ಸಾಧಿಸುವ ಛಲ ಒಂದಿದ್ದರೆ ಅಸಾಧ್ಯ ಯಾವುದು ಅಲ್ಲ: ಬಾಡಿ ಬಿಲ್ಡಿಂಗ್ ನಲ್ಲಿ ಮಿಂಚಿದ ಬುಡಕಟ್ಟು ಸಿದ್ಧಿ ಯುವಕ: ಬಂಗಾರದ ಪದಕ ಗೆದ್ದು ಸಾಧನೆ

ಅಂಕೋಲಾ: ಸಾಧಿಸುವ ಛಲ ಒಂದಿದ್ದರೆ ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ ಎಂಬ ಮಾತೊಂತಿದೆ. ಆದರೆ ಇರ್ಲೋರ್ವ ಯುವ ಪ್ರತಿಭೆಯ ಸಾಧನೆಯ ಕನಸಿಗೆ ಆರ್ಥಿಕ ಮುಗ್ಗಟ್ಟು ಹಿನ್ನಡೆಯಾಗುವ ಸಾಧ್ಯತೆ ಇರುವುದರಿಂದ ಹಾಗಾಗದಂತೆ ಹಲವರು ಹಣಕಾಸಿನ ನೆರವು ಒದಗಿಸಿ ಪ್ರೋತ್ಸಾಹಿಸಬೇಕಿದೆ. ಅಂಕೋಲಾ ತಾಲೂಕಿನ ಅತೀ ಹಿಂದುಳಿದ ಪ್ರದೇಶದ ಬುಡಕಟ್ಟು ಸಿದ್ಧಿ ಜನಾಂಗದ ಯುವಕನೋರ್ವ ಬಾಡಿ ಬಿಲ್ಡಿಂಗ್ ನಲ್ಲಿ ಸತತ ಪರಿಶ್ರಮ ಪಟ್ಟು ಮಿಸ್ಟರ್ ಕರ್ನಾಟಕ ಆಗಿ ಹೊರ ಹೊಮ್ಮುವ ಮೂಲಕ ಬಂಗಾರದ ಪದಕ ಗೆದ್ದು ಸಾಧನೆ ಮಾಡಿದರೂ ಅದೇ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಿ ನಿಂತಿದೆ.

ತಾಲೂಕಿನ ಅಚವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚನಗಾರ ಗ್ರಾಮದ ಹೊಸ್ಕೇರಿ ನಿವಾಸಿ ದಿನೇಶ ಅನಂತ ಸಿದ್ಧಿ ಈ ಸಾಧನೆ ಮಾಡಿರುವ ಯುವಕನಾಗಿದ್ದು ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಅನಂತ ಸಿದ್ಧಿ ಮತ್ತು ಮಹಾದೇವಿ ದಂಪತಿಯ ಕಿರಿಯ ಮಗ. 8 ನೇ ತರಗತಿ ವರೆಗೆ ಓದಿರುವ ದಿನೇಶ ಸಿದ್ಧಿ ಓದು ನಿಲ್ಲಿಸಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಣ್ಣ ಕೆಲಸಕ್ಕೆ ಸೇರಿಕೊಂಡು ದುಡಿಯುತ್ತಿರುವ ಸಂದರ್ಭದಲ್ಲಿ ಬಾಡಿ ಬಿಲ್ಡಿಂಗ್ ನತ್ತ ಆಕರ್ಷಿತನಾದ.

ಸಿದ್ದಿ ಜನಾಂಗಕ್ಕೆ ಪೃಕೃತಿ ದತ್ತವಾಗಿ ಬರುವ ಕಟ್ಟು ಮಸ್ತಾದ ಮೈಕಟ್ಟು ಹೊಂದಿರುವ ದಿನೇಶ ಸಿದ್ಧಿ ಉದ್ಯೋಗ ಮಾಡುತ್ತಲೇ ಬಿಡುವಿನ ವೇಳೆಯಲ್ಲಿ ಸಮೀಪದ ವ್ಯಾಯಾಮ ಶಾಲೆಯಲ್ಲಿ ಕಸರತ್ತು ಮಾಡುವ ಮೂಲಕ ದೇಹವನ್ನು ದಂಡಿಸಿ ಒಬ್ಬ ಉತ್ತಮ ದೇಹದಾರ್ಡ್ಯ ಪಟುವಾಗಿ ಹಲವಾರು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನಗಳನ್ನು ಗೆಲ್ಲುವ ಮೂಲಕ ಗುರುತಿಸಿಕೊಂಡಿದ್ದಾನೆ.

ಇತ್ತೀಚೆಗೆ ಬೆಂಗಳೂರಿನ ಬನಶಂಕರಿ ದಯಾನಂದ ಸಾಗರ ಕಾಲೇಜಿನಲ್ಲಿ ನಡೆದ ಅಂತರ್ ಜಿಲ್ಲಾ ಮಜಲ್ ಮೇನಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಗೆದ್ದ ದಿನೇಶ ಸಿದ್ಧಿ ಮಿಸ್ಟರ್ ಕರ್ನಾಟಕ ಎನಿಸಿಕೊಂಡು ಅಂಕೋಲಾ ತಾಲೂಕಿಗೆ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಐ.ಎಫ್. ಬಿ.ಬಿ ಅಂತರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅಪಾರ ಆಸಕ್ತಿ ಹೊಂದಿರುವ ದಿನೇಶ ಸಿದ್ಧಿಗೆ ತಾನು ಮಾಡುತ್ತಿರುವ ಸಣ್ಣ ಉದ್ಯೋಗದಿಂದ ಬರುವ ಸಂಬಳದಲ್ಲಿ ಖರ್ಚು ವೆಚ್ಚ ನಿಭಾಯಿಸುವುದು ಕಷ್ಟಕರವಾಗಿದ್ದು , ಕ್ರೀಡಾ ಪ್ರೇಮಿಗಳು ಸಹಾಯ ಹಸ್ತ ನೀಡಿದರೆ ಒಬ್ಬ ಕ್ರೀಡಾ ಸಾಧಕನ ಕನಸನ್ನು ನನಸು ಮಾಡಿದಂತಾಗುತ್ತದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version