ತೀರ್ಥಯಾತ್ರೆಗೆ ಹೋಗಿದ್ದ ವೇಳೆ ಕಾಣೆ: 12 ವರ್ಷಗಳ ಬಳಿಕ ಪತ್ತೆಯಾಗಿದ್ದು ಹೇಗೆ ನೋಡಿ?

ಅಂಕೋಲಾ :ತೀರ್ಥ ಯಾತ್ರೆಗೆಂದು ತೆರಳಿದ್ದ ವ್ಯಕ್ತಿಯೋರ್ವ, ಅದೇಗೋ ತನ್ನ ಕುಟುಂಬ ವರ್ಗದೊಂದಿಗೆ ಬೇರ್ಪಟ್ಟು, ಅದೆಲ್ಲಿಯೋ ಹೋಗಿ ಕಾಣೆಯಾಗಿದ್ದ. ಅದಾಗಿ ಸರಿ ಸುಮಾರು 12 ರಿಂದ 13 ವರ್ಷಗಳ ನಂತರ, ಸಾಮಾಜಿಕ ಕಳಕಳಿಯಿಂದ ಆಗುಂಬೆಯಲ್ಲಿ ಹೊಟೇಲ್ ನಡೆಸುತ್ತಿದ್ದ ಒರ್ವರು, ಉತ್ತರ ಕನ್ನಡ ಜಿಲ್ಲೆಯ ತನ್ನ ಗೆಳೆಯರೊಬ್ಬರಿಗೆ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಒಂದೇ ಒಂದು ಮೆಸೇಜ್, ಕಾಣೆಯಾದ ಆ ವೃಕ್ತಿಯ ಗುರುತು ಪತ್ತೆ ಹಾಗೂ ಇರುವಿಕೆಗೆ ಸಹಕಾರಿಯಾಯಿತು. ನಂತರ ಕುಟುಂಬಸ್ಥರು ಮೆಸೇಜನಲ್ಲಿ ಬಂದಿದ್ದ ಆ ವಿಳಾಸಕ್ಕೆ ತಲುಪಿ. ಆತನನ್ನು ಊರಿಗೆ ಕರೆತಂದ ಬಲು ಅಪರೂಪದ ಘಟನೆ ನಡೆದಿದೆ.

ಮಕ್ಕಳನ್ನು ನೋಡಿ ಬರುವುದಾಗಿ ಹೇಳಿ ಹೋದ ವಿವಾಹಿತ ಮಹಿಳೆ ಕಾಣೆ: ದೂರಿನಲ್ಲಿ ಏನಿದೆ ?

ಕುಮಟಾ ಮಿರ್ಜಾನ, ಚಿತ್ರಾಕೂರ್ವೆ ಮೂಲದ, ವಾಸುದೇವ ಗಿರಿಯಾ ಪಟಗಾರ ಎಂಬಾತನೇ, ಕಾಣೆಯಾಗಿ ಸುಮಾರು 12 ವರ್ಷಗಳ ನಂತರ ಮತ್ತೆ ಮನೆ ಸೇರಿದ ವ್ಯಕ್ತಿಯಾಗಿದ್ದಾನೆ. ಸರಿ ಸುಮಾರು 12 – 13 ವರ್ಷಗಳ ಹಿಂದೆ ಈತನು ತನ್ನ ಮನೆಯಿಂದ ಪತ್ನಿಯ ಜೊತೆ ಕೊಲ್ಲೂರು ಇಲ್ಲವೇ ಶೃಂಗೇರಿಗೆ ದೇವಸ್ಥಾನಕ್ಕೆ ತೆರಳಿದ್ದಾಗ, ಸ್ವಲ್ಪ ಬುದ್ದಿ ಮಾಂದ್ಯ ನಂತಿದ್ದ ಎನ್ನಲಾದ ಆ ವ್ಯಕ್ತಿ ಅದೇಗೋ ಪತ್ನಿಯಿಂದ ಬೇರ್ಪಟ್ಟು ಕಾಣೆಯಾಗಿದ್ದ ಎನ್ನಲಾಗಿದೆ.

