ವನೌಷಧಿ ಉಪಚಾರ: ಮನೆಗೆ ಮರಳಿದ ಪದ್ಮಶ್ರೀ ತುಳಸಿ ಗೌಡ: ಬೆಳಂಬಾರ ಔಷಧಿಯ ಪ್ರಸಿದ್ಧಿ ಮತ್ತಷ್ಟು ಹೆಚ್ಚಳ

ಅಂಕೋಲಾ: ತಾಲೂಕಿನ ಬೆಳಂಬಾರ ಔಷಧಿ ಎಂದರೆ ಅದು ಪಾರ್ಶವಾಯು ಪೀಡಿತರಿಗೆ ರಾಮಬಾಣ ಎನ್ನುವಷ್ಟು ಪ್ರಸಿದ್ಧಿ ಪಡೆದಿದೆ. ಕಳೆದ ಅನೇಕ ತಲೆ ಮಾರುಗಳಿಂದ ಇಲ್ಲಿನ ಹಾಲಕ್ಕಿ ಕುಟುಂಬವೊoದು ಗಿಡಮೂಲಿಕೆ ಚಿಕಿತ್ಸೆ ಮೂಲಕ ಹೆಸರಾಗಿದ್ದು, ದೇಶದ ಮತ್ತು ರಾಜ್ಯದ ಗಣ್ಯರು,ಸಿನಿ ತಾರೆಯರು ಸೇರಿದಂತೆ ಹಲವರಿಗೆ ಉಪಚರಿಸಿದ ಬೆಳಂಬಾರದ ಖ್ಯಾತ ನಾಟಿ ವೈದ್ಯರಾಗಿದ್ದ ಶಿವು ಬೊಮ್ಮು ಗೌಡ ಕುಟುಂಬ ವರ್ಗ ,ಈಗಲೂ ಅದನ್ನು ಮುಂದುವರಿಸಿಕೊoಡು ಬಂದಿದ್ದು ಈ ಆರೋಗ್ಯ ಧಾಮದಲ್ಲಿ ವೈದ್ಯ ಹನುಮಂತ ಗೌಡ ಅವರು, ನಾಟಿ ಔಷದಿ ಚಿಕಿತ್ಸೆ ಮೂಲಕ ಸಾವಿರಾರು ಕುಟುಂಬಗಳಗಳಿಗೆ ಆರೋಗ್ಯ ಭಾಗ್ಯ ಮತ್ತು ನೆಮ್ಮದಿ ಕರುಣಿಸಿದ್ದಾರೆ.

ಇತ್ತೀಚೆಗೆ ಆಕಸ್ಮಿಕ ಆರೋಗ್ಯ ಏರುಪೇರಿನಿಂದ ಪದ್ಮಶ್ರೀ ತುಳಸಿ ಗೌಡ ಅವರನ್ನು ಸಹ ಜಿಲ್ಲಾಸ್ಪತ್ರೆಗೆ ಸಾಗಿಸಿ,ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದಕ್ಕೂ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿತ್ತು.ಆದರೆ ಅಲ್ಲಿನ ಚಿಕಿತ್ಸೆ ತುಳಸಿ ಗೌಡ ಅವರಿಗೆ ಅಷ್ಟೊಂದು ಪರಿಣಾಮಕಾರಿಯಾಗಿ ಫಲಿಸದೇ, ಕೊಂಚ ನಿರಾಸೆಯಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳುವಂತಾಗಿತ್ತು.

ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ತುಳಸಜ್ಜಿ ಅವರನ್ನು ಅವರ ಕುಟುಂಬದವರು ಬೆಳಂಬಾರದ ಖ್ಯಾತ ನಾಟಿ ವೈದ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನುಮಂತ ಗೌಡ ಅವರ ಬಳಿ ಚಿಕಿತ್ಸೆ ನೀಡುವಂತೆ ವಿನಂತಿಸಿದ್ದರು..ತಕ್ಷಣವೇ ಸ್ಪಂದಿಸಿದ ಹನುಮಂತ ಗೌಡ ಅವರು ತಮ್ಮ ಆರೋಗ್ಯ ಧಾಮದಲ್ಲಿ ವೃಕ್ಷಮಾತೆಯನ್ನು ದಾಖಲಿಸಿಕೊಂಡು,ಸ್ವತ: ತಾವೇ ವಿಶೇಷ ಕಾಳಜಿ ವಹಿಸಿದ್ದಲ್ಲದೇ,ತಮ್ಮ ಆಸ್ಪತ್ರೆಯ ಸಿಸ್ಟರ್ ಮೇಘನಾ ಮತ್ತು ತುಳಸಜ್ಜಿ ಕುಟುಂಬಸ್ಥರ ಪ್ರೀತಿಯ ಆರೈಕೆ ದೊರೆಯುವಂತೆ ಮಾಡಿ,ಎಲ್ಲರೂ ಹುಬ್ಬೇರುವಂತೆ,ಈ ಇಳಿವಯಸ್ಸಿನಲ್ಲಿಯೂ ವೃಕ್ಷಮಾತೆ ಆರೋಗ್ಯ ಚೇತರಿಕೆಗೆ ಕಾರಣೀಕರ್ತರಾಗಿದ್ದಾರೆ.

