ರಸ್ತೆಯಲ್ಲಿ ಹೋಗುವ ವೇಳೆ ಮಹಿಳೆಯ ಮಾಂಗಲ್ಯ ಸರ ಹರಿದು ಪರಾರಿಯಾದ ದುಷ್ಕರ್ಮಿಗಳು

ರಸ್ತೆ ಪಕ್ಕ ಹೆಲ್ಮೆಟ್ ಧರಿಸಿ ನಿಂತುಕೊoಡಿದ್ದ ಅಪರಿಚಿತರು

ಅಂಕೋಲಾ: ಮನೆಗೆ ತೆರಳುತ್ತಿದ್ದ ಮಹಿಳೆಯೋರ್ವರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಹರಿದು ಪರಾರಿಯಾದ ಘಟನೆ ತಾಲೂಕಿನ ಹಟ್ಟಿಕೇರಿ  ನಿರಾಶ್ರಿತರ ಕಾಲನಿ ಬಳಿ ಸಂಭವಿಸಿದೆ. ಹಟ್ಟಿಕೇರಿ ನಿರಾಶ್ರಿತರ ಕಾಲನಿ ನಿವಾಸಿ ವಾಸಂತಿ ಚೂಡಾಮಣಿ ತಾಂಡೇಲ್ (64) ಎನ್ನುವವರು ಬೆಲೇಕೇರಿ ಮುಖ್ಯ ರಸ್ತೆ  ಕಡೆಯಿಂದ ಹಟ್ಟಿಕೇರಿಯ ತಮ್ಮ ಮನೆಯ ಕಡೆಗೆ ನಡೆದು ಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

ರಸ್ತೆಯ ಬದಿಯಲ್ಲಿ ಮೋಟಾರ್ ಬೈಕಿನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ನಿಂತಿದ್ದು ಇವರು ಮುಂದೆ ಹೋಗುತ್ತಿದ್ದಂತೆ ಒಬ್ಬ ವ್ಯಕ್ತಿ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಜಗ್ಗಿದ್ದು ಮಹಿಳೆ ಮಾಂಗಲ್ಯ ಸರದ ಮುಂದಿನ ಭಾಗವನ್ನು ರಕ್ಷಿಸಿಕೊಂಡಿದ್ದು ಆರೋಪಿಗಳು ಸುಮಾರು 80 ಸಾವಿರ ರೂಪಾಯಿ ಮೌಲ್ಯದ 20 ಗ್ರಾಂ ಮಾಂಗಲ್ಯಸರದ ಹಿಂಬದಿಯ ಭಾಗವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಆರೋಪಿತರು ಸಂಪೂರ್ಣ ಹೆಲ್ಮೆಟ್ ಧರಿಸಿ ಮುಖ ಕಾಣದಂತೆ ಬಂದು ರಸ್ತೆಯಲ್ಲಿ ನಿಂತಿದ್ದರು ಎನ್ನಲಾಗಿದ್ದು ಸಂಜೆ ಸಮಯದಲ್ಲಿ ಮಹಿಳೆ ಒಬ್ಬರೇ ಬರುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆಸಿದ್ದಾರೆ.  ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು , ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ,ಸಿಪಿಐ ಸಂತೋಷ ಶೆಟ್ಟಿ  ಸ್ಥಳ ಪರಿಶೀಲಿಸಿದರು. ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version