ಮೃತಪಟ್ಟಿದ್ದ ಎಂದೇ ಭಾವಿಸಿದ್ದರು

ಆ ನಂತರ ಕುಮಟಾಕ್ಕೆ ಮರಳಿದ್ದ ಆತನ ಪತ್ನಿ ತನ್ನ ಪತಿ ಕಾಣೆಯಾಗಿರುವ ಕುರಿತು ಪೊಲೀಸರಿಗೂ ಮಾಹಿತಿ ನೀಡಿದ್ದಳು ಎನ್ನಲಾಗಿದೆ. ಸುಮಾರು 7-8 ದಿನಗಳ ಕಾಲ ಆತನ ಪತ್ತೆಗೆ ಪೊಲೀಸರು ಮತ್ತು ಪಟಗಾರ ಕುಟುಂಬದವರು ಅಲ್ಲಿ ಇಲ್ಲಿ ಹುಡುಕಾಡಿದರೂ, ಕಾಣೆಯಾದವ ಸಿಗದೇ, ತಮ್ಮ ಪ್ರಯತ್ನ ಅಷ್ಟಕ್ಕೇ ಬಿಟ್ಟಿದ್ದರು ಎನ್ನಲಾಗಿದೆ ಅದಾಗಿ ತಿಂಗಳು, ವರ್ಷ, ಎರಡು ವರ್ಷ ಹೀಗೆ ದಿನಗಳು ಉರುಳುತ್ತಾ ಉರುಳುತ್ತಾ ಸರಿಸುಮಾರು 12-13 ವರ್ಷಗಳೇ ಗತಿಸಿಹೋಗಿದ್ದು, ಕಾಣೆಯಾಗಿದ್ದ ತಮ್ಮ ಕುಟುಂಬ ಸದಸ್ಯ ಬದುಕಿರುವ ಸಾಧ್ಯತೆ ಕಡಿಮೆ ಎಂದೇ ತಿಳಿದಿದ್ದರು.

ಋುಣಾನುಬಂಧ ಮುಗಿದಿಲ್ಲ ಎಂಬಂತೆ, ಕಾಣೆಯಾಗಿದ್ದ ಆ ವ್ಯಕ್ತಿ ಒಂದು ದಿನ ರಾತ್ರಿ ಆಗುಂಬೆ ವ್ಯಾಪ್ತಿಯ ಸೋಮೇಶ್ವರದ ವಿಜಯ ಕೆಫೆ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ, ದಾರಿಹೋಕನಿಗೆ ಕರೆದ ಕೆಫೆಯ ಮಾಲೀಕ, ಮಾನವೀಯ ನೆಲೆಯಲ್ಲಿ ಒಳಗೆ ಕರೆದು, ಹಸಿವಾಗಿದೆ ಎಂದಾಗ ಊಟ ಉಪಹಾರ ನೀಡಿದ್ದಾರೆ. ಬಳಿಕ ನಿಧಾನವಾಗಿ ಆ ವ್ಯಕ್ತಿಯ ಹೆಸರು, ಊರು,,ಕುಟುಂಬಸ್ಥರ ಬಗ್ಗೆ ಕೇಳಿದಾಗ, ಆಗ ಆ ವ್ಯಕ್ತಿ ತಾನು ಕುಮಟಾದ ಮಿರ್ಜಾನ ನವನು ಎಂದು ತಿಳಿಸಿದ ಎನ್ನಲಾಗಿದೆ. ಒಂದೊಮ್ಮೆ ಆತ ಹೇಳುವ ವಿಳಾಸ ಸರಿಯಾಗಿದ್ದರೆ ಆತನನ್ನು ಏಕೆ ಅವರ ಮನೆ ತಲುಪಿಸುವ ಪ್ರಯತ್ನ ಪಡಬಾರದು ಎಂದು ಯೋಚಿಸಿದ ಕೆಫೆಯ ಮಾಲಕ ಶ್ರೀನಾಥ ಭಕ್ತ ಎನ್ನುವವರು,ಆ ವ್ಯಕ್ತಿಗೆ ತಮ್ಮ ಕೆಫೆಯಲ್ಲಿಯೇ ಇರಿಸಿಕೊಂಡು, ಆತನ ಪೋಟೋ ಕ್ಲಿಕ್ಕಿಸಿ, ತನ್ನ ಪರಿಚಿತ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಮೂಲದ ರಾಮಚಂದ್ರ ಎನ್ನುವವರ ಮೊಬೈಲ್ ಗೆ ಸಂದೇಶ ಕಳುಹಿಸಿದ್ದಾರೆ.

