Important
Trending

ಮತ್ತೆ ಮಳೆಗಾಲ ಬಂದರೂ ಹೊಸ ಕಂಬಕ್ಕೆ ಇಲ್ಲದ ವಿದ್ಯುತ್ತ ಸಂಪರ್ಕ ವ್ಯವಸ್ಥೆ : ಮುರಿದು ಬೀಳಲಿರುವ ಹಳೆ ಕಂಬಕ್ಕೆ ಮುಕ್ತಿಯೋ ? ಕಂಬ ಮುಟ್ಟಿದವರಿಗೇನೆ ಮುಕ್ತಿಯೋ ?

ಅಂಕೋಲಾ: ತಾಲೂಕಿನ ಜೈಹಿಂದ್ ಸರ್ಕಲ್ ಬಳಿ, ತಹಶೀಲ್ಧಾರರ ಕಾರ್ಯಾಲಯ ಮತ್ತು ಟ್ರೆಜರಿ ಆಫೀಸ್ ಆವರಣ ಗೋಡೆಗೆ ಹೊಂದಿಕೊಂಡು, ಹೊರಭಾಗದಲ್ಲಿ ವಿದ್ಯುತ್ ಟ್ರಾನ್ಸ್ ಪಾರ್ಮರ್ ಅಳವಡಿಸಿರುವ ಕಂಬ ಈಗಲೋ ಆಗಲೋ ಎಂಬಂತೆ ಮುರಿದು ಬೀಳುವ ಸ್ಥಿತಿಯಲ್ಲಿದ್ದು,ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಕಳೆದ 1-2 ವರ್ಷಗಳಿಂದ ಕಂಬದ ಸಿಮೆಂಟ್ ಮೇಲ್ಪದರ ಕಳಚಿ ಬೀಳುತ್ತಲೇ ಇದ್ದು, ಒಳಗಡೆ ಇರುವ ಕಬ್ಬಿಣದ ರಾಡ್ ಗಳಿಗೂ ತುಕ್ಕು ಹಿಡಿದು, ಅಸ್ತಿಪಂಜರದಂತೆ ಕಂಡು ಬರುತ್ತಿದೆ.ಮಳೆಗಾಲದಲ್ಲಿ ಈ ಕಂಬದಲ್ಲಿ ವಿದ್ಯುತ್ ಪ್ರವಹಿಸುತ್ತದೆ ಎನ್ನಲಾಗಿದ್ದು,ಟೆಸ್ಟರ್ ಹಿಡಿದು ನೋಡಿದರೆ ಗೊತ್ತಾಗುತ್ತದೆ ಎಂದು ಈ ಹಿಂದೆ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ಎನ್ನುವವರು, ಕಳೆದ ಮಳೆಗಾಲದ ಅವಧಿಯಲ್ಲಿ ತಾಲೂಕ ಪಂಚಾಯತನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರ ಗಮನಕ್ಕೆ ತಂದಿದ್ದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು,ನಾಗರಿಕ ಸುರಕ್ಷತೆ ,ಮತ್ತು ಜನ-ಜಾನುವಾರುಗಳಿಗೆ ಅಪಾಯವಾಗಬಾರದೆಂಬ ದೃಷ್ಟಿಯಿಂದ, ಸಂಬಂಧಿತ ಅಧಿಕಾರಿಗಳ ತಂಡದೊಂದಿಗೆ ಖುದ್ದು ತಾವೇ ಸ್ಥಳ ಪರಿಶೀಲಿಸಿ,ಕಂಬ ಬದಲಾವಣೆಗೆ ಸೂಚಿಸಿದ್ದರು.ಶಾಸಕರು ತಿಳಿಸಿದಂತೆ ಕೆಲ ಕಾಲದಲ್ಲಿಯೇ ಹೆಸ್ಕಾಂನವರೇನೋ ಹಳೆಯ ಕಂಬದ ಹಿಂಬದಿ ಹೊಸ ಕಂಬಗಳನ್ನು ಅಳವಡಿಸಿ,ವಿದ್ಯುತ್ ಸಂಪರ್ಕ ನೀಡಿ,ಹಳೆ ಕಂಬಗಳ ತೆರವಿಗೆ ಮುಂದಾಗಬೇಕೆಂದಿದ್ದರು. ಆದರೆ ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗದಂತೆ ಅಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದರೆ ಅಕ್ಕ ಪಕ್ಕದ 2 ಮರಗಳನ್ನು ಕಟಾವು ಮಾಡಲೇ ಬೇಕಿತ್ತು.