ಈ ಮೂಲಕ ವೈದ್ಯ ಹನುಮಂತ ಗೌಡ ಅವರು ಕಾಡು ತುಳಸಿ ಮತ್ತೆ ಚಿಗುರುವಂತೆ ಮಾಡಿ , ಜೀವ ಹಾಗೂ ಜೀವನಕ್ಕೆ ಚೈತನ್ಯ ತುಂಬಲು ಯಶಸ್ವಿಯಾಗಿದ್ದಾರೆ. ಈಗ ತುಳಸಜ್ಜಿ ಹಾಸಿಗೆಯಿಂದ ಎದ್ದು ಕುಳಿತು, ಸ್ವತಂತ್ರವಾಗಿ ಹೆಜ್ಜೆ ಇಡುವಷ್ಟರ ಮಟ್ಟಿಗೆ ಮತ್ತು ಈ ಮೊದಲಿನಂತೆ ಮಾತನಾಡಲು ಆರಂಭಿಸುವ ಮೂಲಕ ಹಲವರ ಮತ್ತು ವೈದ್ಯಕೀಯ ಲೋಕದ ಅಚ್ಚರಿಗೂ ಕಾರಣರಾಗಿದ್ದಾರೆ.

ಈ ಸಂದರ್ಭದಲ್ಲಿ ಸಮಾಜದ ಹಿರಿಯ ಬಿ.ಎಸ್. ಗೌಡ ಮಾತನಾಡಿ ಮಹಾತ್ಮಾ ಗಾಂಧೀಜಿಯವರಿಗೆ ಚಿಕಿತ್ಸೆ ನೀಡಿರುವ ಬೆಳಂಬಾರದ ಹಾಲಕ್ಕಿ ಗೌಡರ ಕುಟುಂಬ ಪದ್ಮಶ್ರೀ ತುಳಸಿ ಗೌಡ ಅವರಿಗೆ ಹೊಸ ಚೈತನ್ಯ ನೀಡುವ ಕೆಲಸ ಮಾಡಿದ್ದು ಹಾಲಕ್ಕಿ ಸಮಾಜದ ನಾಟಿ ವೈದ್ಯಕೀಯ ಪರಂಪರೆ ಶ್ರೇಷ್ಠವಾದದು ಎಂದರು.

ವೈದ್ಯ ಹನುಮಂತ ಗೌಡ ಮಾತನಾಡಿ, ಸಮಾಜದ ಹಿರಿಯ ಚೇತನರನ್ನು ಉಳಿಸುವುದು ನಮ್ಮ ಕರ್ತವ್ಯ,ಈ ಹಿಂದೆ ಜಿಲ್ಲಾಸ್ಪತ್ರೆ,ಪಕ್ಕದ ಜಿಲ್ಲೆಯ ಆಸ್ಪತ್ರೆಗಳಲ್ಲಿ ನೀಡಿದ ಚಿಕಿತ್ಸೆ ಜೊತೆ ತುಳಸಜ್ಜಿ ಕುಟುಂಬ ಅವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದು ಇಂದು ನಮ್ಮ ಆರೋಗ್ಯ ದಾಮದಲ್ಲಿ ತುಳಿಸಜ್ಜಿ ಬೇಗನೆ ಗುಣಮುಖರಾಗಲು ಸಾಧ್ಯವಾಗಿದೆ.ನಮ್ಮ ಆಸ್ಪತ್ರೆಯ ಸಿಬ್ಬಂದಿಗಳ ಸೇವೆಯೂ ಸ್ಮರಣೀಯ ಎಂದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version