Focus News
Trending

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಶಾಸಕ ದಿನಕರ ಶೆಟ್ಟಿಗೆ ಅನಂತಮೂರ್ತಿ ಮನವಿ

ಕುಮಟಾ: ಇದೇ ಬರುವ ಡಿಸೆಂಬರ್ 4 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕುಮಟಾದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತಂತೆ ವಿಷಯ ಪ್ರಸ್ತಾಪಿಸುವಂತೆ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ ಅವರಿಗೆ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಮನವಿ ಸಲ್ಲಿಸಿದರು.

ಇಂದು ಕುಮಟಾದಲ್ಲಿ ಶಾಸಕ ದಿನಕರ್ ಶೆಟ್ಟಿ ಅವರ ಗೃಹದಲ್ಲಿ ಭೇಟಿ ಮಾಡಿದ ಅವರು ಮನವಿ ಸಲ್ಲಿಸಿ, ತಾವು ಕಳೆದ ಅವಧಿಯಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ತಮ್ಮ ಸರ್ಕಾರದ ಗಮನ ಸೆಳೆದು, ಆಸ್ಪತ್ರೆ ಮಂಜೂರಾತಿ ಮಾಡಿಸಿದ ತಮ್ಮ ಪ್ರಯತ್ನ ಶ್ಲಾಘನೀಯ. ಹಾಗೂ ಅಂದಿನ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಕುಮಟಾಗೆ ಆಗಮಿಸಿ ಸ್ಥಳ ವೀಕ್ಷಣೆ ಮಾಡಿ ಎಲ್ಲಾ ರೀತಿಯಲ್ಲೂ ಮಂಜೂರಾತಿ ನೀಡಿದ್ದರು.

ಆದರೆ ಹೊಸ ಸರ್ಕಾರ ಬಂದ ನಂತರ ಈ ಪ್ರಕ್ರಿಯೆ ಸಂಪೂರ್ಣ ಸ್ಥಗಿತವಾಗಿದ್ದು ದುರದೃಷ್ಟಕರ. ನವೆಂಬರ್‌ 27 ರಿಂದ ಡಿಸೆಂಬರ್ 3 ರವರೆಗೆ ಶಿರಸಿಯ ತಹಶೀಲ್ದಾರ್ ಕಚೇರಿ‌ ಮುಂಭಾಗ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇನೆ.‌ ನಂತರ ಡಿಸೆಂಬರ್ 4 ರಂದು ಕರ್ನಾಟಕ ಸರ್ಕಾರದ ಚಳಿಗಾಲದ ಅಧೀವೇಶನ ನಡೆಯುವ ಬೆಳಗಾವಿಯ ಸುವರ್ಣಸೌಧದ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ ಮಾಡಲು ಇಚ್ಚಿಸಿದ್ದೇವೆ.

ಈ ನಿಟ್ಟಿನಲ್ಲಿ ತಾವುಗಳು ಇದೇ ಬರುವ ಡಿಸೆಂಬರ್ 4 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದು ಈ ಪ್ರಕ್ರಿಯೆಗೆ ಮತ್ತೆ ಮುರು ಚಾಲನೆ ನೀಡಲು ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ದಿನಕರ ಶೆಟ್ಟಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿ, ಸರ್ಕಾರದ ಗಮನ ಸೆಳೆಯುವಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಪರಮಾನಂದ ಹೆಗಡೆ, ಸಂತೋಷ ನಾಯ್ಕ ಬ್ಯಾಗದ್ದೆ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಕುಮಟಾ

Back to top button