ನದಿಗೆ ಈಜಲು ಹೋದ ವೇಳೆ ದುರ್ಘಟನೆ: ನೀರುಪಾಲಾದ ಯುವಕ: ರಕ್ಷಣೆಗೆ ಧಾವಿಸಿದ ಮಹಿಳೆಯೂ ನದಿಯಲ್ಲಿ ಮುಳುಗಿ ಸಾವು

ಭಟ್ಕಳ: ಇದನ್ನು ವಿಧಿ ಎನ್ನಬೇಕೋ? ಅಥವಾ ಹುಟ್ಟು ಸಾವು ಸಹಜ ಎನ್ನುವ ಎಚ್ಚರಿಕೆಯೇ? ಭಟ್ಕಳದಾದ್ಯಂತ ಹೆಚ್ಚಿನ ಜನರ ಒಡಲ ದಾಹವನ್ನು ನೀಗಿಸುವ ತಾಯಿ ಕಡವಿನ ಕಟ್ಟೆ ನದಿ, ಒಬ್ಬ ಹದಿಹರೆಯದ ಯುವಕನನ್ನ ಮತ್ತು ಒರ್ವ ಮಹಿಳೆಯನ್ನು ತನ್ನೊಡಲಿಗೆ ಸೆಳೆದಿತ್ತು. ಹೌದು ಭಟ್ಕಳದ ಕಂಡೆಕೊಡ್ಲು ನಿವಾಸಿಗಳಾದ ಪಾರ್ವತಿ ಶಂಕರ್ ನಾಯ್ಕ ಮತ್ತು ಸೂರಜ್ ಪಾಂಡು ನಾಯ್ಕ ಕಡವಿನ ಕಟ್ಟೆ ನದಿಯಲ್ಲಿ ಮುಳುಗಿ ಅಸುನೀಗಿದ ದುರ್ದೈವಿಗಳು.

ಬಿಸಿಲ ತಾಪಕ್ಕೆ ಮಕ್ಕಳು ನೀರಾಟವನ್ನು ಇಷ್ಟ ಪಡೋದು ತೀರಾ ಸಹಜ. ಅದನ್ನು ಹಿರಿಯರು ತೀರಾ ವಿರೋಧಿಸುವುದು ಕೂಡ ಸರಿಬರಲಾರದು. ಮಕ್ಕಳು ಬಾಲ್ಯವನ್ನು ಹೀಗೆ ಅನುಭವಿಸಿದರೆ ಮಾತ್ರ ಮಕ್ಕಳಲ್ಲಿನ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಆದರೆ ವಿಧಿ ಯಾವ ಗಾಳವನ್ನು ಹಾಕಿ ಯಾರನ್ನು ಬರಸೆಳೆಯುತ್ತದೆಂದು ಯಾರು ಕೂಡ ಅರಿಯಲಾರು.

ಮಧ್ಯಾಹ್ನದ ಸುಡು ಬಿಸಿಲಿಗೆ ಸೂರಜ್ ಮತ್ತು ಗೆಳೆಯರು ಸೇರಿ ಪಕ್ಕದಲ್ಲೇ ಇರೊ ಕಡವಿನ ಕಟ್ಟೆಯ ನದಿಯ ರೈಲ್ವೆ ಸೇತುವೆಯ ಬಳಿ ಈಜಲು ತೆರಳಿದ್ದರು. ಮಕ್ಕಳನ್ನು ಮಾತ್ರ ನದಿಯಲ್ಲಿ ಈಜಲು ಕಳುಹಿಸುವುದು ಸುರಕ್ಷತೆಯ ದೃಷ್ಟಿಯಲ್ಲಿ ಒಳ್ಳೆಯದಲ್ಲ ಅನ್ನೋ ಕಾರಣಕ್ಕೆ ಸೂರಜ್ ಗೆಳೆಯನ ತಾಯಿ ಪಾರ್ವತಿ ಶಂಕರ ನಾಯ್ಕ ಕೂಡ ಜತೆಯಾಗಿದ್ದಳು. ಮಕ್ಕಳು ನೀರಾಟದಲ್ಲಿ ತೊಡಗಿಕೊಂಡರೆ ಪಾರ್ವತಿ ನಾಯ್ಕ ದಡದಲ್ಲಿ ಕಲ್ಲಿನ ಮೇಲೆ ಕುಳಿತು ಮಕ್ಕಳನ್ನು ಗಮನಿಸುತ್ತಿದ್ದಳು. ಆ ನಡುವೆ ಇದ್ದಕ್ಕಿದ್ದಂತೆ ಸೂರಜ್ ನದಿಯಲ್ಲಿ ಮುಳುಗತೊಡಗಿದ ಇದನ್ನು ನೋಡಿದ ಪಾರ್ವತಿ ಶಂಕರ್ ನಾಯ್ಕ ಆ ಹುಡುಗನ ರಕ್ಷಣೆಗೆ ದಾವಿಸಿದ್ದಾಳೆ.

