Important
Trending

ಅಂಗನವಾಡಿ ಸಮೀಪ 10 ಅಡಿ ಉದ್ದದ ಬೃಹತ್ ಹೆಬ್ಬಾವು: ಸ್ಥಳೀಯರೇ ನಡೆಸಿದರು ಕಾರ್ಯಾಚರಣೆ!

ಅಂಕೋಲಾ: ಅಂಗನವಾಡಿ ಕೇಂದ್ರವೊಂದರ ಹಿಂದುಗಡೆ ಅತೀಹತ್ತಿರದ ಪ್ರದೇಶದಲ್ಲಿ ಉದ್ದನೆಯ ಹೆಬ್ಬಾವು ಕಾಣಿಸಿಕೊಂಡು ಸುತ್ತಮುತ್ತಲಿನವರು ಕೆಲಕಾಲ ಆತಂಕಗೊಂಡಿದ್ದರು. ಸ್ಥಳೀಯ ಯುವಕರು ಮತ್ತು ಹಿರಿಯರು ಧೈರ್ಯದಿಂದ ಹೆಬ್ಬಾವು ಹಿಡಿದು,ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು.

ಅಂಕೋಲಾ ತಾಲೂಕಿನ ಬೆಳಾಂಬಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬೇರಹಿತ್ಲ ಗ್ರಾಮದ ಅಂಗನವಾಡಿ ಹಿಂಬದಿ ಅತಿ ಹತ್ತಿರದ ಪ್ರದೇಶದಲ್ಲಿ ಉದ್ದನೆಯ ಹೆಬ್ಬಾವೊಂದು ಕಾಣಿಸಿಕೊಂಡಿತ್ತು. ಪುಟಾಣಿ ಮಕ್ಕಳು ಮತ್ತಿತರರು ಓಡಾಡಿಕೊಂಡಿರುವ ಪ್ರದೇಶವಾದ್ದರಿಂದ ಸಹಜವಾಗಿಯೇ ಇದು ಅಂಗನವಾಡಿ ಸುತ್ತಮುತ್ತಲ ಪ್ರದೇಶದವರಲ್ಲಿ ಆತಂಕ ಉಂಟು ಮಾಡಿತ್ತು. ಈ ವೇಳೆಗೆ ಸ್ಥಳೀಯರೇ ಧೈರ್ಯ ತಂದುಕೊಂಡು ಹೆಬ್ಬಾವು ಹಿಡಿಯುವ ಕಾರ್ಯಾಚರಣೆಗಿಳಿದರು.

ಸ್ಥಳೀಯರಾದ ಮಾರುತಿ ಮಡಿವಾಳ, ದೇವೇಂದ್ರ , ಅಶೋಕ, ಹರೀಶ್, ಶಿವಾನಂದ, ಮಹೇಶ್, ಚಂದ್ರಶೇಖರ ಮಡಿವಾಳ ಮತ್ತಿತರರು ಹೆಬ್ಬಾವನ್ನು ಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡಿದರು.ಸುಮಾರು 10 ಅಡಿ ಉದ್ದದ ಈ ಹಬ್ಬವನ್ನು ಕೆಲವರು ಕುತೂಹಲದಿಂದ ಮತ್ತೆ ಕೆಲವರು ಆತಂಕದಿಂದ ದೂರದಿಂದಲೇ ನೋಡಿದರು. ಈ ಕುರಿತು ಸ್ಥಳೀಯ ಪ್ರಮುಖರಾದ ಚಂದ್ರು ಮಡಿವಾಳ ಮತ್ತು ಅಂಕೋಲಾ ಅರ್ಬನ್ ಬ್ಯಾಂಕ್ ನಿರ್ದೇಶಕ ಗೋವಿಂದರಾಯ ನಾಯ್ಕ ಇವರು ಲಕ್ಷ್ಮೇಶ್ವರದ ತಮ್ಮ ಗೆಳೆಯರ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಿದ್ದರು.

ಸುದ್ದಿ ತಿಳಿದ ವಲಯ ಅರಣ್ಯ ಅಧಿಕಾರಿ ಗಣಪತಿ ನಾಯಕ ಇವರು ತಮ್ಮ ಸಿಬ್ಬಂದಿಗಳನ್ನು ಅಂಬೇರ ಹಿತ್ಲಗೆ ಕಳಿಸಿಕೊಟ್ಟಿದ್ದರು. ಸ್ಥಳೀಯ ಬಿಟ್ ಫಾರೆಸ್ಟ್ರ ಸಿದ್ದಣ್ಣ ಹಾಗೂ ಗಾರ್ಡ್ ದಾಮೋದರ ಗೌಡ, ಸಿಬ್ಬಂದಿ ಗೋಣಿ ಮತ್ತಿತರರು ಸಾರ್ವಜನಿಕರು ಹಿಡಿದ ಹೆಬ್ಬಾವನ್ನು ತಮ್ಮ ವಶಕ್ಕೆ ತೆಗೆದು ಕೊಂಡು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟು ಬಂದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button