ಪ್ರಮೋದ ನಾಯಕ ಅವರಿಗೆ ಮುಖ್ಯಮಂತ್ರಿಗಳ ಬಂಗಾರದ ಪದಕ ಪ್ರಧಾನ

ಅಂಕೋಲಾ: ಅಂಕೋಲಾ ವಲಯ ಅರಣ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ, ತಾಲೂಕಿನವರೇ ಆದ ಪ್ರಮೋದ ನಾಯಕ ಅವರಿಗೆ, ಅವರ ಈ ಹಿಂದಿನ ಸೇವೆಗಾಗಿ ಮುಖ್ಯಮಂತ್ರಿಗಳ ಬಂಗಾರದ ಪದಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸಿ.ಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರಧಾನ ಮಾಡಿದರು.

ಗಣೇಶ ಹಬ್ಬದ ವೇಳೆ ಬಹುಮಾನ ಯೋಜನೆ, ಲಾಟರಿ ಟಿಕೇಟ್ ಮಾರಾಟ ನಿಷೇಧ

ರಾಜ್ಯ ಅರಣ್ಯ ಇಲಾಖೆಯ ಕಾರವಾರ ವಲಯದಲ್ಲಿ ಕಡಲ ಜೀವಿಗಳ ಸಂರಕ್ಷಣಾ ವಿಭಾಗದ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ, ಹಾಲಿ ಅಂಕೋಲಾ ವಲಯ ಅರಣ್ಯ ಅಧಿಕಾಯಾಗಿ ಸೇವೆ ಸಲ್ಲಿಸುತ್ತಿರುವ, ಅಂಕೋಲಾ ತಾಲೂಕಿನ ಭಾವಿಕೇರಿಯ ಪ್ರಮೋದ ಪ್ರಕಾಶ ನಾಯಕ ಅವರಿಗೆ ವನ್ಯಜೀವಿ, ಕಡಲ ಜೀವಿಗಳ ಸಂರಕ್ಷಣೆಯಲ್ಲಿ ತೋರಿದ ವಿಶೇಷ ಸಾಧನೆಗೆ 2023 -24 ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ಕಡಲ ಜೀವಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪ್ರಮೋದ ನಾಯಕ ಅವರು ಅಪರೂಪದ ಓಲಿವ್ ರಿಡ್ಲಿ ಕಡಲಾಮೆಗಳ ಸಹಸ್ರಾರು ಮೊಟ್ಟೆಗಳನ್ನು ಕಾರವಾರ ಮತ್ತು ಅಂಕೋಲಾ ತಾಲೂಕುಗಳ ಕಡಲ ತೀರಗಳಲ್ಲಿ ಗೂಡುಗಳಲ್ಲಿ ಸಂರಕ್ಷಿಸಿ, ಅವುಗಳಿಂದ ಮರಿ ಬಂದ ಮೇಲೆ ಅವುಗಳನ್ನು ಕಡಲಿಗೆ ಬಿಡುವ, ಮತ್ತು ಕಡಲಾಮೆ ಸಂರಕ್ಷಣೆ ಕುರಿತು ಕಡಲ ತೀರದ ನಿವಾಸಿಗಳು ಹಾಗೂ ಇತರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದರು. ಅಲ್ಲದೇ ನೀಲಿಕಲ್ಲು ಮತ್ತು ಕಲಗಾ ಕೃಷಿ, ಮುತ್ತು ಬೆಳೆಯುವ ಅವಕಾಶ, ಕಾಂಡ್ಲಾ ಸಸಿ ಬೆಳೆಸುವುದು ಸೇರಿದಂತೆ ಪರಿಸರ ಸಂರಕ್ಷಣೆ ಮತ್ತು ಕಡಲ ಆಹಾರ ಉತ್ಪನ್ನಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಾ,ಇಲಾಖೆಯ ಕಾರ್ಯವನ್ನು ಜನಪರವಾಗಿ ಜಾರಿಗೆ ತರಲು ಅವಿರತವಾಗಿ ಶ್ರಮಿಸಿದ್ದರು.

ಮೆದು ಮಾತಿನ,ಸರಳ ನಡೆ ನುಡಿಗಳ ಈ ಯುವ ಅಧಿಕಾರಿಯ ಸೇವೆಗೆ ಮುಖ್ಯಮಂತ್ರಿಗಳ ಬಂಗಾರದ ಪದಕ ಭಾಗ್ಯ ಒಲಿದು ಬಂದಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲಿ ಇವರ ಉತ್ತಮ ಸೇವೆಗಾಗಿ ಬಂಗಾರದ ಪದಕ ನೀಡಿ ಪುರಸ್ಕರಿಸಲಾಯಿತು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರಧಾನ ಮಾಡಿ, ಯುವ ಅಧಿಕಾರಿಯ ಸೇವೆಯನ್ನು ಪ್ರಶಂಸಿಸಿದರು. ಅರಣ್ಯ ಸಚಿವ ಈಶ್ವರ ಖಂಡ್ರೆ , ಮತ್ತಿತರ ಗಣ್ಯರು, ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತಿತರಿದ್ದರು. ಪ್ರಮೋದ ನಾಯಕ ಕುಟುಂಬವರ್ಗದವರು ಈ ಸುಂದರ ಘಳಿಗೆಯನ್ನು ಕಣ್ತುಂಬಿಸಿಕೊಂಡರು.

ಅಂಕೋಲಾ ತಾಲೂಕಿನ ಯುವ ಅಧಿಕಾರಿಗೆ ಮುಖ್ಯ ಮಂತ್ರಿಗಳ ಬಂಗಾರದ ಪುರಸ್ಕಾರ ಒಲಿದು ಬಂದಿರುವುದಕ್ಕೆ , ತಾಲೂಕಿನ ಹಾಗೂ ಜಿಲ್ಲೆಯ ಹಲವು ಗಣ್ಯರು ಹಾಗೂ ಪರಿಸರ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿ, ಇವರಿಂದ ಮತ್ತಷ್ಟು ಹಸಿರು ಸೇವೆ ದೊರೆಯಲಿ ಎಂದು ಶುಭ ಹಾರೈಸಿ ಅಭಿನಂದಿಸಿದ್ದಾರೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version