Follow Us On

WhatsApp Group
Important
Trending

ಗಾಳಿಯಿಂದ ನೀರು ಉತ್ಪಾದಿಸುವ ಆಧುನಿಕ ತಂತ್ರಜ್ಞಾನಕ್ಕೆ ಹೆಚ್ಚಿದ ಬೇಡಿಕೆ: ಸರಕಾರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸಾಧನೆ

ಅಂಕೋಲಾ: ಇತ್ತೀಚೆಗೆ IIT ಮಡ್ರಾಸ್ ನವರು ಆವಿಷ್ಕರಿಸಿದ್ದ ವಾಯು ಜಲ ಎಂಬ ಮಶೀನ್,ಕೇವಲ ನಮ್ಮ ದೇಶದಲ್ಲಿ ಅಷ್ಟೇ ಅಲ್ಲದೇ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಜೋರಾದ ಸುದ್ದಿಗೆ ಕಾರಣವಾಗಿ,ವಾತಾವರಣದ ತೇವಾಂಶ ಹೀರಿಕೊಂಡು, ಶುದ್ಧ ನೀರು ತಯಾರಿಸುವ ಈ ಯಂತ್ರಕ್ಕೆ ಭಾರಿ ಬೇಡಿಕೆ ಕಂಡು ಬಂದಿದೆ. ಈ ನಡುವೆ ಅಂತಹದೇ ಮಾದರಿ ಬಳಸಿ ಕಡಿಮೆ ಖರ್ಚಿನಲ್ಲಿ,ಜೀವ ಜಲ ಪಡೆಯುವ ವಿಧಾನವನ್ನು, ಪ್ರದರ್ಶಿಸುವ ಮೂಲಕ ನಮ್ಮ ರಾಜ್ಯದಲ್ಲಿಯೇ, ಅದೂ ಸಹ ಉತ್ತರ ಕನ್ನಡ ಜಿಲ್ಲೆಯ ಸರಕಾರಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳ ಉತ್ತಮ ಸಾಧನೆ ತೋರ್ಪಡಿಸಿದ್ದಾರೆ.

ನಾನಾ ಕಾರಣಗಳಿಂದ ಜಲ ಮೂಲಗಳು ಬತ್ತಿ ಹೋಗುತ್ತಿದ್ದು,ಅಂತರ್ಜಲ ಮಟ್ಟ ಕಡಿಮೆಯಾಗಿ ಕುಡಿಯುವ ನೀರಿಗೂ ಹಲವಡೆ ಹಾಹಾಕಾರ ಕಂಡುಬರುತ್ತಿದೆ.ದಕ್ಷಿಣ ಆಫ್ರಿಕಾದ ರಾಜಧಾನಿ ಕೇಪ್ ಟೌನ್ ಜಗತ್ತಿನ ಮೊದಲ ನೀರು ರಹಿತ ನಗರವಾಗಿ ಗುರುತಿಸಿಕೊಂಡರೆ,ನಮ್ಮ ರಾಜಧಾನಿ ಬೆಂಗಳೂರಿನಲ್ಲಿಯೂ ಜಲಕ್ಷಾಮ ಎದುರಿಸುವುದು ಅತ್ಯಂತ ದೊಡ್ಡ ಸವಾಲಾಗಿದೆ.

ಮನುಕುಲದ ಉಳಿವು ಹಾಗೂ ಮುಂದಿನ ಪೀಳಿಗೆಗೆ ನೀರಿನ ಅನುಕೂಲತೆ ಒದಗಿಸುವ ದಿಶೆಯಲ್ಲಿ ಹಲವಾರು ರೀತಿಯ ಪ್ರಯೋಗಗಳು ನಡೆಯತೊಡಗಿವೆ. ದೇಶದ ಮೂರು ದಿಕ್ಕುಗಳಲ್ಲಿ ಸಮುದ್ರವೇ ಇದ್ದರೂ ,ಉಪ್ಪು ನೀರಿನ ಸಮಸ್ಯೆಯಿಂದ ಇಂದಿಗೂ ಹಲವೆಡೆ ಕುಡಿಯುವ ನೀರಿಗೂ ತತ್ವಾರ ಎನ್ನುವಂತಾಗಿದೆ.

ಈ ನಡುವೆ ನಮ್ಮ ಕಾರವಾರದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಾತಾವರಣದ ತೇವಾಂಶದಿಂದಲೇ ನೀರನ್ನು ಸಂಗ್ರಹಿಸುವ ತಂತ್ರಜ್ಞಾನ ರೂಪಿಸುವ ಮೂಲಕ ಗಮನ ಸೆಳೆದಿದ್ದು ,ಗಂಭೀರ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಳ್ಳುವ ವಿದ್ಯಾರ್ಥಿಗಳ ವಿಚಾರಧಾರೆಗೆ, ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗಿದೆ.

