Focus News
Trending

ಜಿ. ಸಿ ಕಾಲೇಜಿನ ಸೋಲಾರ್ ವಿದ್ಯುತ್ ಘಟಕ ಉದ್ಘಾಟನೆ: ಶೈಕ್ಷಣಿಕ ಬೆಳಕು ನೀಡುತ್ತಿರುವ ದಿನಕರರು ಕಟ್ಟಿ ಬೆಳೆಸಿದ ಸಂಸ್ಥೆಗೆ ದಿನಕರನ ಕಿರಣದಿಂದಲೇ ಬೆಳಕಿನ ಯೋಜನೆ

ಅಂಕೋಲಾ : ಉತ್ತರಕನ್ನಡದಲ್ಲಿ ಅಕ್ಷರ ಜ್ಯೋತಿಯನ್ನು ಬೆಳಗಿಸಿದ ಡಾ. ದಿನಕರ ದೇಸಾಯಿ ಅವರ ಕೆನರಾ ವೆಲ್‍ಫೆರ್ ಟ್ರಸ್ಟಿನ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಸೆಲ್ಕೋ ಕಂಪೆನಿಯ ಸಿಎಸ್‍ಆರ್ ಯೋಜನೆಯಡಿಯಲ್ಲಿ ಮತ್ತು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಹಣಕಾಸಿನ ನೆರವಿನೊಂದಿಗೆ ಸೋಲಾರ್ ವಿದ್ಯುತ್ ಸೌಲಭ್ಯವನ್ನು ಅಳವಡಿಸಲಾಗಿದೆ. ಈ ಯೋಜನೆ ಒಟ್ಟು ರೂ. 15 ಲಕ್ಷ ವೆಚ್ಚದಲ್ಲಿ ಸಾಕಾರಗೊಂಡಿದೆ.

ವಿಶಾಲವಾದ ಕ್ಯಾಂಪಸನಲ್ಲಿ ಸೋಲಾರ ಅಳವಡಿಕೆ ಸವಾಲಿನ ಸಂಗತಿಯಾಗಿದ್ದರು ಸಹ ಸೆಲ್ಕೊ ಸಂಸ್ಥೆಯ ಪರಿಣಿತ ಸಿಬ್ಬಂದಿಗಳು ಈ ಯೊಜನೆಯನ್ನು ಎರಡು ಯುನಿಟಗಳಲ್ಲಿ ವಿಭಜಿಸಿ ಯುಜಿಸಿ ಸಭಾಭವನದ ಮೇಲೆ 400 ವ್ಯಾಟ್ ವಿದ್ಯುತ್ ಉತ್ಪಾದಿಸುವ 18 ಪ್ಯಾನೆಲ್‍ಗಳನ್ನು ಅಳವಡಿಸಿದ್ದು ಈ ವಿದ್ಯುತ್ ಸಂಗ್ರಹಣೆಗೆ 200 ಎ.ಎಚ್. ಸಾಮಥ್ರ್ಯದ 10 ಬ್ಯಾಟರಿಗಳನ್ನು ಸಭಾಭವನದ ಒಳಗಡೆ ಸುರಕ್ಷಿತ ರ್ಯಾಕ್‍ಗಳಲ್ಲಿ ಇಡಲಾಗಿದೆ. ಮತ್ತೊಂದು ಯುನಿಟನ್ನು ಗ್ರಂಥಾಲಯದಲ್ಲಿ ಅಳವಡಿಸಲಾಗಿದ್ದು ಅದರ ಛಾವಣಿಯ ಮೇಲೆ 400 ವ್ಯಾಟ್ ವಿದ್ಯುತ್ ಉತ್ಪಾದಿಸುವ 12 ಪ್ಯಾನೆಲ್‍ಗಳನ್ನು ಅಳವಡಿಸಲಾಗಿದೆ.

200 ಎ.ಎಚ್. ಸಾಮಥ್ರ್ಯದ 8 ಬ್ಯಾಟರಿಗಳನ್ನು ಗ್ರಂಥಾಲದ ಒಳಗಡೆ ರ್ಯಾಕ್ ಇಡಲಾಗಿದೆ. ಒಟ್ಟು 18 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಜೊತೆಗೆ 05 ಸೋಲಾರ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಕಾಲೇಜಿನ ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಗ್ರಂಥಾಲಯ ಮತ್ತು ಕಚೇರಿ ಕಟ್ಟಡಕ್ಕೆ ಸೋಲಾರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದಾಗಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಿದೆ.

ಏರುತ್ತಿರುವ ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡುವ ಮತ್ತು ನಿರಂತರವಾಗಿ ವಿದ್ಯುತ್ ಪೂರೈಕೆ ಇರುವಂತೆ ನೋಡಿಕೊಳ್ಳುವುದಕ್ಕಾಗಿ, ಸೋಲಾರ್ ವಿದ್ಯುತ್ ಸಂಪನ್ಮೂಲವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರಾಚಾರ್ಯ ಡಾ. ಎಸ್. ವಿ. ವಸ್ತ್ರದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವರು. ಕೆನರಾ ವೆಲ್ ಫೇರ್ ಟ್ರಸ್ಟಿನ ಅಧ್ಯಕ್ಷರಾದ ಎಸ್. ಪಿ. ಕಾಮತ ಅವರು ಸೆಲ್ಕೊ ಸಂಸ್ಥೆಯ ಮುಖ್ಯಾಧಿಕಾರಿ ಮೋಹನ ಬಿ. ಹೆಗಡೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಕಾರವನ್ನು ಸ್ಮರಿಸಿರುವರು.

ಡಾ. ದಿನಕರ ದೇಸಾಯಿಯವರ ಕಂಚಿನ ಪುತ್ಥಳಿಗೆ ಸೋಲಾರ ಚಾಲಿತ ವಿಶೇಷ ಫೋಕಸ್ ದೀಪವನ್ನು ಅಳವಡಿಸಿರುವುದು ವಿಶೇಷವಾಗಿದ್ದು, ಜಿಲ್ಲೆಯ ಹಲವೆಡೆ ಶೈಕ್ಷಣಿಕ ಸಂಸ್ಥೆ ಕಟ್ಟಿ ಬೆಳೆಸಿದ್ದ, ಮತ್ತು ಆ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದ ದಿನಕರ ರವರ ಸಂಸ್ಥೆಗೆ ದಿನಕರನ (ಸೂರ್ಯ) ನ ಕಿರಣ ಬಳಸಿಕೊಂಡು ಸಂಸ್ಥೆಗೆ ಬೆಳಕು ನೀಡಿದ ಯೋಜನೆ ಸೋಮವಾರ ಉದ್ಘಾಟನೆಗೊಳ್ಳಲಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button