ಶಿರಸಿಯಲ್ಲಿ ಸ್ಕೊಡ್ವೆಸ್ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ : ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಿಂದ ಉದ್ಘಾಟನೆ

ಶಿರಸಿ: ಶಿಕ್ಷಣದ ಜೊತೆಗೆ ಕ್ರೀಡೆಯೂ ಸಹ ಮಹತ್ವಾದ್ದಾಗಿದೆ. ನಮ್ಮ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಅತ್ಯಂತ ಪರಿಣಾಮಕಾರಿ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನ ಇದ್ದರೆ ಮಾತ್ರ ಜೀವನದ ಎಲ್ಲಾ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ನಗರದ ಅರಣ್ಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ಕೊಡ್ವೆಸ್ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ತನ್ನ ಸಿಬ್ಬಂದಿಗಳ ಸಾಮರ್ಥ್ಯ ವೃದ್ಧಿಗಾಗಿ ಸ್ಕೋಡ್ವೆಸ್ ಈ ರೀತಿಯ ಕ್ರೀಡಾಕೂಟ ನಡೆಸುವುದು ಶ್ಲಾಘನೀಯ. ಜೊತೆಗೆ ಸ್ಕೋಡವೆಸ್ ಸಂಸ್ಥೆ ತನ್ನ ರಚನಾತ್ಮಕ ಕಾರ್ಯದ ಮೂಲಕ ದೇಶಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿ ಎಂದರು.

ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ವಾಸುದೇವ್ ಮಾತನಾಡಿ, ಸ್ಕೋಡ್ವೆಸ್ ಸಂಸ್ಥೆಯ ಕಾರ್ಯವೈಖರಿಯನ್ನು ಹಲವು ವರ್ಷದಿಂದ ಆತ್ಮೀಯವಾಗಿ ಗಮನಿಸುತ್ತಿದ್ದೇನೆ. ಮಹಿಳಾಸಬಲೀಕರಣ, ಸ್ವಯಂಉದ್ಯೋಗ, ಕೃಷಿ, ಪರಿಸರ ಸಂರಕ್ಷಣೆ ಬುಡಕಟ್ಟು ಜನಾಂಗದ ಅಭಿವೃದ್ಧಿ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಕಳೆದ 18 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ. ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಕ್ರೀಯಾಶೀಲ ಕೆಲಸದಿಂದ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಸಂಸ್ಥೆಯ ಎಲ್ಲ ಕೆಲಸಗಳಿಗೆ ಅವರು ಶುಭ ಕೋರುವುದಾಗಿ ಹೇಳಿದರು.

ಕ್ರೀಡಾಕೂಟದಲ್ಲಿ ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ 22 ಜಿಲ್ಲೆಯ ಸ್ಕೊಡ್ವೆಸ್ ಸಿಬ್ಬಂದಿಗಳು ಹಾಜರಿದ್ದರು. ಕ್ರೀಡಾಕೂಟದಲ್ಲಿ ಕ್ರಿಕೆಟ್, ಹಗ್ಗಜಗ್ಗಾಟ, ಕಬಡ್ಡಿ, ಲಗೋರಿ, ವಾಲಿಬಾಲ್ ಸೇರಿ ಹಲವಾರು ಕ್ರೀಡೆಗಳು ನಡೆದವು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ವಂದಿಸಿದರು.

ವಿಸ್ಮಯ ನ್ಯೂಸ್, ಶಿರಸಿ

Exit mobile version