ಬ್ಯಾಂಕ್ ಸಾಲ ಪಾವತಿಸದ ಹಿನ್ನಲೆ: ಬ್ಯಾಂಕ್ ಸಿಬ್ಬಂದಿಯಿಂದ ವ್ಯಕ್ತಿ ಮೇಲೆ ಹಲ್ಲೆ ಆರೋಪ

ಭಟ್ಕಳ: ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಭಟ್ಕಳದ ಸೇಂಟ್ ಮಿಲಾಗ್ರಿಸ್ ಬ್ಯಾಂಕ್ ಸಿಬ್ಬಂದಿಗಳು ಭಟ್ಕಳ ತಾಲೂಕಿನ ತಲಾಂದ ನಿವಾಸಿಯಾದ ಈಶ್ವರ್ ದುರ್ಗಪ್ಪ ನಾಯ್ಕ ಎಂಬುವವರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಹಲ್ಲೆಗೊಳಗಾದ ಈಶ್ವರ ನಾಯ್ಕ ಸೇಂಟ್ ಮಿಲಾಗ್ರಿಸ್ ಬ್ಯಾಂಕಿನಲ್ಲಿ ಸಾಲವನ್ನು ಪಡೆದಿದ್ದು ಆರ್ಥಿಕ ಸಮಸ್ಯೆಯಿಂದ ಸಾಲ ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜೂನ್ 27 ರಂದು ಸಂಜೆ ಬ್ಯಾಂಕಿನ ಸಿಬ್ಬಂಧಿಗಳು ಈಶ್ವರ ನಾಯ್ಕ ಕೆಲಸ ಮಾಡುತ್ತಿರುವ ಚಾಲುಕ್ಯಾ ಟ್ರಾವೆಲ್ಸ್ ಕಛೇರಿಗೆ ಬಂದು ಅವಾಚ್ಯ ಪದಗಳಿಂದ ನಿಂದಿಸಿ ಸಾಲ ಮರು ಪಾವತಿಸುವಂತೆ ಒತ್ತಾಯಿಸಿದ್ದಾರೆ.

ಅಷ್ಟೇ ಅಲ್ಲದೆ ಸಾಲ ತೀರಿಸಲು ಸಾಧ್ಯವಾಗದಿದ್ದರೆ ಹುಲಿವೇಷ ತೊಟ್ಟು ಬಿಕ್ಷೆ ಬೇಡಿ ಸಾಲ ತುಂಬುವಂತೆ ನಿಂದಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಈಶ್ವರ ನಾಯ್ಕ ಆರೋಪಿಸಿದ್ದಾನೆ. ಹಲ್ಲೆಗೊಳಗಾದ ಈಶ್ವರ ನಾಯ್ಕ ಭಟ್ಕಳದ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಅಜಯ್ ವೆಂಕಟೇಶ ನಾಯ್ಕ, ರಾಜೇಶ ಮಾದೇವ ನಾಯ್ಕ, ಕಿರ್ತಿರಾಜ್ ಪಾಂಡುರಂಗ ಶಿರಾಲಿ, ದೇವೇಂದ್ರ ಕುಪ್ಪ ನಾಯ್ಕ, ರೋಹಿತ್ ಸುರೇಶ ಮೊಗೇರ, ನಾಗರಾಜ್ ಪರಮೇಶ್ವರ ದೇವಾಡಿಗ ಆರೋಪಿತರಾಗಿದ್ದು, ಭಟ್ಕಳದ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತಂತೆ ಪ್ರತಿದೂರು ದಾಖಲಾಗಿದ್ದು ಬ್ಯಾಂಕ್ ನ ಸಿಬ್ಬಂಧಿಗಳು ಲೋನ್ ರಿಕವರಿಗೆ ತೆರಳಿದಾಗ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಕುರಿತಾಗಿ ಈಶ್ವರ ನಾಯ್ಕ, ನಗೀನ ನಾಯ್ಕ, ನಾಗೇಶ ನಾಯ್ಕ, ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ

Exit mobile version