ಕಾರವಾರದಲ್ಲಿ ಕಿಚ್ಚು ಹೊತ್ತಿಸಿದ ಟನಲ್ ಹೋರಾಟ! ಟನಲ್ ಸಂಚಾರ ಆರಂಭಕ್ಕೆ ಒತ್ತಾಯಿಸಿ ಸ್ಥಳೀಯರಿಂದ ಬೃಹತ್ ಪ್ರತಿಭಟನೆ
ಪೊಲೀಸರೊಂದಿಗೆ ಪ್ರತಿಭಟನಾಕಾರರ ಮಾತಿನ ಚಕಮಕಿ
ಕಾರವಾರ: ರಾಜ್ಯದಲ್ಲಿ ಕಾವೇರಿ ಕಿಚ್ಚು ತೀವ್ರಗೊಂಡು ಕರ್ನಾಟಕ ಬಂದ್ ಮಾಡಿದ ಬೆನ್ನಲ್ಲೇ ಕಾರವಾರದಲ್ಲಿ ಟನಲ್ ಸಂಚಾರ ಪುನರಾರಂಭಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆದಿದೆ. ಮಳೆಗಾಲದಲ್ಲಿ ಸೋರಿಕೆಯಾಗುತ್ತಿದೆ ಎನ್ನುವ ಕಾರಣ ನೀಡಿ ಕಳೆದೆರಡು ತಿಂಗಳಿನಿಂದ ಟನಲ್‌ನಲ್ಲಿ ವಾಹನಗಳ ಸಂಚಾರವನ್ನ ಬಂದ್ ಮಾಡಿರೋದು ವಾಹನ ಸವಾರರು ಪರದಾಡುವಂತಾಗಿದೆ. ಹೀಗಾಗಿ ಟನಲ್ ತೆರೆಯುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದ್ದು ಒತ್ತಾಯಪೂರ್ವಕವಾಗಿ ಟನಲ್ ಎದುರಿನ ಬ್ಯಾರಿಕೇಡ್ ತೆಗೆಯಲು ಮುಂದಾಗಿದ್ದ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ಸಹ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದ ಟನಲ್‌ನಲ್ಲಿ ಸಂಚರಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದರು. ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಎರಡು ಸುರಂಗಗಳನ್ನ ನಿರ್ಮಿಸಲಾಗಿದ್ದು ಮಳೆಗಾಲದಲ್ಲಿ ಸೋರಿಕೆಯಾಗುತ್ತಿದೆ ಎನ್ನುವ ಕಾರಣಕ್ಕೆ ಕಳೆದೆರಡು ತಿಂಗಳಿನಿಂದ ಸಂಚಾರವನ್ನ ಬಂದ್ ಮಾಡಲಾಗಿದೆ.
ಟನಲ್ ಬಂದ್ ಆದ ಪರಿಣಾಮ ನಾಲ್ಕೈದು ಕಿಮೀ ಸುತ್ತುವರೆದು ವಾಹನ ಸವಾರರು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಪ್ರತಿನಿತ್ಯ ಓಡಾಟ ನಡೆಸುವವರು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಟನಲ್ ಸಂಚಾರ ಆರಂಭಿಸುವಂತೆ ಒಂದು ವಾರದ ಗಡುವು ನೀಡಿದ್ದರೂ ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆ ಎಂಎಲ್‌ಸಿ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಟನಲ್ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ರು. ಟನಲ್ ಸಂಚಾರ ಆರಂಭಿಸುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಕಾರವಾರ ಶಾಸಕ ಸತೀಶ್ ಸೈಲ್ ರಾಜಕೀಯ ಮಾಡುತ್ತಿದ್ದಾರೆ ಎಂದು ಎಂಎಲ್‌ಸಿ ಉಳ್ವೇಕರ್ ಆರೋಪಿಸಿದ್ದಾರೆ.
ಇನ್ನು ಮಳೆಯನ್ನೂ ಲೆಕ್ಕಿಸದೇ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಟನಲ್ ಎದುರು ಪ್ರತಿಭಟನೆ ನಡೆಸಿದ್ದು ಒತ್ತಾಯಪೂರ್ವಕವಾಗಿ ಟನಲ್ ಎದುರಿನ ಬ್ಯಾರಿಕೇಡ್ ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದ್ದು ಪ್ರತಿಭಟನಾಕಾರರನ್ನ ಬಂಧಿಸಲು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಟನಲ್ ಮುಕ್ತಗೊಳಿಸಲು ಸೂಚನೆ ನೀಡುವವರೆಗೆ ಪ್ರತಿಭಟನೆ ಸ್ಥಗಿತಗೊಳಿಸಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಟನಲ್ ಸಂಚಾರ ಪುನರಾರಂಭ ವಿಚಾರವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಸಭೆಗೆ ಅಧಿಕಾರಿಗಳು ಗೈರಾದ ಹಿನ್ನಲೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದ್ದು ಟನಲ್ ಸಂಚಾರ ಆರಂಭವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾರವಾರ, ಅಂಕೋಲಾ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೇ ಟನಲ್ ವಿಚಾರ ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಸಂಚಾರ ಆರಂಭಿಸಲು ನಾ ಕೊಡೆ, ನೀ ಬಿಡೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಟನಲ್ ಸಂಚಾರ ಬಂದ್ ಮಾಡಿಸಿರುವ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಬೇಡಿಕೆಯಂತೆ ಟನಲ್ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾ ಅನ್ನೋದನ್ನ ಕಾದುನೋಡಬೇಕು.
ವಿಸ್ಮಯ ನ್ಯೂಸ್, ಕಾರವಾರ