ಕಾರವಾರ: ಕರಾವಳಿಯಲ್ಲಿ ವರುಣನ ಆರ್ಭಟ ಜೋರಾಗಿದ್ದರೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇನ್ನೂ ಕೂಡ ಮಳೆಯ ಪ್ರವೇಶವೇ ಆಗಿಲ್ಲ. ಪರಿಣಾಮ ಮಳೆಕೊರತೆ ಹಾಗೂ ತಾಪಮಾನ ಹೆಚ್ಚಳದಿಂದಾಗಿ ಬೆಳೆಗಳ ಇಳುವರಿ ಕುಂಠಿತಗೊoಡು ಬಹುತೇಕ ತರಕಾರಿ, ಹಣ್ಣು ಹಾಗೂ ಸೊಪ್ಪಿನ ಬೆಲೆ ದುಪ್ಪಟ್ಟಾಗಿದೆ. ಮಾತ್ರವಲ್ಲದೆ ಟೊಮೆಟೊ ಬೆಲೆ ಶತಕ ತಲುಪಿರುವುದು ಇದೀಗ ಜನ ಈ ಕೆಂಪು ಸುಂದರಿ ಮುಟ್ಟುವುದಕ್ಕೂ ಯೋಚನೆ ಮಾಡುವಂತಾಗಿದೆ.
ರಾಜ್ಯದ ಕರಾವಳಿಯಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಮಳೆಯಾಗತೊಡಗಿದೆ. ಆದರೆ ಇದೇ ಮಳೆ ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲ್ಬಾಗದಲ್ಲೂ ಆಗಿಲ್ಲ. ಅದರಲ್ಲಿಯೂ ಬಯಲು ಸೀಮೆ ಹಾಗೂ ಉತ್ತರಕರ್ನಾಟಕ ಭಾಗದಲ್ಲಿ ಮಳೆಯೇ ಆಗದ ಪರಿಣಾಮ ಇದೀಗ ತರಕಾರಿ ಇಳುವರಿ ಕುಂಠಿತಗೊoಡು ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟಾಗುವಂತಾಗಿದೆ.
ಸರ್ಕಾರ ಗ್ಯಾರೆಂಟಿ ಯೋಜನೆಗಳ ಹೆಸರಿನಲ್ಲಿ ಅನೇಕ ಉಚಿತ ಭಾಗ್ಯಗಳನ್ನ ಘೋಷಿಸಿದೆ. ಪ್ರಯಾಣ, ಪಡಿತರ, ವಿದ್ಯುತ್ ಉಚಿತ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ಈ ನಡುವೆ ಮಳೆಯ ಕೊರತೆ ಉಂಟಾಗಿ ಸರ್ಕಾರ ಪಡಿತರ ಉಚಿತವಾಗಿ ನೀಡಿದರೂ ಅಡುಗೆ ಮಾಡಲು ಬೇಕಾದ ತರಕಾರಿ, ಬೇಳೆಕಾಳುಗಳ ದರ ಏರಿರುವುದು ಉಚಿತ ಯೋಜನೆಗಳೂ ಲೆಕ್ಕಕ್ಕಿಲ್ಲದಂತೆ ಮಾಡಿದೆ. ಮಾರುಕಟ್ಟೆಗಳಲ್ಲಿ ಕಳೆದ ವಾರ 80 ರೂ ಇದ್ದ ಬೀನ್ಸ್ ಈ ಬಾರಿ 120 ರಿಂದ 150ರವರೆಗೆ ಮಾರಾಟ ಮಾಡಲಾಗುತ್ತಿದೆ. ಅದೇ ರಿತಿ ಟೊಮೆಟೋ 50 ಇದ್ದ ಟೊಮೆಟೋ ಇದೀಗ 100 ರೂಗೆ ತಲುಪಿದೆ. ಬೆಂಡೆಕಾಯಿ 30 ರಿಂದ 80ಕ್ಕೆ, ಕ್ಯಾಬೀಜ್ 10 ರಿಂದ 30ಕ್ಕೆ, ಕ್ಯಾರೆಟ್ 40 ರಿಂದ 60ಕ್ಕೆ, ಮೆಣಸು 50 ರಿಂದ 80ಕ್ಕೆ ಏರಿಕೆಯಾಗಿದೆ.