ಕ್ಷಣ ಮಾತ್ರದಲ್ಲಿ ವಿಧಿ ತನ್ನ ಆಟವನ್ನು ಮುಗಿಸಿದೆ. ಎದೆಮಟ್ಟಕ್ಕೆ ಬೆಳೆದು ನಿಂತ ಮಗನ ಸಾವು ಒಂದು ಕಡೆ. ಕೈತ್ತುತ್ತು ತಿನ್ನಿಸಿ ಮಮಕಾರದಿಂದ ಬೆಳೆಸಿದ ತಾಯಿಯನ್ನು ಕಳೆದುಕೊಂಡ ಮಗನ ಸಂಕಟ ಮತ್ತೊಂದು ಕಡೆ…. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳದ ಸರಕಾರಿ ತಾಲೂಕಾ ಆಸ್ಪತ್ರೆಗೆ ತಂದಾಗ ನೂರಾರು ಜನ ನೆರೆದಿದ್ದು, ಎಲ್ಲರ ಕಣ್ಣಲ್ಲೂ ಅರಿವಿಗೆ ಬಾರದೆ ಕಣ್ಣಿರು ಜಿನುಗುತ್ತಿತ್ತು.

ನದಿಗೆ ಈಜಲು ಹೋದ ವೇಳೆ ದುರ್ಘಟನೆ : ನೀರುಪಾಲಾದ ಯುವಕ : ರಕ್ಷಣೆಗೆ ಧಾವಿಸಿದ ಮಹಿಳೆಯೂ ನದಿಯಲ್ಲಿ ಮುಳುಗಿ ಸಾವು

ದಿನ ಬೆಳಗಾದರೆ ಪ್ರವಾಸಕ್ಕೆಂದು ಬಂದು ನೀರಲ್ಲಿ ಮುಳುಗಿ ಸಾಯುವ, ಹೊಳೆ-ಕೆರೆಗಳಲ್ಲಿ ಈಜಲು ತೆರಳಿ ಸಾವನಪ್ಪುವ ವರದಿಗಳನ್ನು ತಾವು ಗಮನಿಸುತ್ತಲೆ ಇರುತ್ತೀರಿ. ನದಿ, ಸಮುದ್ರಗಳ ಆಳ, ಅಗಲ, ಸೆಳೆತ, ಸುಳಿ ಮೇಲ್ನೊಟಕ್ಕೆ ಕಾಣಿಸುವಷ್ಟು ಸುಲಭವಲ್ಲ. ಯಾವುದಕ್ಕೂ ನೀರಾಟವಾಡುವಾಗ ಕೊಂಚ ಹೆಚ್ಚಿನ ಜಾಗೃತಿವಹಿಸಬೇಕು ಅನ್ನೋದು ನಮ್ಮ ಕಳಕಳಿಯ ಮನವಿಯೂ ಹೌದು.

ಈಶ್ವರ್ ನಾಯ್ಕ, ವಿಸ್ಮಯ ನ್ಯೂಸ್, ಭಟ್ಕಳ

Exit mobile version