ದೇವಿಯ ಶಿಲಾಮೂರ್ತಿಯನ್ನೇ ಹೊತ್ತೊಯ್ದು ಪ್ರತಿಷ್ಠಾಪನೆ! ಮುಂದೇನಾಯ್ತು ನೋಡಿ?

ಅಂಕೋಲಾ: ಸಾರ್ವಜನಿಕ ಭಕ್ತರಿಂದ ಪೂಜಿಸಿಕೊಳ್ಳುತ್ತಿದ್ದ ದೇವತಾ ಮೂರ್ತಿ ನಾಪತ್ತೆಯಾಗಿ ಖಾಸಗಿ ವ್ಯಕ್ತಿಯ ಸ್ಥಳದಲ್ಲಿ ಪತ್ತೆಯಾಗಿತ್ತಾದರೂ,ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ರಾತ್ರಿ ಬೆಳಗಾಗುವುದರೊಳಗೆ ಮತ್ತೆ ಮೂಲಸ್ಥಾನ ಸೇರುವಂತಾದ ಬಲು ಅಪರೂಪದ ಘಟನೆ ನಡೆದಿದೆ .ಸಾರ್ವಜನಿಕ ಭಕ್ತಾದಿಗಳು ಅನಾದಿಕಾಲದಿಂದ ಪೂಜಿಸಿಕೊಂಡು ಬಂದಿದ್ದ ಶಿಲಾ ಮೂರ್ತಿಯನ್ನೇ ಹೊತ್ತೊಯ್ದ ಭೂಪನೊಬ್ಬ ತಾನು ವಾಸವಾಗಿರುವ ಸ್ಥಳದ ಬಳಿ ಕದ್ದು ಪ್ರತಿಷ್ಠಾಪನೆ ಮಾಡಲು ಹೋಗಿ ಸಿಕ್ಕು ಬಿದ್ದಿದ್ದಾನೆ.

ಅಂಕೋಲಾ ತಾಲೂಕಿನ ಹಿಚ್ಕಡ ಹಾಗೂ ಸುತ್ತಮುತ್ತಲ ನೂರಾರು ಭಕ್ತರು, ಊರಿನ ಮರವೊಂದರ ಕೆಳಗೆ ಅನಾಧಿಕಾಲದಿಂದಲೂ ಇದ್ದ ಶ್ರೀ ಮಹಾಸತಿ ದೇವಿ ಮೂರ್ತಿಯನ್ನು . ಶೃದ್ಧಾ ಭಕ್ತಿಯಿಂದ ಪೂಜಿಸಿಕೊಂಡು ಬಂದಿದ್ದು, ಕಾಲ ಕಾಲಕ್ಕೆ ಇಲ್ಲಿ ವಿಶೇಷ ಪೂಜೆ ಪುನಸ್ಕಾರ ಮುಂದುವರೆಸಿಕೊಂಡು ಬಂದಿದ್ದಾರೆ.ಆದರೆ ಇದ್ದಕ್ಕಿದ್ದಂತೆ ಒಂದು ದಿನ ಆ ಸ್ಥಳದಲ್ಲಿದ್ದ ಶಿಲಾ ಮೂರ್ತಿಯನ್ನು ಯಾರೋ ಹೊತ್ತೊಯ್ದಿದ್ದು, ಅದು ಗಮನಕ್ಕೆ ಬರುತ್ತಲೇ ಸ್ಥಳೀಯರ ಆತಂಕಕ್ಕೆ ಕಾರಣವಾಗಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿತ್ತು.

ಈ ಹಿಂದೆ ತಾಲೂಕಿನ ಕೆಲವೆಡೆ ನಿಧಿ ಆಸೆಗಾಗಿ, ಕೆಲ ದೇಗುಲ ಮತ್ತಿತರ ಸ್ಥಳ ಅಗೆದಿದ್ದವರಾರೋ ಈ ಕೃತ್ಯ ನಡೆಸಿರಬಹುದೇ ? ಅಥವಾ ಯಾವ ಉದ್ದೇಶಕ್ಕಾಗಿ ಯಾರು ಈ ಕೃತ್ಯ ಎಸಗಿರಬಹುದೆಂಬ ಸ್ಥಳೀಯರ ನಾನಾ ಚರ್ಚೆಯ ನಡುವೆ, ಅಕ್ಕ ಪಕ್ಕದ ಗ್ರಾಮಗಳಿಗೂ ಸುದ್ದಿ ಹರಡಿ, ಅಂತೆ ಕಂತೆಗಳು ಶುರು ಹಚ್ಚಿ ಕೆಲವರ ಮೇಲೆ ಅನುಮಾನ ಮೂಡುವಂತಾಗಿತ್ತು. ಈ ಕುರಿತು ಪೊಲೀಸರ ಗಮನಕ್ಕೂ ಮಾಹಿತಿ ಬಂದು, ಅವರು ತನಿಖೆ ಕೈಗೊಂಡಾಗ ಪಕ್ಕದ ಗ್ರಾಮವಾದ ತಳಗದ್ದೆಯಲ್ಲಿ ವಾಸವಾಗಿರುವ ವ್ಯಕ್ತಿಯೋರ್ವ ತನ್ನ ಖಾಸಗಿ ಸ್ಥಳದಲ್ಲಿ ಹೊಸದಾಗಿ ಪ್ರತಿಷ್ಠಾಪನೆ ಮಾಡಿದಂತೆ ಕಂಡುಬಂದಿತ್ತು ಎನ್ನಲಾಗಿದೆ.