ಈ ವೇಳೆ ರಾಮಚಂದ್ರ ಅವರೂ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು, ತಮ್ಮ ಜಿಲ್ಲೆಯವರೆಂಬ ಹೆಮ್ಮೆಯಿಂದ ಮತ್ತಷ್ಟು ಬೇಗನೆ, ವಿಳಾಸ ಖಚಿತತೆಗೆ ಮುಂದಾಗಿ, ಕುಮಟಾ ಊರಿನ ನಾಗರಿಕರ ಗಮನಕ್ಕೆ ಎಂಬ ತಲೆ ಬರಹದಡಿ, ಆಗುಂಬೆಯಲ್ಲಿ ಪತ್ತೆಯಾಗಿರುವ ವ್ಯಕ್ತಿ ಬಗ್ಗೆ ವಿವರಣೆ ನೀಡಿ, ಈತ ಕುಮಟಾ ಮಿರ್ಜಾನ ದವನು ಎನ್ನುತ್ತಿದ್ದಾನೆ, ಆತನ ಕುಟುಂಬಸ್ಥರಿಗೆ ಈ ಸಂದೇಶ ತಲುಪುವಂತೆ ಮಾಡಿ ಎಂದು ವ್ಯಕ್ತಿಯ ಪೋಟೋ ಸಮೇತ ಮನವಿ ರೂಪದ ಮತ್ತು ಸಾಮಾಜಿಕ ಕಳಿಕಳಿಯುಳ್ಳ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಂತರ ಆ ಸಂದೇಶ ಕುಮಟಾದ ಹಲವರ ಮೊಬೈಲ್ ಗಳಲ್ಲಿ ಹರಿದಾಡಲಾರಂಭಿಸಿದೆ.

ಸಹೋದರರ ಸಮ್ಮಿಲನ

ಒಬ್ಬರಿಂದ ಒಬ್ಬರಿಗೆ ಹರಿದಾಡಿದ ಈ ಸಂದೇಶ, ಕಾಣೆಯಾಗಿದ್ದ ವ್ಯಕ್ತಿಯ ಸಹೋದರನಾದ ಅಂಕೋಲಾ ಹೊನ್ನಳ್ಳಿಯಲ್ಲಿ ವಾಸವಾಗಿರುವ, ಈ ಹಿಂದೆ ಥರ್ಮಲ್ ಪವರ್ ಘಟಕದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಚಂದ್ರು ಪಟಗಾರ ಎನ್ನುವವರಿಗೆ, ಶಿರಸಿಯಲ್ಲಿರುವ ಅವರ ಅಳಿಯನ ಮೂಲಕ ತಲುಪಿದೆ. ಕೂಡಲೇ ಆ ಮೂಲ ಸಂದೇಶ ಕಳಿಸಿದ ದೂರದ ಆಗುಂಬೆಯಲ್ಲಿರುವ ಶ್ರೀನಾಥ ಭಕ್ತ ಅವರಿಗೆ ಕರೆ ಮಾಡಿದ ಪಟಗಾರ ಕುಟುಂಬಸ್ಥರು, ಆತ ನಮ್ಮ ಸಹೋದರ , ನಾವು ಅವನನ್ನು ಕರೆದುಕೊಂಡು ಹೋಗಲು ಬರುತ್ತೇವೆ ಎಂದು ಹೇಳಿ, ಆಗುಂಬೆಯತ್ತ ಪ್ರಯಾಣ ಬೆಳೆಸಿದ್ದಾರೆ.

ಬಳಿಕ ಅಲ್ಲಿ ತಲುಪಿ, ಬಹು ವರ್ಷಗಳ ನಂತರ ಸಹೋದರರೀರ್ವರೂ ಮುಖಾ ಮುಖಿಯಾಗಿ,ತನ್ನವರು ಮರಳಿ ದೊರೆತ ಸಂತಸದ ಘಳಿಗೆಗೆ ಸಾಕ್ಷಿಯಾಗಿದೆ. ನಂತರ ಕೆಫೆಯ ಮಾಲೀಕನಿಗೆ ಧನ್ಯವಾದ ತಿಳಿಸಿ, ತನ್ನ ಸಹೋದರ ವಾಸುದೇವನನ್ನು, ಆಗುಂಬೆಯಿಂದ ಮೊದಲು ಕುಮಟಾಕ್ಕೆ
ಕರೆದುಕೊಂಡು ಬಂದು, ಬಳಿಕ ಅಲ್ಲಿಂದ ಅಂಕೋಲಾದ ಹೊನ್ನಳ್ಳಿಯ ತನ್ನ ಮನೆಗೆ ಕರೆತಂದ ಚಂದ್ರು ಪಟಗಾರ, ಅಲ್ಲಿಯೇ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಿಕೊಟ್ಟು ಅಣ್ಣ- ತಮ್ಮಂದಿರ ಸಂಬಂಧಕ್ಕೆ ಮಾದರಿಯಾಗಿದ್ದಾರೆ.

