ಇಂದು ಶಿರೂರು ಮತ್ತು ಉಳುವರೆಗೆ ಭೇಟಿ ನೀಡಲಿರುವ ಸಚಿವ ಮಧು ಬಂಗಾರಪ್ಪ
ಗುಡ್ಡ ಕುಸಿತವಾಗುತ್ತಿರುವ ಸರಕಾರಿ ಶಾಲೆಗೂ ಶಿಕ್ಷಣ ಮಂತ್ರಿ ಭೇಟಿ ನೀಡಲಿ ಎನ್ನುತ್ತಿರುವ ಗ್ರಾಮಸ್ಥರು
ಅಂಕೋಲಾ: ಶಿರೂರು ಗುಡ್ಡ ಕುಸಿತದ ದುರಂತದ ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೆಲ ಪ್ರಮುಖರು, ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯ ಸಂತ್ರಸ್ತರನ್ನು ಭೇಟಿಯಾಗಿ, ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಗಸ್ಟ್ 3 ರ ಶನಿವಾರ ಶಿರೂರು ಮತ್ತು ಉಳುವರೆಗೆ ಭೇಟಿ ನೀಡಲಿದ್ದು, ಮಾದನಗೇರಿಯ ಮೂಲಕ ತಾಲೂಕಿಗೆ ಆಗಮಿಸುವ ಅವರು ಮೊದಲು ಉಳುವರೆಗೆ ಭೇಟಿ ನೀಡಿ ನಂತರ ಶಿರೂರಿಗೆ ತೆರಳಲಿದ್ದಾರೆ.
ಶಿರೂರು ಗುಡ್ಡ ಕುಸಿತ ಸಂಭವಿಸಿದ ಸಮೀಪದಲ್ಲಿಯೇ ಇದೇ ಗ್ರಾಮದ ಸರಕಾರಿ ಹಿ.ಪ್ರಾ ಶಾಲೆ (ಕೇಂದ್ರ ಶಾಲೆ ) ಹಿಂಬದಿ ಗುಡ್ಡ ಕುಸಿತವಾಗಿ ಶಾಲೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮಣ್ಣು ತೆರವು, ಶಾಲೆಯ ಪುನರಾರಂಭ ಮತ್ತು ಸಮೀಪದ ಶಾಲೆಗೆ ವರ್ಗಾವಣೆಗೆ ಸಂಬಂಧಿಸಿದಂತೆ ಪಾಲಕರ ಮತ್ತು ಅಧಿಕಾರಿಗಳ ನಡುವೆ ಗೊಂದಲವಿದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ಶಾಲೆಯ ಹಿಂಬದಿ ಗುಡ್ಡ ಕುಸಿತ ವೀಕ್ಷಿಸಿ, ವಿದ್ಯರ್ಥಿಗಳ ಶೈಕ್ಷಣಿಕ ಸಮಸ್ಯೆ ಮತ್ತು ಪಾಲಕರ ಆತಂಕ ದೂರ ಮಾಡಬೇಕೆಂಬ ಆಗ್ರಹ ಸ್ಥಳೀಯರಿಂದ ಕೇಳಿ ಬಂದಿದ್ದು,ಸಂಬಂಧಿತ ಜನಪ್ರತಿನಿಧಿಗಳು ಮತ್ತು ಇಲಾಖೆ ಈ ಕುರಿತು ಸಚಿವರ ಗಮನ ಸೆಳೆಯಬೇಕಿದೆ.
ಆ ಮೂಲಕ ಅಪಾಯಕಾರಿ ಗುಡ್ಡದ ಮಣ್ಣು ತೆರವು ಹಾಗೂ ಶಿಥಿಲಾವಸ್ಥೆಯಲ್ಲಿಯ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಬೇಕೆಂಬ ಆಗ್ರಹ ಸ್ಥಳೀಯರಿಂದ ಕೇಳಿ ಬಂದಿದೆ. ಶಿಕ್ಷಣ ಸಚಿವರ ಗ್ರಾಮ ಭೇಟಿ ಗ್ರಾಮಸ್ಥರಲ್ಲಿ ಹೊಸ ಭರವಸೆ ಮೂಡಿಸಿದೆ. ನಂತರದ ಕ್ರಮಗಳ ಬಗ್ಗೆ ಶನಿವಾರ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