ನಂತರ ಹಿಚ್ಕಡದ ಗ್ರಾಮಸ್ಥರೂ ಸಹ ಅಲ್ಲಿ ಹೋಗಿ ನೋಡಿದಾಗ, ತಮ್ಮೂರ ದೇವತಾ ಮೂರ್ತಿ ಏಕಾಏಕಿ ಕಣ್ಮರೆಯಾಗಿ, ಪಕ್ಕದ ತಳಗದ್ದೆಯಲ್ಲಿ ಇರುವದನ್ನು ಕಂಡು ಹೀಗೂ ಉಂಟೇ ಎಂದು ಆಶ್ಚರ್ಯಚಕಿತರಾಗುವಂತಾಗಿತ್ತು. ಪೊಲೀಸರು ತಳಗದ್ದೆಯ ಸ್ಥಳೀಯ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ವಿಚಾರಿಸಿದಾಗ ಆತ ತನ್ನ ಸ್ವಂತ ಪಿಕಪ್ ವಾಹನದಲ್ಲಿ ಮೂರ್ತಿಯನ್ನು ಹಿಚ್ಕಡರಿಂದ ಅಗೆದು ತಂದು ತಾನು ವಾಸವಾಗಿರುವ ಖಾಸಗಿ ಸ್ಥಳದ ಅವರಣದಲ್ಲಿ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ .

ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಈ ಕೌತುಕದ ವಿಚಾರ, ಬೆಳಸೆ, ಹಿಚ್ಕಡ, ತಳಗದ್ದೆ ಮತ್ತಿತರ ಗ್ರಾಮದ ಕೆಲ ಪ್ರಮುಖರ ಉಪಸ್ಥಿತಿಯಲ್ಲಿ, ರಾಜೀ ಸಂಧಾನ ರೀತಿಯಲ್ಲಿ ಇತ್ಯರ್ಥವಾದಂತಿದ್ದು, ಕೃತ್ಯ ನಡೆಸಿದಾತ ತನ್ನ ತಪ್ಪೊಪ್ಪಿಕೊಂಡು, ಮುಂದಿನ ಧಾರ್ಮಿಕ ವಿಧಿ ವಿಧಾನಗಳನ್ನು ಸ್ಥಳೀಯರ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಮೂಲ ಸ್ಥಳದಲ್ಲಿ ಪುನರ್ ಪ್ರತಿಷ್ಠಾಪನೆ ಸೇವಾ ಕಾರ್ಯ ನಡೆಸಿಕೊಡುವುದಾಗಿ ತಿಳಿಸಿದ ಎನ್ನಲಾಗಿದ್ದು, ಅದೇ ದಿನ ರಾತ್ರಿ ಬೆಳಗಾಗುವುದರೊಳಗೆ ಅದೇ ದೇವತಾ ವಿಗ್ರಹವನ್ನು ಮೂಲಸ್ಥಾನದಲ್ಲಿ ತಂದಿರಿಸಿದ್ದ ಎನ್ನಲಾಗಿದ್ದು ಸದ್ಯ ಪ್ರಕರಣ ಸುಖಾಂತ್ಯ ಕಂಡಂತಾಗಿದೆ. ಆದರೂ ಈ ದೇವತಾ ಮೂರ್ತಿ ಕಳ್ಳತನದ ಹಿಂದಿನ ಉದ್ದೇಶವೇನಿರಬಹುದು? ತಳಗದ್ದೆ ವ್ಯಕ್ತಿ ಜೊತೆ ಬೇರೆ ಯಾರಾದರೂ ಕೈ ಜೋಡಿಸಿದ್ದರೇ ಎಂಬ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದಂತಿದೆ. ಒಟ್ಟಾರೆ ಘಟನೆ ಕುರಿತಂತೆ ಸ್ಥಳೀಯ ಮುಖಂಡರಿಂದ ಮತ್ತು ಪೊಲೀಸ್ ಇಲಾಖೆಯವರಿಂದ ನಿಖರ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version