Focus News
Trending

ಮುಕ್ತಿಧಾಮದ ಸಮಸ್ಯೆಗಳಿಗೆ ಮುಕ್ತಿಯ ಭರವಸೆ ನೀಡಿದ ಮುಖ್ಯಾಧಿಕಾರಿ: ಆಗಸ್ಟ್ 15 ರಂದು ನಡೆಸಬೇಕೆಂದಿದ್ದ ಸಾಂಕೇತಿಕ ಪ್ರತಿಭಟನೆ ಹಿಂಪಡೆದ ಸಾಮಾಜಿಕ ಕಾರ್ಯಕರ್ತ

ಅಂಕೋಲಾ : ಸ್ಮಶಾನದ ಶೆಡ್ ಮೇಲ್ಚಾವಣಿ ಹೊದಿಕೆ ಹಾರಿ ಹೋಗಿ 2 ತಿಂಗಳೆ ಕಳೆದರೂ ದುರಸ್ಥಿ ಕಾರ್ಯ ಕೈಗೊಳ್ಳದ್ದರಿಂದ ಮಳೆಗಾಲದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ಆಗುತ್ತಿರುವ ತೊಂದರೆ, ಹಂದಿಗಳ ಕಾಟ, ಗಬ್ಬು ನಾರುವ ಪರಿಸರ, ವಿದ್ಯುತ್ತ ದೀಪ, ನೀರು ಮತ್ತಿತರ ಕಾರಣಗಳಿಂದ ಪುರಸಭೆ ವ್ಯಾಪ್ತಿಯಲ್ಲಿರುವ ಕೋಟೆವಾಡದ ಹಿಂದೂ ಸ್ಮಶಾನ ಭೂಮಿ ( ಮುಕ್ತಿ ಧಾಮ) ಮತ್ತೆ ಸುದ್ದಿಯಾಗುವಂತಾಗಿತ್ತು. ಈ ಕುರಿತು ಪತ್ರಿಕೆ ಮತ್ತು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸ್ಮಶಾನದ ಅವ್ಯವಸ್ಥೆ ಕುರಿತು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ ನಾಯ್ಕ ಸೇರಿದಂತೆ ಇತರೆ ಕೆಲವರು ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿ, ಸಂಭಧಿತ ಪುರಸಭೆಯವರು ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿದ್ದರು.

ಪುರಸಭೆ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಮುಕ್ತಿಧಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಈ ವೇಳೆ ಇಲ್ಲಿನ ನಿರ್ವಹಣಾ ಕೊರತೆಯಿಂದ ಆಗುತ್ತಿರುವ ನಾನಾ ಸಮಸ್ಯೆಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು. ಇಲ್ಲಿನ ಕೆಲ ಸಮಸ್ಯೆಗಳನ್ನು ಕಣ್ಣಾರೆ ಕಂಡು ಮತ್ತು ಇನ್ನು ಕೆಲ ಸಮಸ್ಯೆಗಳ ಬಗ್ಗೆ ಆಲಿಸಿದ ಮುಖ್ಯಾಧಿಕಾರಿಗಳು, ಸ್ಮಶಾನ ಎನ್ನುವುದು ಶಿವಸಾನಿಧ್ಯ ಎನ್ನುವ ನಂಬಿಕೆ ಹಿಂದೂಗಳಲ್ಲಿದ್ದು, ಇಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಸ್ವಚ್ಛತೆ ನಮ್ಮ ಜವಾಬ್ದಾರಿಯಾಗಿದೆ. ಮುಂದಿನ 15 ದಿನಗಳ ಒಳಗಾಗಿ ಇಲ್ಲಿ ಸಂಬಂಧಿತ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಹಾಜರಿದ್ದು, ಒಟ್ಟಾರೆ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರಲ್ಲದೇ, ಮುಂದೆಯೂ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಈ ವೇಳೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ, ಇಲ್ಲಿನ ಹತ್ತೆಂಟು ಸಮಸ್ಯೆಗಳಿಂದ ನಾವೆಲ್ಲಾ ಅಸಮಾಧಾನಿತರಾಗಿದ್ದೆವು. ಮಾಧ್ಯಮದವರ ಮೂಲಕ ಕುಮಟಾ ಉಪವಿಭಾಗಾಧಿಕಾರಿಗಳಿಗೂ ಇಲ್ಲಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಲಾಗಿತ್ತು. ಎ ಸಿ ಅವರ ಮಾರ್ಗದರ್ಶನ ಮತ್ತು ಸೂಚನೆ ಮೇರೆಗೆ , ಪುರಸಭೆ ಮುಖ್ಯಾಧಿಕಾರಿಗಳು ಜನಪರ ಕಾಳಜಿ ಮತ್ತು ಜವಾಬ್ದಾರಿ ನಿರ್ವಹಣೆ ಉದ್ದೇಶದಿಂದ, ಈ ದಿನ ಸ್ಥಳ ಪರಿಶೀಲಿಸಿದ್ದು, ಮುಕ್ತಿಧಾಮದ ಸಮಸ್ಯೆಗೆ ಮುಕ್ತಿ ಕಾಣುವ ಭರವಸೆ ವ್ಯಕ್ತವಾಗಿದೆ. ಹಾಗಾಗಿ ಈ ಹಿಂದೆ ನಾವು ಕೆಲವರು ಅಂದುಕೊಂಡತೆ ಆಗಸ್ಟ್ 15 ರಂದು ಪುರಸಭೆ ಎದುರು ಹಮ್ಮಿಕೊಳ್ಳಬೇಕೆಂದು ಬಯಸಿದ್ದ ಸಾಂಕೇತಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈ ಬಿಡುತ್ತಿದ್ದೇವೆ. ಮತ್ತು ಸ್ಮಶಾನ ಸ್ವಚ್ಚತೆ ಮತ್ತಿತರ ವಿಷಯಗಳಲ್ಲಿ ಪುರಸಭೆಯವರಿಗೆ ಸ್ವಯಂ ಪ್ರೇರಿತರಾಗಿ ಸಹಕಾರ ನೀಡಲು ಬದ್ಧರಿದ್ದೇವೆ ಎಂದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button