Focus News
Trending

Science Exhibition: ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ

ಗೋಕರ್ಣ: “ಜಾಗತೀಕರಣದ ಸಂಭ್ರಮದಲ್ಲಿ ತಂತ್ರಜ್ಞಾನದ ವಿಜಯ ಪತಾಕೆ ಹಿಡಿದು ನಿಂತವರು ನಾವು, ತಾಂತ್ರಿಕ ಶಿಕ್ಷಣದಲ್ಲಿಂದು ಜಗತ್ತು ಬೆರಗಾಗುವಂತೆ ಮುನ್ನಡೆದವರು ನಾವು, ಚಂದ್ರಯಾನ 3 ಯಶಸ್ಸಿನಿಂದ ಭಾರತ ವಿಜ್ಞಾನದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ” ಎಂದು ಮಾದನಗೇರಿಯ ಮಹಾಲಸಾ ಸಿದ್ದಿವಿನಾಯಕ ಟೆಂಪಲ್‌ಟ್ರಸ್ಟ್ನ ಧರ್ಮಾಧಿಕಾರಿ ಶ್ರೀ ಸುನೀಲ್ ಪೈ ನುಡಿದರು.

ಅವರು ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ ಮತ್ತು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಇವರ ಸಂಯುಕ್ತಾಶ್ರಯದಲ್ಲಿ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ನಡೆದ 2023-24ನೇ ಸಾಲಿನ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರಗೋಷ್ಟಿ, ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಎಂಬ ಪದವೇ ವಿಶಿಷ್ಟ ಹಾಗೂ ಅದ್ಭುತ ಇಡಿಯ ಜಗತ್ತಿನ ಆಗು-ಹೋಗುಗಳ ನಿರ್ಣಾಯಕವದು. ಹಿರೇಗುತ್ತಿ ಹೈಸ್ಕೂಲ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸುವಲ್ಲಿ ಎಲ್ಲರಿಗೂ ಮಾದರಿಯಾಗಿದೆ ಎಂದರು.

ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿದ ಹಿರೇಗುತ್ತಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶಾಂತಾ ಎನ್ ನಾಯಕ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ “ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯನ್ನು ಉತ್ತೇಜಿಸಿ ಜ್ಞಾನದಾಹವನ್ನು ಇಂಗಿಸುವ ಹೊಸ ವಿಷಯಗಳನ್ನು, ಆವಿಷ್ಕಾರಗಳನ್ನು ಅನ್ವೇಷಿಸಿ ಅದನ್ನು ವಿವರಿಸುವ ನಿಟ್ಟಿನಲ್ಲಿ ಮಾದರಿಯ ರೂಪ ನೀಡುವ ಕಾರ್ಯಕ್ರಮ ವಿಜ್ಞಾನ ನಾಟಕ, ವಿಜ್ಞಾನ ವಿಚಾರಗೋಷ್ಟಿ, ವಿಜ್ಞಾನ ವಸ್ತು ಪ್ರದರ್ಶನವಾಗಿದೆ” ಎಂದರು.

ವಿಜ್ಞಾನ ದೀಪ ಬೆಳಗಿಸಿ ಮಾತನಾಡಿದ ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ್ ಮಾತನಾಡಿ “ಜಗತ್ತಿನ ಪ್ರತಿ ಚರಾಚರಗಳ ಮೂಲ ವಿಜ್ಞಾನವೇ ಆಗಿದೆ…. ಕಣ್ಣಿಗೆ ಕಾಣದ, ಅರಿವಿಗೆ ಬಾರದ, ಕೆಲವೊಮ್ಮೆ ಗೌಪ್ಯವಾಗಿರುವ ವಿಜ್ಞಾನದ ಒಳಹರವುಗಳನ್ನು ಅನಾವರಣ ಮಾಡಿದಾಗ ಮಾತ್ರ…..ಸತ್ಯಗ್ರಹಿತವಾಗುತ್ತದೆ. ವಿಜ್ಞಾನ ಎಂಬುವುದು ಜ್ಞಾನವಾಗಿ ವಿಸ್ತರಿಸುತ್ತದೆ” ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಲಾ ಮುಖ್ಯಾಧ್ಯಾಪಕರಾದ ರೋಹಿದಾಸ ಗಾಂವಕರ ಮಾತನಾಡಿ “ನಾಗರೀಕತೆಯ ನೆಲೆವಿಡಾದ ಹಿರೇಗುತ್ತಿಯಲ್ಲಿ ಶಿಕ್ಷಣ ಇಲಾಖೆ ನಿರ್ದೇಶನದಂತೆ ವಿಜ್ಞಾನ ವಿಚಾರ ಗೋಷ್ಟಿ, ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನ ನಾಟಕ ಸ್ಪರ್ಧೆ ನಮ್ಮ ಶಾಲೆಯಲ್ಲಿ ಆಯೋಜಿಸಿದ್ದೇವೆ ಇಂತಹ ಕಾರ್ಯಕ್ರಮ ನಡೆಯಲು ಆಡಳಿತ ಮಂಡಳಿ, ಸಮುದಾಯದ ಸಹಭಾಗಿತ್ವ ಸಹಕಾರ ಅತೀ ಮುಖ್ಯ” ಎಂದರು.

