ಕುಮಟಾ: ತಾಲೂಕಿನ ಮೂರೂರು ಕಲ್ಲಬ್ಬೆ ಪಂಚಾಯತ ವ್ಯಾಪ್ತಿಯಲ್ಲಿ ಕಳೆದ 5 ದಿನಗಳಿಂದ ವಿದ್ಯುತ್ ಕಡಿತವಾಗಿದ್ದು, ಇದರಿಂದಾಗಿ ಗ್ರಾಮಸ್ಥರು ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ 5 ದಿನದಿಂದ ವಿದ್ಯುತ್ ಸಮಸ್ಯೆಯನ್ನು ಎದುರಿಸಿ ತಾಳ್ಮೆ ಕಳೆದುಕೊಂಡ ಗ್ರಾಮಸ್ಥರು ಇಂದು ಕುಮಟಾ ಕೆ.ಇ.ಬಿ ಕಚೇರಿಗೆ ಮುತ್ತಿಗೆ ಹಾಕಿ ವಿದ್ಯುತ್ ಸಮಸ್ಯೆ ಶೀಘ್ರವೇ ಭಗೆಹರಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಟಿ.ಪಿ ಹೆಗಡೆ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ಕಳೆದ 5 ದಿನಗಳಿಂದ ಮೂರೂರು ಕಲ್ಲಬ್ಬೆ ಪಂಚಾಯತ ವ್ಯಾಪ್ತಿಯ ಜನರು ಕರೆಂಟ್ ಸಮಸ್ಯೆಯಿಂದ ತೊಂದರೆ ಅನುಭವಿಸುವಂತಾಗಿದೆ. ಈ ಕುರಿತಾಗಿ ಕೆ.ಇ.ಬಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರಗಳನ್ನು ನೀಡುತ್ತಾರೆ. ಇನ್ನು ಕೆಲವೇ ಘಂಟೆಗಳಲ್ಲಿ ವಿದ್ಯುತ್ ಸಮಸ್ಯೆ ಭಗೆಹರಿಯಬೇಕು. ಇಲ್ಲವಾದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸಬೇಕುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಸಾಮಾಜಿಕ ಹೋರಾಟಗಾರರು, ಜೆ.ಡಿ.ಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಅವರು ಮಾತನಾಡಿ, ಮಳೆಯು ಅತಿಯಾಗಿರುವಾಗ ಕರೆಂಟ್ ಸಮಸ್ಯೆ ಉಂಟಾಗುವುದು ಸಹಜ. ಆದರೆ ದುರಾದೃಷ್ಟ ಎಂಬAತೆ ಮೂರೂರು ಕಲ್ಲಬ್ಬೆ ಪಂಚಾಯತ ವ್ಯಾಪ್ತಿಯಲ್ಲಿ ಕಳೆದ 5 ದಿನಗಳಿಂದ ಜನರು ಕರೆಂಟ್ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ ಸಮಸ್ಯೆ ಕುರಿತಾಗಿ ಪ್ರಶ್ನಿಸಿದರೆ ಹಾರಿಕೆಯ ಉತ್ತರಗಳು ಕೇರಿಬರುತ್ತಿದೆ. ಯಾವ ಸಮಸ್ಯೆಯಿಂಗಿ ವಿದ್ಯುತ್ ವ್ಯತ್ಯಯವಾಗಿದೆ ಎಂಬುದಾಗಿಯೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಇದು ಖಂಡಿತವಾಗಿಯೂ ಹೆಸ್ಕಾಂ ಇಲಾಖೆಯ ವೈಫಲ್ಯವಾಗಿದ್ದು, ಸಮಸ್ಯೆಯನ್ನು ಕೂಡಲೇ ಸರಿಪಡಿಸಿ. ಇಲ್ಲವಾದಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಸ್ಥಳಕ್ಕಾಗಮಿಸಿ ಸಮಸ್ಯೆಯನ್ನು ಆಲಿಸಿದರು. ವಿದ್ಯುತ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಎಂದು ಅಧಿಕಾರಿಗಳಿಗೆ ತಾಖೀತು ಮಾಡಿದರು. ಅಂತೆಯೇ ಮೂರೂರು ಕಲ್ಲಬ್ಬೆ ಪಂಚಾಯತ ವ್ಯಾಪ್ತಿಯ ಸೆಕ್ಷನ್ ಆಫಿಸರನ್ನು ಇದೇ ವೇಳೆ ತರಾಟೆಗೆ ತೆಗೆದುಕೊಂಡರು. ವೇಳೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಹಾಜರಿದ್ದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