ಇನ್ನು ಸೊಪ್ಪುಗಳ ಬೆಲೆ ಕೂ ಹೆಚ್ಚಾಗಿದೆ. 180 ರೂ ಇದ್ದ ಸೇಬು ಬೆಲೆ ಇದೀಗ 240 ರಿಂದ 260 ರೂಗೆ ಮಾರಾಟ ಮಾಡಲಾಗುತ್ತಿದೆ. ದಾಂಳಿoಬೆ, 100 ರಿಂದ 180 ರೂಗೆ, ಕಿತ್ತಳೆ 100 ರಿಂದ 120 ರೂಗೆ ಏರಿಕೆ ಕಂಡಿದೆ. ಆದರೆ ಕಳೆದ ವಾರಕ್ಕೆ ಹೋಲಿಕೆ ಮಾಡಿದಲ್ಲಿ ಈ ಬಾರಿ 10 ರಿಂದ 100 ರೂವರೆಗೆ ಹಣ್ಣು ಹಾಗೂ ತರಕಾರಿಗಳ ಬೆಲೆ ಏರಿಕೆಯಾಗಿದೆ. ಇನ್ನು ಜಿಲ್ಲೆಯ ಕರಾವಳಿ ಭಾಗದಲ್ಲಿ ಕಳೆದ ಎರಡು ವಾರದಿಂದ ನಿರಂತರವಾಗಿ ಮಳೆಯಾಗತೊಡಗಿದೆ. ಆದರೆ ಉತ್ತರಕರ್ನಾಟಕ ಭಾಗಗಗಳಲ್ಲಿ ಮಳೆಯಾಗದ ಕಾರಣ ಮತ್ತು ತಾಪಮಾನ ಕೂಡ ಏರಿಕೆಯಾದ ಪರಿಣಾಮ ತರಕಾರಿ ಬೆಳವಣಿಗೆಯಲ್ಲಿ ಇಳುವರಿ ಕಡಿಮೆಯಾಗಿದೆ. ಇದರಿಂದ ಜಿಲ್ಲೆಯ ಮಾರುಕಟ್ಟೆಗಳಿಗೆ ಬಹುತೇಕ ತರಕಾರಿ ಪೂರೈಕೆ ಮಾಡುವ ಉತ್ತರಕರ್ನಾಟಕದ ಮಂದಿ ಮಹಾರಾಷ್ಟ್ರ ತಮಿಳುನಾಡಿನಿಂದ ದುಪಟ್ಟು ದರದಲ್ಲಿ ತಂದು ಇಲ್ಲಿ ಮಾರಾಟ ಮಾಡಬೇಕಾಗಿದೆ.
ಕರಾವಳಿ ಹೊರತುಪಡಿಸಿ ಬೇರೆ ಯಾವ ಜಿಲ್ಲೆಗಳಲ್ಲೂ ಸರಿಯಾಗಿ ಮಳೆಯಾಗದಿರುವುದು ಟೊಮ್ಯಾಟೊ ಸೇರಿದಂತೆ ಇತರ ತರಕಾರಿಗಳ ದರ ಏರುವಂತೆ ಮಾಡಿದ್ದು, ತರಕಾರಿ ಖರೀದಿಗೆ ವ್ಯಾಪಾರಸ್ಥರೊಂದಿಗೆ ಗ್ರಾಹಕರು ವಾಗ್ವಾದಕ್ಕಿಳಿಯುವಂತಾಗಿದೆ. ಇನ್ನು ಕರಾವಳಿಯಲ್ಲಿ ಈಗಾಗಲೇ ಮೀನುಗಾರಿಕೆ ನಿಷೇಧಿಸಿ ಒಂದು ತಿಂಗಳು ಕಳೆದಿದೆ. ಇನ್ನೂ ಒಂದು ತಿಂಗಳು ಮೀನಿಲ್ಲದೆ ತರಕಾರಿಯಲ್ಲೇ ಕರಾವಳಿ ಜನ ದಿನ ದೂಡಬೇಕಿದೆ. ಆದರೆ ಈ ನಡುವೆ ತರಕಾರಿ ದರ ಕೂಡ ಏರಿರುವುದು ಜೀವನ ದುಬಾರಿ ಎನ್ನುವಂತಾಗಿದೆ.
ಒಟ್ಟಿನಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎಂಬ ಗಾದೆಮಾತಿನಂತೆ, ಸರ್ಕಾರ ಬಡಜನರ ಜೀವನ ಸುಧಾರಣೆಗೆಂದು ಉಚಿತ ಯೋಜನೆಗಳನ್ನ ಘೋಷಿಸಿಯೂ ಮಾರುಕಟ್ಟೆಯಲ್ಲಿ ತರಕಾರಿ- ಬೇಳೆಕಾಳುಗಳ ದರ ಏರಿರುವುದು ಬಡಜನರ ಜೀವನ ಇನ್ನೂ ಸಂಕಷ್ಟದಲ್ಲೇ ಕಳೆಯುವಂತೆ ಮಾಡಿದೆ. ದುಡಿದ ಸಂಬಳವೆಲ್ಲ ಮಾರುಕಟ್ಟೆಯಲ್ಲೇ ಖಾಲಿಯಾಗುವಂತಾಗಿದೆ.
ವಿಸ್ಮಯ ನ್ಯೂಸ್, ಕಾರವಾರ