ಕಾರವಾರ : ವಿಧಾನ ಪರಿಷತ್ ಮಾಜಿ ಸದಸ್ಯರಾಗಿದ್ದ ಶುಭಲತಾ ವಸಂತ ಅಸ್ನೋಟಿಕರ ಸೆ. 25 ರ ಬುಧವಾರ ಸ್ವಗೃಹ ವಸಂತ ನಿಲಯದಲ್ಲಿ ವಿಧಿವಶರಾದರು. ಅಂಕೋಲಾದ ಮಗಳಾಗಿದ್ದ ಶುಭಲತಾ ಅಸ್ನೋಟಿಕರ ಅವರು ಕಾರವಾರ – ಜೊಯ್ದಾದ ಅಂದಿನ ಜನಪ್ರಿಯ ಶಾಸಕರಾಗಿದ್ದ ವಸಂತ ಅಸ್ನೋಟಿಕರ ಅವರ ಧರ್ಮಪತ್ನಿಯಾಗಿದ್ದರು.
ಪತಿಯ ಅಕಾಲಿಕ ಅಗಲಿವಿಕೆಯ ನೋವು ಹಾಗೂ ದುಃಖದ ನಡುವೆಯೂ ತನ್ನ ಕುಟುಂಬದ ಜವಾಬ್ದಾರಿ ಹೊತ್ತಿದ್ದಲ್ಲದೇ ತಮ್ಮ ಕುಟುಂಬವನ್ನು ನಂಬಿದ್ದ ಸಾವಿರಾರು ಜನರಿಗೆ, ಅಭಿಮಾನಿಗಳಿಗೆ ಹಾಗೂ ನನ್ನ ರೀತಿಯ ಸಹಾಯ ಹಸ್ತ ಕೇಳಿ ಬಂದ ಹಲವರಿಗೆ ಮಾತೃ ಹೃದಯದಿಂದ ಪ್ರೀತಿ ನೀಡಿ,ಹಲವರ ಕಷ್ಟಕ್ಕೆ ನೆರವಾದವರು. ಎಂ.ಎಲ್ ಸಿ ಯಾಗಿ ಆಯ್ಕೆಗೊಂಡು, ಜಿಲ್ಲೆಯ ಜನಪರ ಕಾರ್ಯಗಳಿಗೆ ಕೈಜೋಡಿಸಿ, ಅಸ್ನೋಟಿಕರ ಕುಟುಂಬದ ಕೀರ್ತಿ ಹೆಚ್ಚಿಸಿದ್ದರು.
ಅಪಾರ ದೈವಭಕ್ತರಾಗಿದ್ದ ಶುಭಲತಾ ಅಸ್ನೋಟಿಕರ ಅವರು, ಧಾರ್ಮಿಕ ಸಾಂಸ್ಕೃತಿಕ ಮತ್ತಿತರ ವಿಧಾಯಕ ಕಾರ್ಯಗಳಿಗೆ ತನ್ನ ಕೈಲಾದ ಸೇವೆ ಸಹಕಾರ,ತನುಮನ ಧನ ಪ್ರೋತ್ಸಾಹ ನೀಡಿದವರು.ಮಗ ಆನಂದ ಅಸ್ನೋಟಿಕರ ಅತಿ ಕಿರಿಯ ವಯಸ್ಸಿನಲ್ಲಿಯೇ ರಾಜ್ಯದ ಪ್ರಭಾವಿ ಮಂತ್ರಿಯಾಗಿ ಗುರುತಿಸಿಕೊಳ್ಳಲು,ಈ ಮಹಾ ತಾಯಿಯ ಅಶೀರ್ವಾದ, ಸನ್ನಡತೆ,ಕ್ಷೇತ್ರದ ಜನತೆಯೊಂದಿಗೆ ನಿಕಟ ಒಡನಾಟ ಮುಖ್ಯವಾಗಿತ್ತು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಶುಭಲತಾ ಅವರ ಆರೋಗ್ಯ ಸ್ಥಿರತೆ ಕಾಪಾಡಿಕೊಳ್ಳಲು ಮಗ ಆನಂದ ಅಸ್ನೋಟಿಕರ ಮತ್ತು ಕುಟುಂಬವರ್ಗ ಅತ್ಯಂತ ಕಾಳಜಿಯಿಂದ ಮಾತೃ ಋುಣ ತೀರಿಸಲು ಮುಂದಾಗಿತ್ತು.
ಮನೆಯ ಹಾಗೂ ಸಮಾಜದ ಬೆಳಕಿನಂತಿದ್ದ ಎಲ್ಲರ ಮಮತೆಯ ತಾಯಿ (ಶುಭ ಮಾತಾ ), ಕೊನೆಗೂ ಎಲ್ಲರನ್ನು ತೊರೆದು ದೈವಪಾದ ಸೇರಿದ್ದಾರೆ.ಇವರ ಅಕಾಲಿಕ ನಿಧನಕ್ಕೆ ಜಿಲ್ಲೆಯ ರಾಜ್ಯದ ಹಾಗೂ ಕೇಂದ್ರದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಸೆ 26 ರ ಗುರುವಾರ ಬೆಳಿಗ್ಗೆ 11 ಘಂಟೆ ಸುಮಾರಿಗೆ ಕಾರವಾರ ಪಾದ್ರಿಬಾಗದ ವಸಂತ ಅಸ್ನೋಟಿಕರ ಸಮಾಧಿ ಬಳಿಯೇ ನೆರವೇರಿಸಲಾಗುವುದೆಂದು ಕುಟುಂಬದ ಅಪ್ತ ವರ್ಗ ತಿಳಿಸಿದೆ. ಈ ಮಹಾತಾಯಿಯ ದಿವ್ಯಾತ್ಮಕ್ಕೆ ನಾವು ನೀವೆಲ್ಲ ಶಾಂತಿ ಕೊರೋಣ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