ಮುಕ್ತಾ ನಾಯಕ ಉಪನ್ಯಾಸಕರು ಡಯಟ್ ಕುಮಟಾ ಮಾತನಾಡಿ “ವಿಚಾರಗೋಷ್ಠಿಯ ವಿಷಯಗಳಾದ ಸಿರಿಧಾನ್ಯಗಳು- ಅದ್ಭುತ ಆಹಾರದ ಬಗ್ಗೆ ವಿವರಿಸಿದರು ಹಾಗೂ ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ನಿರೂಪಣೆ, ಸ್ವಾಗತ, ವಂದನಾರ್ಪಣೆಯನ್ನು ಅಚ್ಚುಕಟ್ಟಾಗಿ ವಿದ್ಯಾರ್ಥಿಗಳೇ ನಿರ್ವಹಿಸುವುದು ಹೊಸ ವಿನೂತನ ಪ್ರಯತ್ನವಾಗಿದ್ದು ಎಲ್ಲ ವಿದ್ಯಾರ್ಥಿಗಳಿಗೂ ಮಾದರಿ ಆಗಿದೆ” ಎಂದರು. ಆಡಳಿತ ಮಂಡಳಿ ಸದಸ್ಯರಾದ ಎನ್.ಟಿ ನಾಯಕ ಮಾತನಾಡಿ “ಪ್ರಯತ್ನದಿಂದ ಯಾವ ಕೆಲಸವನ್ನಾದರೂ ಮಾಡಿದಾಗ ಯಶಸ್ಸು ಸಾಧ್ಯ. ‘ಅಹಂಭಾವ’ ಎಂಬುದು ತಮ್ಮ ವಿವೇಚನೆಯನ್ನು ಅಡುವು ಇಡುತ್ತದೆ” ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಉದ್ದಂಡ ಬಿ ಗಾಂವಕರ ಶಿಕ್ಷಕರು ತದಡಿ, ನಾಗರಾಜ ಗಾಂವಕರ ಪ್ರಭಾರೆ ಪ್ರಿನ್ಸಿಪಾಲ್ ಹಿರೇಗುತ್ತಿ ಕಾಲೇಜು, ಜಯಶ್ರೀ ಪಿ ಶಿಕ್ಷಣ ಸಂಯೋಜಕರು ಕುಮಟಾ, ವೀಣಾ ನಾಯ್ಕ ಉಪನ್ಯಾಸಕರು ಡಯಟ್ ಕುಮಟಾ, ಸಿ.ಆರ್.ಪಿ ರೋಹಿದಾಸ ನಾಯ್ಕ ಉಪಸ್ಥಿತರಿದ್ದರು.

ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಜ್ಯ ಮತ್ತು ರಾಷ್ಟçಮಟ್ಟವನ್ನು ಪ್ರತಿನಿಧಿಸಿದ ಹೈಸ್ಕೂಲಿನ ಸಾಧಕ ವಿದ್ಯಾರ್ಥಿಗಳಾದ ಎಮ್.ಎಚ್ ನಿಶಾ, ಸಾನಿಕಾ ಜೆ ನಾಯ್ಕ, ಸುವರ್ಣ ಭಂಡಾರಕರ್‌ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಚೈತನ್ಯ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸುವರ್ಣ ಭಂಡಾರಕರ್ ಸರ್ವರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಶಿವಪ್ರಸಾದ ನಾಯಕ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿದ್ಯಾರ್ಥಿ ಪ್ರತಿನಿಧಿ ಪ್ರೀತಿ ನಾಯಕ ಸರ್ವರನ್ನೂ ವಂದಿಸಿದರು. ನಂತರ ವಿಜ್ಞಾನ ನಾಟಕ, ವಿಜ್ಞಾನ ವಿಚಾರಗೋಷ್ಟಿ, ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆದವು. ಹಿರೇಗುತ್ತಿ ಹೈಸ್ಕೂಲ್ ಶಿಕ್ಷಕ ವೃಂದದವರು, ನಿರ್ಣಾಯಕರು ಹಾಗೂ ಕುಮಟಾ ತಾಲೂಕಿನ ಹೈಸ್ಕೂಲ್ ಶಿಕ್ಷಕ ವೃಂದದವರು, ಊರ ನಾಗರಿಕರು, ಪಾಲಕ ವೃಂದದವರು, ವಿದ್ಯಾರ್ಥಿ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Back to top button