ಈ ಕುರಿತು ಸ್ಥಳದಲ್ಲಿಯೇ ಇದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು.ಇಲಾಖೆಯ ಬಿಗು ನಿಲುವು ಇಲ್ಲವೇ ಹೆಸ್ಕಾಂ ಮತ್ತು ಅರಣ್ಯ ಇಲಾಖೆ ನಡುವಿನ ಹೊಂದಾಣಿಕೆಯ ಕೊರತೆಯಿಂದ,ಹೊಸ ಕಂಬವನ್ನು ಅಳವಡಿಸಿದರೂ ಈ ವರೆಗೂ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ. ಈಗ ಮತ್ತೆ ಮಳೆಗಾಲ ಆರಂಭವಾಗಿದ್ದು,ಇಲ್ಲಿನ ಅಪಾಯಕಾರಿ ಸ್ಥಿತಿ ಬಗ್ಗೆ ಮತ್ತೆ ಟೆಸ್ಟರ್ ಹಚ್ಚುವಂತಾಗಿದೆ.ಈ ಕುರಿತು ಸಾಮಾಜಿಕ ಕಾರ್ಯಕರ್ತರಾದ ಸುರೇಶ್ ನಾಯ್ಕ್ ಅಸ್ಲಗದ್ದೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟರೆ, ವಕೀಲ ಉಮೇಶ್ ನಾಯ್ಕ ಆಡಳಿತ ವ್ಯವಸ್ಥೆಯ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ವಿದ್ಯುತ್ ಪರಿವರ್ತಕಗಳನ್ನು ಹೊತ್ತು ನಿಂತಿರುವ ಕಂಬಗಳು ದುಸ್ಥಿತಿಗೆ ತಲುಪಿ ವರ್ಷಗಳೇ ಕಳೆದಿದ್ದು , ಅಲ್ಲೇ ಹಿಂಬದಿಗೆ ಹೊಸ ಕಂಬ ಅಳವಡಿಸಿದ್ದರು, ವಿದ್ಯುತ್ ತಂತಿಗಳ ಸಂಪರ್ಕ ಕಲ್ಪಿಸುವ ಕೆಲಸ ಮಾತ್ರ ಇದುವರೆಗೆ ನಡೆದಿಲ್ಲ. ಇಲಾಖೆಗಳು ಪರಸ್ಪರ ಸಮನ್ವಯತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುವಂತೆ ಪ್ರಜ್ಞಾವಂತರು ಆಗ್ರಹಿಸಿದ್ದಾರೆ. ಪೊಲೀಸ್ ಠಾಣೆ, ತಾಲೂಕು ಕಚೇರಿ ಸೇರಿದಂತೆ ಹಲವಾರು ಮಹತ್ವದ ಸರ್ಕಾರಿ ಇಲಾಖೆಗಳ ಕಾರ್ಯಾಲಯ, ಜೈಹಿಂದ್ ಶಾಲೆ ಈ ಭಾಗದಲ್ಲಿ ಇದ್ದು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿ ಓಡಾಡುತ್ತಿರುತ್ತಾರೆ.

ಕೆಲವರು ಇಲ್ಲಿಯೇ ತಮ್ಮ ವಾಹನ ಪಾರ್ಕ್ ಮಾಡುವುದು ಮಾಡುತ್ತಾರೆ.. ಶಿಥಿಲಗೊಂಡ ಕಂಬಗಳ ಪಕ್ಕದಲ್ಲೇ ಒಂದೆರಡು ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳಿದ್ದು, ಇದೇ ಕಂಬಕ್ಕೆ ತಾಡಪತ್ರಿ ಮತ್ತಿತರ ಮೇಲೋದಿಕೆ ಕಟ್ಟಿಕೊಂಡಿದ್ದು, ಮಳೆ ಗಾಳಿ, ಗುಡುಗು – ಸಿಡಿಲಿನ ಈ ಅವಧಿಯಲ್ಲಿ ಅಂಗಡಿಗಳಿಗೆ ಬಂದು ಹೋಗುವ, ಇಲ್ಲವೇ ಅಲ್ಲಿ ವ್ಯಾಪಾರ ನಡೆಸುವ ಅಂಗಡಿಕಾರರಿಗೆ ಯಾವುದಾದರೂ ಕಾರಣದಿಂದ ವಿದ್ಯುತ್ ಮತ್ತಿತರ ಅವಘಡ ಹಾಗೂ ಜನ – ಜಾನುವಾರುಗಳ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದ್ದು,ಸಂಬಂಧಿತ ಇಲಾಖೆಗಳು ಈ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ.

ಆದಾಯ ಬಂತೆಂದರೆ ಸಾಕು ಎಲ್ಲಿ ಬೇಕಾದರೂ ವ್ಯಾಪಾರ ಮಾಡಲು ಅನುಮತಿ ನೀಡುತ್ತೇವೆ ಎಂಬಂತಿರುವ ಪುರಸಭೆಯವರೂ ಈಗಲಾದರೂ ಕಣ್ತೆರೆದು ನೋಡಿ,ಸಮಸ್ಯೆಯ ಸೂಕ್ಷ್ಮತೆ ಅರಿತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.ಇಲ್ಲದಿದ್ದರೆ ಮುಂದೇನೆ ಅನಾಹುತ ಅಪಾಯವಾದರೂ ಅವರೇ ಅದಕ್ಕೆ ಹೊಣೆಯಾಗಬೇಕಾದೀತು ಎಂದು ಪ್ರಜ್ಞಾವಂತರು ಆಡಿಕೊಳ್ಳುವಂತಾಗಿದೆ.ಸಂಬಂಧಿತ ಇಲಾಖೆಗಳು ಈಗಲಾದರೂ ತಮ್ಮ ಜವಾಬ್ದಾರಿ ನಿಭಾಯಿಸಿಯಾವೇ ? ಅಥವಾ ಶಾಸಕರು ಹೇಳಿದಾಗ ಹೂಂ ಎಂದು, ನಂತರ ಉ-ಹೂಂ ಎಂಬ ದ್ವಂದ್ವ ನಿಲುವೆ ತಿಳಿದು ಬರಬೇಕಿದೆ.ಕಾನೂನಿನ ಚಿಕ್ಕ ಪುಟ್ಟ ಅಡೆತಡೆಗಳಿದ್ದರೂ,ಸಾರ್ವಜನಿಕ ಹಿತ ದೃಷ್ಟಿಯಿಂದ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಮುಂದಾಗ ಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button