ಸಿಮೆನ್ಸ್ ಇಂಡಿಯಾ ಮತ್ತು ಸ್ಟೈಲ್ ಫೌಂಡೇಶನ್ ಅವರ ಆಶ್ರಯದಲ್ಲಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕಾರವಾರ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಗಣರಾಜ ನಾಯಕ, ಅಶ್ವಿನಿ. ಆರ್, ಚರಣ ಬಿಜಾಪುರ ಹಾಗೂ ಸಹನಾ ಎಸ್ ಅವರು ಈ ಮಹತ್ವದ ಸಾಧನೆ ಮಾಡಿದ್ದಾರೆ.

ಅಂಕೋಲಾ ತಾಲೂಕಿನ ಬಾಸಗೋಡದವರಾದ ಪ್ರಾಧ್ಯಾಪಕ ರಜತ ಹೊನ್ನಪ್ಪ ನಾಯಕ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಸಿ.ಪಿ.ಯು ಗೆ ಬಳಸುವ 5 ಪ್ಯಾನುಗಳು, ಪೆಲ್ಟಿಯರ್, 12 ವೋಲ್ಟ್ ಬ್ಯಾಟರಿ ಮತ್ತಿತರ ಅತಿ ಕಡಿಮೆ ಬೆಲೆಯ ಸಾಧನಗಳನ್ನು ಬಳಸಿ ವಾತಾವರಣದ ತೇವಾಂಶದಿಂದಲೇ ನೀರು ಸಂಗ್ರಹಿಸುವ ಉಪಕರಣ ತಯಾರಿಸಿ ಸುಮಾರು 2 ಲೀಟರುಗಳಷ್ಟು ನೀರು ಸಂಗ್ರಹಿಸುವ ಮೂಲಕ ರಾಜ್ಯ ಮಟ್ಟದ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಪ್ರಾಧ್ಯಾಪಕ ಪ್ರೊ. ರಜತ ನಾಯಕ ಅವರ ಚಿಂತನೆ ಮತ್ತು ಸೂಕ್ತ ಮಾರ್ಗದರ್ಶನದಿಂದ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಿದ್ದು ವಿದ್ಯಾರ್ಥಿಗಳ ಯೋಜನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ ತಂಡದ ಪ್ರತಿಯೊಬ್ಬ ಸದಸ್ಯರಿಗೆ ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ಶೈಕ್ಷಣಿಕ ಸಾಮಗ್ರಿಗಳನ್ನು ನೀಡಿ ಪ್ರೋತ್ಸಾಹಿಸಲಾಗಿದೆ.

ಸರಕಾರಿ ಶೈಕಣಿಕ ಸಂಸ್ಥೆಗಳೆಂದರೆ ನಿಕೃಷ್ಟ ಭಾವನೆಯಿಂದ ನೋಡುವವರೇ ಹೆಚ್ಚಿರುವ ಮತ್ತು ತಮ್ಮ ಮಕ್ಕಳಿಗೆ ಸರ್ಕಾರಿ ಶಿಕ್ಷಣ ಕೊಡಿಸಲು ಹಿಂದೇಟು ಹಾಕುವ ಹಲವರರಿಗೆ,ಸರ್ಕಾರಿ ಶಾಲೆಗಳ ಗುಣಮಟ್ಟ ಅರಿವಾಗಬೇಕಿದೆ. ಅಂಗನವಾಡಿ, ಪ್ರಾಥಮಿಕ ಹಂತದಿಂದ ಹಿಡಿದು ,ಉನ್ನತ ವ್ಯಾಸಂಗದ ವರೆಗೆ ಇಲ್ಲಿನ ವಿದ್ಯಾರ್ಥಿಗಳ , ಶಿಕ್ಷಕ-ಪ್ರಾಧ್ಯಾಪಕರ , ಕಲಿಕೆ ಮತ್ತು ಬೋಧನಾ ಸಾಮರ್ಥ್ಯ, ಛಲ ನಾಡಿನ ಹಿರಿಮೆಗೆ ಸಾಕ್ಷಿಯಾಗಿದ್ದು, ಇಲ್ಲಿಯೇ ಕಲಿತು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಲ್ಲರಿಗೂ ನಮ್ಮದೊಂದು ಮೆಚ್ಚುಗೆ ಇರಲಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button