ಮೌಡ್ಯಗಳು ಮಾನವ ಸಮಾಜದ ಮೇಲೆ ಸ್ವಯಂ ಹೇರಿದ ಸ್ವಾರ್ಥ, ಕಾಲ್ಪನಿಕ, ಊಹಿಸಲಾಗದ ನಂಬಿಕೆಗಳು: ಡಾ. ಹುಲಿಕಲ್ ನಟರಾಜ್

ಹೊನ್ನಾವರ: ಮೌಡ್ಯಗಳು ಮಾನವ ಸಮಾಜದ ಮೇಲೆ ಸ್ವಯಂ ಹೇರಿದ ಸ್ವಾರ್ಥ, ಕಾಲ್ಪನಿಕ, ಊಹಿಸಲಾಗದ ನಂಬಿಕೆಗಳು. ಆದರೆ ಈ ಪ್ರತಿ ನಂಬಿಕೆಯ ಹಿಂದೆ ವಿಜ್ಞಾನದ ವಾಸ್ತವಿಕತೆ ಇದೆ. ಸಮಾಜದಲ್ಲಿ ಇಂದು ವಿದ್ಯಾವಂತರಿದ್ದಾರೆ, ಬುದ್ಧಿವಂತರಿದ್ದಾರೆ ಆದರೆ ಪ್ರಜ್ಞಾವಂತರ ಕೊರತೆ ಇದೆ. ಅತ್ಯಲ್ಪ ಪ್ರಜ್ಞಾವಂತಿಕೆಯ ನಡುವೆ “ಜಿ- ಹುಜೂರ್” ಎಂದು ಎಲ್ಲವನ್ನು ಒಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಪ್ರಶ್ನೆ ಕೇಳಿದರೆ ಪೂರ್ವಗ್ರಹಿತನೆಂದು, ಕೆಳದಿದ್ದರೆ ಮೌನಕ್ಕೆ ಶರಣಾಗಿದ್ದಾನೆಂದು ಸಮಾಜ ಗ್ರಹಿಸುತ್ತಿದೆ. ವ್ಯಕ್ತಿ ತನ್ನನ್ನು ತಾನು ಅರಿತುಕೊಳ್ಳದಿದ್ದರೆ ಸಮಾಜವನ್ನು ಅರ್ಥಮಾಡಿ ಕೊಳ್ಳಲಾರ. ಸಮಾಜವನ್ನು ಅರಿಯದಿದ್ದರೆ ಸಂತುಷ್ಟ ಜೀವನ ನಡೆಸಲಾರ. ಧರ್ಮ ಮತ್ತು ವಿಜ್ಞಾನ, ನಂಬಿಕೆ ಮತ್ತು ಮೂಢನಂಬಿಕೆ, ಆಚರಣೆ ಮತ್ತು ಸಂಪ್ರದಾಯಗಳು ಇಂದಿನ ಕಾರ್ಯಕ್ರಮದ ಪರಿಧಿಯಾಗಿದೆ” ಎಂದು, ರಾಜ್ಯಾದ್ಯಂತ ಅರಿವಿನ ಬೀಜವನ್ನು ಬಿತ್ತುತ್ತಿರುವ, ಪ್ರಭಾವಿ ಚಿಂತಕ, ಪ್ರಖರ ವಿಚಾರವಾದಿ, ಮೂಡನಂಬಿಕೆಯ ವ್ಯಾಧಿಯಿಂದ ಬಳಲುತ್ತಿರುವ ಸಮಾಜದ ಚಿಕಿತ್ಸಕ, ದೊಡ್ಡಬಳ್ಳಾಪುರದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರು ಆಗಿರುವ ಡಾ. ಹುಲಿಕಲ್ ನಟರಾಜ್ ರವರು ಅಭಿಪ್ರಾಯ ಪಟ್ಟರು.

ಅವರು ಹೊನ್ನಾವರದ ಎಂ. ಪಿ. ಇ. ಸೊಸೈಟಿಯ ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟ ಮತ್ತು ರೆಡ್ ಕ್ರಾಸ್ ಇದರ ಸಂಯುಕ್ತ ಆಶ್ರಯಯದಲ್ಲಿ ವೈಜ್ಞಾನಿಕ ಮನೋಭಾವದ ಕುರಿತು ಜಾಗೃತಿ ಮೂಡಿಸುವ ಪವಾಡ ಬಯಲು ಶೈಕ್ಷಣಿಕ ಕಾರ್ಯಕ್ರಮವನ್ನು ಪ್ರಾಥಕ್ಷಿಕೆಯ ಮೂಲಕ ವಿವರಿಸುತ್ತಾ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ರೇಣುಕಾದೇವಿ ಗೋಳಿಕಟ್ಟೆಯವರು ಮಾತನಾಡಿ “ವಿಜ್ಞಾನ- ತಂತ್ರಜ್ಞಾನ ಯುಗದಲ್ಲಿ ಬದುಕುತ್ತಿರುವ ನಾವು, ಪ್ರತಿಯೊಂದನ್ನು ವೈಜ್ಞಾನಿಕವಾಗಿ ನೋಡಿ, ಪ್ರಾಯೋಗಿಕವಾಗಿ ಅಭ್ಯಾಸ ಮಾಡಿ, ಯಾವುದೇ ಮೋಹಕ್ಕೆ ಒಳಗಾಗದೆ ,ಕಠಿಣ ಪರಿಶ್ರಮದಿಂದ ಸ್ವಂತ ಸಾಮರ್ಥ್ಯದಿಂದ ಮುಂದೆ ಬಂದರೆ ಯಶಸ್ವಿ ವ್ಯಕ್ತಿಗಳು ಆಗುತ್ತೀರಿ “ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿ ಒಕ್ಕೂಟದ ಸಲಹೆಗಾರರಾದ ಡಾ. ಎಂ.ಜಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಡಾ. ಡಿ. ಎಲ್. ಹೆಬ್ಬಾರ್ ಮತ್ತು ವಿದ್ಯಾರ್ಥಿ ಪ್ರತಿನಿಧಿ ಜೀವನಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಪ್ರಶಾಂತ ಹೆಗಡೆ ಮೂಡಲ ಮನೆ ಮತ್ತು ವಿದ್ಯಾಧರ ಕಡತೋಕ ನಿರೂಪಿಸಿದರು.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version