೈದ್ಯರು ತಿಳಿಸಿದರು ಎನ್ನಲಾಗಿದೆ. ಚಂದ್ರಕಾಂತ ಸೇರಿದಂತೆ ಊರ ಪ್ರಮುಖರು ಮತ್ತಿತರರಿಗೆ ಈ  ಸುದ್ದಿ  ಗರಬಡಿದಂತೆ ಕೇಳಿ ಬಂದಿದೆ.ಆದರೆ ಅವರು ಬಂದು ನೋಡುವಷ್ಟರಲ್ಲಿ ಮತ್ತೇನೂ ಮಾಡಲಾಗದೇ , ಸಾವಿನಲ್ಲೂ ಒಂದಾದ ಹಿರಿಯ ಜೋಡಿಗೆ ಕೈ ಮುಗಿದು, ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವ ಅನಿವಾರ್ಯತೆ ಉಂಟಾಗಿದೆ. ನಂತರ ಅವರೀರ್ವರ ಮೃತದೇಹಗಳನ್ನು ಮನೆಗೆ ಸಾಗಿಸಿ, ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿವಿಧಾನ ನಡೆಸಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಈ ಹಿಂದೆ ಹೊನ್ನಾವರ , ಮಂಗಳೂರು, ತದಡಿ, ಕಾರವಾರದ ಸಾಗರ ಮತ್ಸ್ಯಾಲಯ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿ ನಿವೃತ್ತರಾಗಿರುವ ತನ್ನ ತಂದೆ ಹಾಗೂ ಅವರ  ಸೇವಾ ನಿವೃತ್ತಿ ನಂತರವೂ ಪ್ರತಿದಿನ – ಪ್ರತಿಕ್ಷಣ ತನ್ನ ತಂದೆ – ಮತ್ತು ತಾಯಿಯ  ಪ್ರೀತಿ –  ಅನ್ನೋನ್ಯತೆ ಕುರಿತು ಅವರ ಮಗ  ಸ್ಥಳೀಯ  ಗ್ರಾ ಪಂ ಸಿಬ್ಬಂದಿ ಶಿವಾನಂದ ತಾಂಡೇಲ ಮೆಲುದನಿಯಲ್ಲೇ ಮಾತನಾಡಿ , ಹೆತ್ತವರ ಗುಣಗಾನ ಸ್ಮರಿಸಿ, ಭಾವುಕನಾದ.

ಒಟ್ಟಿನಲ್ಲಿ ಗಂಡ ಹೆಂಡಿರಿಬ್ಬರೂ ತಮ್ಮ ಸುದೀರ್ಘ ದಾಂಪತ್ಯ ಬದುಕಿನಲ್ಲಿ  ಸುಖ ಸಂತೋಷ ಹಾಗೂ ನೆಮ್ಮದಿಯಿಂದಿದ್ದವರು , ಬಿಪಿ – ಶುಗರನಂತಹ ಖಾಯಿಲೆಗೂ  ಮಾತ್ರೆ ತೆಗೆದುಕೊಳ್ಳಬೇಕಾದ ಇಂದಿನ ಜನರ ಬದುಕಿನ ಅನಿವಾರ್ಯತೆ ನಡುವೆ ಯಾವುದೇ ರೋಗ ಬಾಧೆಗಳಿಲ್ಲದಿದ್ದರೂ ಒಮ್ಮೇಲೆ ಇಬ್ಬರೂ ಕಾಲವಶರಾಗಿರುವುದು ವಿಧಿಯಾಟವೇ ಸರಿ. ಕೆಟ್ಟದ್ದೇ ಇರಲಿ ಒಳ್ಳೆಯದೇ ಇರಲಿ ಹಲವು ಕನಸುಗಳು ನಿಜವಾಗುತ್ತವೆ ಎನ್ನುವ ಮಾತಿದೆ ಅಂತೆಯೇ  ಈ ಕುಟುಂಬದ ಯಜಮಾನತಿಗೆ ಕಾಣಿಸಿಕೊಂಡ ಅದಾವುದೋ ದುಸ್ವಪ್ನ : ಹಿರಿಯರಿಬ್ಬರ ಅಕಾಲಿಕ ಸಾವಿನ  ಮೂಲಕ ಸುದ್ದಿಯಾಗುವಂತಾಗಿದೆ. ಅಂತೆಯೇ ಸಾವಿನಲ್ಲೂ ಒಂದಾದ ಸತಿ-ಪತಿಗಳು ಅಮರ ಪ್ರೇಮ ಕಥೆಗಳ ಸಾಲಿನಲ್ಲಿ ಸೇರಿಸಿದಂತಾಗಿದೆ.     

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version