ಆಗಸ್ಟ್ 2 ರಂದು ಬೆಳಿಗ್ಗೆ ಅಂಕೋಲಾದಲ್ಲಿ ಸೇನಾ ಯೋಧನಿಗೆ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ: 22 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳುತ್ತಿರುವ ವೀರಯೋಧ

ಅಂಕೋಲಾ: ಎರಡು ದಶಕಗಳಿಗೂ ಹೆಚ್ಚು ಕಾಲ ದೇಶ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸುತ್ತಿರುವ,ಯೋಧನಿಗೆ ಹೆಮ್ಮೆ ಹಾಗೂ ಅಭಿಮಾನದಿಂದ ಸ್ವಾಗತಿಸಲು ಸ್ಥಳೀಯ ಗ್ರಾಮಸ್ಥರು,ತಾಲೂಕಿನ ಜನತೆ ಹಾಗೂ ದೇಶಾಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ. ತಾಲೂಕಿನ ಬಬ್ರುವಾಡದ ನಾಗರಾಜ್ ನಾಗಪ್ಪ ನಾಯ್ಕ ಇವರು, 23 ಜುಲೈ 2001 ರಂದು ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡು, ಜಮ್ಮು ಕಾಶ್ಮೀರ,ರಾಜಸ್ಥಾನ್,ದೆಹಲಿ,ಅಸ್ಸಾಂ,ಹಿಮಾಚಲ ಪ್ರದೇಶ ಸೇರಿದಂತೆ ದೇಶದ ನಾನಾ ಕಡೆ ಸುದೀರ್ಘ 22 ವರ್ಷಗಳ ಕಾಲ ಸೇನೆಯ ವಿವಿಧ ಹಂತದ ಕರ್ತವ್ಯ ನಿರ್ವಹಿಸಿ,ತಾಯ್ನಾಡಿನ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

31 ಜುಲೈ 2023ರಂದು ಅವರ ಸೇವಾವಧಿ ಮುಕ್ತಾಯಗೊಂಡಿದ್ದು, ಆಗಸ್ಟ್ 2ರ ಬುಧವಾರ ಬೆಳಿಗ್ಗೆ ಹುಟ್ಟೂರಿಗೆ ಮರಳುತ್ತಿರುವ ಅವರಿಗೆ ಊರ ನಾಗರಿಕರು,ಗೆಳೆಯರ ಬಳಗ, ತಾಲೂಕಿನ ಜನತೆ, ಹಾಗೂ ದೇಶಾಭಿಮಾನಿಗಳು ಅದ್ದೂರಿ ಸ್ವಾಗತ ಕೋರಲು ಸಿದ್ಧತೆ ನಡೆಸಿದ್ದಾರೆ. ಆಗಸ್ಟ್ 2 ರಂದು ಬೆಳಿಗ್ಗೆ 9.30 ಕ್ಕೆ ಬಸ್ ನಿಲ್ದಾಣದ ಹತ್ತಿರದ ಸ್ವಾತಂತ್ರ್ಯ ಸ್ಮಾರಕ ಭವನದಿಂದ ಬೈಕ್ ರ್ಯಾಲಿ ಹೊರಟು, ಭಾರತ ಮಾತೆಯ ಜಯಘೋಷಗಳೊಂದಿಗೆ , ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ, ಹಾರ ತುರಾಯಿ ಸಮರ್ಪಿಸಿ,ಹುಟ್ಟೂರು ಬಬ್ರುವಾಡದ ಮನೆವರೆಗೆ ಅದ್ದೂರಿ ಮೆರವಣಿಗೆ ಮೂಲಕ ಕರೆದೊಯ್ದು , ತಾಲೂಕಿನ ಪರವಾಗಿ ಭವ್ಯ ಸ್ವಾಗತ ಕೋರಲು ಸಿಧ್ಧತೆ ನಡೆಸಿದ್ದಾರೆ.ತಾಲೂಕಿನ ಜನತೆ, ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇಶಾಭಿಮಾನ ಮೆರೆದು,ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version