Special
Trending

White Python: ದೇಶದಲ್ಲೇ ಅತಿದೊಡ್ಡ ಬಿಳಿ ಹೆಬ್ಬಾವು ಪ್ರತ್ಯಕ್ಷ

ಕುಮಟಾ: ದೇಶದಲ್ಲಿಯೇ ಮೊದಲಭಾರಿ ಎನ್ನುವಂತೆ ಅತಿ ಉದ್ದವಾದ ಬಿಳಿ ಹೆಬ್ಬಾವು (White Python) ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಪ್ರತ್ಯಕ್ಷವಾಗಿದೆ. ಈ ಒಂದು ಹಾವನ್ನು ಉರಗ ತಜ್ಞ ಸ್ನೇಕ್ ಪವನ್ ರಕ್ಷಣೆ ಮಾಡಿದ್ದಾರೆ. ಇಂತಹ ಹಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆಯಾಗಿದ್ದು, ಅದರಲ್ಲಿ 2 ಭಾರಿ ಕುಮಟಾದಲ್ಲೇ ರಕ್ಷಣೆಯಾಗಿದ್ದು ವಿಶೇಷವಾಗಿದೆ. ಕಳೆದ ವರ್ಷ ಇಂತಹುದ್ದೆ ಬಿಳಿ ಹೆಬ್ಬಾವನ್ನು ರಕ್ಷಿಸಲಾಗಿತ್ತು. ಆದರೆ ಈ ಭಾರಿ ರಕ್ಷಣೆಯಾದ ಹೆಬ್ಬಾವು ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವಾಗಿದ್ದು, ಕಳೆದ ಬಾರಿಗಿಂತ ಬಹುತೇಕ 3 ಪಟ್ಟು ದೊಡ್ಡ ಗಾತ್ರದ ಹೆಬ್ಬಾವು ಇದಾಗಿದೆ. 

ಕುಮಟಾ ತಾಲೂಕಿನ ಹೆಗಡೆಯ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಅಪರೂಪದ ೯.೫ ಅಡಿ ಉದ್ದದ ಬಿಳಿ ಹೆಬ್ಬಾವು (White Python) ಪತ್ತೆಯಾಗಿದ್ದು, ಸ್ಥಳೀಯರ ಕೆರೆಯ ಮೇರೆಗೆ ಸ್ಥಳಕ್ಕಾಗಮಿಸಿದ ಉರಗ ತಜ್ಞ ಸ್ನೇಕ್ ಪವನ್ ನಾಯ್ಕ ಅವರು ಈ ಒಂದು ಹಾವನ್ನು ರಕ್ಷಣೆ ಮಾಡಿದ್ದು, ಕುಮಟಾ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಅವರ ಸಮ್ಮುಖದಲ್ಲಿಯೇ ಇದೀಗ ಹಾವನ್ನು ಚಿಕಿತ್ಸೆಗಾಗಿ ಮೈಸೂರು ಜೂಗೆ ಕಳುಹಿಸಲಾಗಿದೆ.

ಈ ಸಂಭoದ ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಉರಗ ತಜ್ಞ ಸ್ನೇಕ್ ಪವನ್ ಮಾತನಾಡಿ, ಬಿಳಿ ಹೆಬ್ಬಾವು ಬೇರೆ ತಳಿಯ ಹಾವುಗಳಲ್ಲ. ಹಾವುಗಳ ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಥವಾ ಮೆಲಾಲಿನ್ ಪಿಗ್ಮೆಂಟ್ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಹೀಗೆ ಚರ್ಮ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಹಾವುಗಳು ಪತ್ತೆಯಾದಲ್ಲಿ ಯಾರೂ ಸಹ ಭಯಗೊಳ್ಳಬಾರದು. ಅದನ್ನು ವಿಷದ ಹಾವೆಂದು ಕೊಲ್ಲಲೂ ಬಾರದು. ಇಂತಹ ಹಾವುಗಳಲ್ಲಿ ವಿಷವಿರುವುದಿಲ್ಲ. ಇದನ್ನು ರಕ್ಷಣೆ ಮಾಡುವ ಹೊಣೆ ನಮ್ಮದು. . ಇಂತಹ ಹಾವುಗಳು ಪತ್ತೆಯಾದಲ್ಲಿ ಅರಣ್ಯ ಇಲಾಖೆ ಅಥವಾ ನಮಗೆ ವಿಷಯ ತಿಳಿಸಿ ಎಂದು ಮನವಿ ಮಾಡಿದ್ದಾರೆ.

ಹಾವಿನ ರಕ್ಷಣೆಯ ಬಳಿಕ ಕುಮಟಾ ಅರಣ್ಯ ಇಲಾಖೆ ಸಹಕಾರದಿಂದ ಹಾವನ್ನು ಮೈಸೂರು ಜೂ ( Mysuru Zoo) ಗೆ ಕಳುಹಿಸಲಾಗಿದೆ. ಹಾವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಈ ನಿಟ್ಟಿನಲ್ಲಿ ಕಾಡಿನ ಬದಲಾಗಿ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ. ಡಿಎಫ್‌ಓ ರವಿಶಂಕರ್, ಏಸಿಎಫ್ ಜಿ.ಲೋಹಿತ್, ಆರ್‌ಎಫ್‌ಓ ಎಸ್.ಟಿ.ಪಟಗಾರ್, ಪ್ರವೀಣ ನಾಯಕ, ಡಿಆರ್‌ಎಫ್‌ಓ ಹೂವಣ್ಣ ಗೌಡ ಇತರರು ಇದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button