ಅತ್ತೆ ಮಗನ ವಿರುದ್ಧ ದೂರು ದಾಖಲಿಸಿದ ಅಪ್ರಾಪ್ತ ಬಾಲಕಿ: ಪುಸಲಾಯಿಸಿ, ತಾಳಿಕಟ್ಟಿ ಗರ್ಭಿಣಿ ಮಾಡಿದ

ಅಂಕೋಲಾ: ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರ ಕಾರವಾರ ಕಡೆ ಸಾಗುವ ಮಾರ್ಗ ಮಧ್ಯದ, ಗ್ರಾಮೀಣ ಪ್ರದೇಶ ಒಂದರ ಬಾಲಕಿ ಒರ್ವಳು, ತನಗೆ ಪುಸಲಾಯಿಸಿ ಗರ್ಭಿಣಿಯಾಗಿಸಿದ್ದಾನೆ ಎಂದು ಅತ್ತೆಮಗನ ವಿರುದ್ಧವೇ ದೂರು ದಾಖಲಿಸಿದ ಘಟನೆ ನಡೆದಿದೆ. ಕುಮಟಾ ಕಡೆ ಸಾಗುವ ಹೆದ್ದಾರಿಗೆ ಹತ್ತಿರವಿರುವ ತಾಲೂಕು ವ್ಯಾಪ್ತಿಯ ಗ್ರಾಮವೊಂದರ ಹಾಸ್ಟೆಲ್ ಬಳಿ ವಾಸವಿರುವ ಅತ್ತೆಯ ಮಗನ ವಿರುದ್ಧವೇ ಬಾಲಕಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ತನ್ನ ಮನೆಯಲ್ಲಿದ್ದು ಕೊಂಡೇ ಪ್ರಾಥಮಿಕ ಶಿಕ್ಷಣ ಮುಗಿಸಿ,ಹೈಸ್ಕೂಲ್ ಹಂತಕ್ಕೆ ಬಂದಾಗ, ಬೇರೊಂದು ಊರಿನಲ್ಲಿರುವ ತನ್ನ ಅತ್ತೆಯ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸಿದ್ದು, ಒಂದು ದಿನ ರಾತ್ರಿ ವೇಳೆ ಮಲಗಿದ್ದಾಗ ಹತ್ತಿರ ಬಂದ ಅವಳ ಅತ್ತೆಯ ಮಗ ವಿಜಯಕುಮಾರ ಎಂಬಾತ, ಅವಳಿಗೆ ತಾನು ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ಪುಸಲಾಯಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.,

ತದನಂತರ ಮತ್ತೊಂದು ದಿನ ಗೋಕರ್ಣದ ದೇವಸ್ಥಾನ ಒಂದಕ್ಕೆ ಕರೆದು ಕೊಂಡು ಹೋಗಿ ಪುಸಲಾಯಿಸಿ ತಾಳಿ ಕಟ್ಟಿದ್ದು, ನನ್ನನ್ನು ಐದು ತಿಂಗಳ ಗರ್ಭವತಿಯಾಗಿಸಿದ್ದಾನೆ ಎಂದು ನೊಂದ ಅಪ್ರಾಪ್ತಳು, ದೂರಿನಲ್ಲಿ ತಿಳಿಸಿದ್ದಾಳೆ ಎನ್ನಲಾಗಿದೆ. ಸದ್ಯ ನೊಂದ ಅಪ್ರಾಪ್ತೆಗೆ ಅವಳ ಮತ್ತು ಕುಟುಂಬದವರ ಕೋರಿಕೆ ಮತ್ತು ಆಶಯದಂತೆ ಮೂಲ ಮನೆ (ತವರು ಮನೆ ) ಯಲ್ಲಿಯೇ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಟ್ಟು,ಆರೋಗ್ಯ ಕಾಳಜಿ ವಹಿಸುವಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.

ಅಪ್ರಾಪ್ತಳನ್ನು ಪುಸಲಾಯಿಸಿ ಗರ್ಭವತಿ ಮಾಡಿದ್ದಲ್ಲದೇ, ತಾಳಿ ಕಟ್ಟಿದ ಆರೋಪದಡಿ ವಿಜಯ ಕುಮಾರ (20 ) ಎಂಬ ಯುವಕನ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು,ಕಾನೂನು ಕ್ರಮ ಮುಂದುವರಿಸಿದ್ದಾರೆ ಎನ್ನಲಾಗಿದ್ದು,ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version