ಭಟ್ಕಳ: ಹಿಂದೆ ನಮ್ಮ ಪೂರ್ವಜರು ಊರಿಗೆ ಸಾಂಕ್ರಾಮಿಕ ರೋಗ ರುಜಿನಗಳು ಬಂದಾಗ ದೈವ ದೇವರುಗಳಿಗೆ ಮೊರೆ ಹೋಗುತ್ತಿದ್ದರು. ಆ ಭಾಗವಾಗಿ ಕರಾವಳಿಯಾದ್ಯಂತ ದೈವ ದೇವರುಗಳನ್ನು ಸಂಪ್ರೀತಗೊಳಿಸುವ ಅನೇಕ ಆಚರಣೆಗಳು ಚಾಲ್ತಿಯಲ್ಲಿದೆ. ಅದರಲ್ಲಿ ಬಹುಮುಖ್ಯವಾಗಿ ಉತ್ತರ ಕನ್ನಡ ಮತ್ತು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಆಚರಿಸಲ್ಪಡುವ ಬ್ವಾಗವು ಕೂಡ ಒಂದು.
ಹೌದು, ಇತ್ತಿಚೆಗೆ ಭಟ್ಕಳ ತಾಲೂಕಿನ ಮಾವಿನಕುರ್ವೆಯ ತಲಗೋಡ ಗ್ರಾಮದಲ್ಲೂ ಕೂಡ ಇಂತಹ ಒಂದು ವಿಶಿಷ್ಟ ಆಚರಣೆ ನೇರವೇರಿಸಲಾಯಿತು. ತಲಗೋಡ ಗ್ರಾಮದ ವಿವಿಧ ಸಮಾಜ ಬಾಂದವರು ಒಟ್ಟಾಗಿ ಈ ಆಚರಣೆಯನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ನೂರಾರು ಶೃದ್ಧಾಳುಗಳು ಪಾಲ್ಗೊಂಡು ದರ್ಶನ ಪಾತ್ರಿಗಳು ನುಡಿಯವ ದೈವದ ಮಾತಿಗೆ ಕಿವಿಯಾದರು.
ವಿಶೇಷವಾಗಿ ಬಾಳೆಯ ದಿಂಡು ಮತ್ತು ತೆಂಗಿನ ಗರಿಯ ಸಹಾಯದಿಂದ ಬಲಿಕಂಬವನ್ನು ತಯಾರಿಸಿ ಸ್ಥಳದಲ್ಲೇ ತಯಾರಿಸಿದ ಅನ್ನ ಆಹಾರವನ್ನು ಮೊರದಲ್ಲಿಟ್ಟು ಕತ್ತಲಲ್ಲಿ ಸೂಡಿಯ ಬೆಳಕಿನ ನೆರವಿನೊಂದಿಗೆ ಸುಮಾರು 1 ಕಿ.ಮೀ ದೂರದವರೆಗೆ ಸಾಗಿ ಸಮುದ್ರ ತೀರಕ್ಕೆ ಬಂದು, ಭಕ್ತರು ತಂದ ಕೋಳಿಯನ್ನು ಅರ್ಪಿಸಲಾಗುತ್ತದೆ. ಈ ಮೂಲಕ ದೈವಗಳಿಗೆ ಆಹಾರ ನೀಡಿದೇವು ಎಂಬ ಸಂತೃಪ್ತಿ ನೆರೆದ ಜನರ ಮುಖದಲ್ಲಿ ಮೂಡುತ್ತದೆ.
ಒಟ್ಟಿನಲ್ಲಿ ಜನಪದಿಯ ನೆಲೆಗಟ್ಟಿನಲ್ಲಿ ಆಚರಿಸಲ್ಪಡುವ ಇಂತಹ ಆಚರಣೆಗಳಲ್ಲಿ ತರ್ಕದ ಅವಶ್ಯಕತೆ ಖಂಡಿತ ಎದುರಾಗಬಾರದು. ಯಾಕೆಂದರೆ ಒಂದು ಊರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವಲ್ಲಿ ಇಂತಹ ಅನೇಕ ಆಚರಣೆಗಳ ಸಹಕಾರಿಯಾಗುತ್ತಿದೆ.
ಈಶ್ವರ್ ನಾಯ್ಕ, ವಿಸ್ಮಯ ನ್ಯೂಸ್, ಭಟ್ಕಳ