ಪೆಟ್ರೋಲ್, ಡಿಸೇಲ್ ದರ ಏರಿಕೆ: ಕಾರಿಗೆ ಹಗ್ಗ ಕಟ್ಟಿಕೊಂಡು ಎಳೆದು ಪ್ರತಿಭಟನೆ

ಭಟ್ಕಳ: ಕಾಂಗೇಸ್ ನೇತೃತ್ವದ ರಾಜ್ಯ ಸರ್ಕಾರವು ಇತ್ತಿಚೆಗೆ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಭಟ್ಕಳ ಬಿಜೆಪಿ ಮಂಡಳವು ವಿನೂತನವಾಗಿ ಕಾರಿಗೆ ಹಗ್ಗ ಕಟ್ಟಿಕೊಂಡು ಎಳೆಯುವುದರ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು. ಭಟ್ಕಳದ ಪ್ರವಾಸಿ ಮಂದಿರದಿoದ ಮೆರವಣಿಗೆಯ ಮೂಲಕ ಸಾಗಿ ಬಂದು ತಾಲೂಕಿನ ಮುಖ್ಯ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಸಹಾಯಕ ಆಯುಕ್ತರ ಮೂಲಕ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯನ್ನು ಹಿಂಪಡೆಯುವುದರ ಕುರಿತು ರಾಜ್ಯಪಾಲರಿಗೆ ಮನವಿ ಪತ್ರವನ್ನು ಬಿಜೆಪಿ ಮುಖಂಡರು ನೀಡಿದರು.

ಈ ಸಂದರ್ಭದಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸುನಿಲ್ ಬಿ ನಾಯ್ಕ ಮಾತನಾಡಿ ಈ ಹಿಂದೆ ಯಾವ ಸರ್ಕಾರವು ಮಾಡದೆ ಇರುವಷ್ಟು ತೈಲ ಬೆಲೆ ಏರಿಕೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಮಾಡಿದೆ. ಇದು ಕೇವಲ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗೆ ಮಾತ್ರ ಸಿಮಿತವಾಗಿಲ್ಲ. ಈ ದಿನಗಳಲ್ಲಿ ರಾಜ್ಯ ಸರ್ಕಾರ ಕೇವಲ 100 ರೂಪಾಯಿ ಸಿಗುತ್ತಿದ್ದ ಬಾಂಡ್ ಪೇಪರ್ ದರವನ್ನು 500 ರೂ ಗೆ ಏರಿಸಿದೆ. ಕಾಂಗ್ರೇಸ್ ಸರ್ಕಾರ ಬಡ ಜನರ ಹಣ ದೋಚುವ ಕೆಲಸ ಮಾಡುತ್ತಿದೆ. ಈ ಸರ್ಕಾರ ತೊಲಗುವವರೆಗೂ ತಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

ಇನ್ನೂ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾವಲು ಪಡೆಯ ಮಾಜಿ ಅಧ್ಯಕ್ಷರಾದ ಗೋವಿಂದ ನಾಯ್ಕ ಮಾತನಾಡಿ ಕಾಂಗ್ರೇಸ್ ಸರ್ಕಾರ ಬಂದ ದಿನದಿಂದಲೂ ಒಂದಲ್ಲ ಒಂದು ರೀತಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಮಹರ್ಷಿ ವಾಲ್ಮಿಕಿ ನಿಗಮ ಪ್ರಕರಣ ನೈತಿಕ ಹೊಣೆ ಹೊತ್ತು ಸಿ.ಎಂ ಸಿದ್ದಾರಾಮಯ್ಯ ರಾಜಿನಾಮೆ ನೀಡಬೇಕು. ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ. ಇದೀಗ ತೈಲ ಬೆಲೆಯನ್ನು ಏರಿಕೆ ಮಾಡುವುದರ ಮುಖಾಂತರ ಎಲ್ಲಾ ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ ಕಾರಣರಾಗಿದ್ದಾರೆ. ರಾಜ್ಯದ ಜನ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಮಂಡಳದ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಶ್ರೀಕಾಂತ ನಾಯ್ಕ, ಶಿವಾನಿ ಶಾಂತರಾಮ ಮತ್ತಿತರು ಇದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Exit mobile version