ಪುಟ್ಟ ಮಗಳು ಪಾದರಕ್ಷೆ ತೆಗೆಸಿಕೊಟ್ಟಳು

ಈ ಋುಣಾನುಬಂಧ ಬೆಸೆಯಲು ಕೈ ಜೋಡಿಸಿದ ಸರ್ವರ ಮಾನವೀಯ ಸೇವೆ, ಮತ್ತು ಮೌಲ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕಿದೆ. ಶ್ರೀನಾಥ ಭಕ್ತನ ಜೊತೆ ಆತನ ಧರ್ಮಪತ್ನಿ ಶ್ರೀ ಲಕ್ಷ್ಮೀ ಭಕ್ತ ಇವರು, ಪತಿಯ ಸತ್ಕಾರ್ಯಕ್ಕೆ ಬೆನ್ನೆಲುಬಾಗಿ ತಾನೂ ಸಹ ಅಪರಿಚಿತ ದಾರಿಹೋಕ ವ್ಯಕ್ತಿಗೆ ಸತ್ಕರಿಸಿದ್ದಾರೆ. ತನ್ನ ಅಜ್ಜನ ವಯಸ್ಸಿನ ಆ ವ್ಯಕ್ತಿ ಬರಿಗಾಲಲ್ಲಿ ನಡೆದಾಡುವುದನ್ನು ಕಂಡು, ಮರುಗಿದ ಆ ದಂಪತಿಗಳ ಪುಟ್ಟ ಮಗಳು ಅನ್ನ ಪೂರ್ಣ ಭಕ್ತ ಇವಳು, ತಾನು ಕೂಡಿಟ್ಟ ಚಿಲ್ಲರೆ ಹಣ ಒಟ್ಟುಗೂಡಿಸಿ,ತಮ್ಮ ಮನೆಯಲ್ಲಿ ಆಶ್ರಯ ಪಡೆದಿದ್ದ ಅದೇ ವ್ಯಕ್ತಿಗೆ ಪಾದರಕ್ಷೆ ತೆಗೆಸಿಕೊಟ್ಟು ತಾನೂ ಸಂತಸ ಪಟ್ಟಿದ್ದಾಳೆ ,

ಒಟ್ಟಿನಲ್ಲಿ ಹಣ ಪಡೆಯದೇ ಕುಡಿಯಲು ಗುಟುಕು ನೀರು ನೀಡಲು ಹಿಂದೆ ಮುಂದೆ ಯೋಚಿಸುವ ಕೆಲ ಜನರಿರುವ ಇಂದಿನ ಆಧುನಿಕ ಸಮಾಜದಲ್ಲಿ, ಭಕ್ತ ಕುಟುಂಬದವರು, ಮಧ್ಯ ವಯಸ್ಕ ದಾರಿಹೋಕನೊಬ್ಬನ ಬಗ್ಗೆ ಕಾಳಜಿ ತೋರಿ,ಅವನನ್ನು ಮನೆಗೆ ತಲುಪಿಸಲು ತೋರಿದ ಮಾನವೀಯ ಮತ್ತು ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಿದೆ.

ಅಂತೆಯೇ ಈ ಮಹತ್ಕಾರ್ಯದ ಹಿಂದೆ ಸಂದೇಶವಾಹಕನಾದ ಭಟ್ಕಳ ಮೂಲದ ರಾಮಚಂದ್ರನ ಪಾತ್ರವೂ ದೊಡ್ಡದಿದೆ. ಜೊತೆ ಜೊತೆಯಲ್ಲಿ ಈ ಮೆಸೇಜನ್ನು ಒಬ್ಬರಿಂದ ಒಬ್ಬರಿಗೆ ಕಳಿಸಿ,ಆತನ ಮನೆಯವರೆಗೂ ತಲುಪಿಸಲು ತಮ್ಮ ಅಳಿಲು ಸೇವೆ ಸಲ್ಲಿಸಿದ ಅದೆಷ್ಟೋ ಜನರಿದ್ದಾರೆ.ಆರಂಭದಿಂದ ಸುಖಾಂತ್ಯದ ವರೆಗೆ ತಮ್ಮ ತಮ್ಮ ಸೇವಾ ಕಾರ್ಯ ನಡೆಸಿದ ಸರ್ವರಿಗೂ ನಿಮ್ಮದೊಂದು ಮೆಚ್ಚುಗೆ ಇರಲಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version