ಅಂಕೋಲಾ : ಬೈಕುಗಳೆರಡರ ನಡುವೆ ಸಂಭವಿಸಿದ ಡಿಕ್ಕಿಯ ಪರಿಣಾಮ , ಒರ್ವ ಬೈಕ್ ಸವಾರ ಸಿಡಿದು ಬಿದ್ದು ಬಲಗಾಲಿಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದೊಂದಿಗೆ ಒದ್ದಾಡಿದರೆ , ಡಿಕ್ಕಿ ಪಡಿಸಿದ ಇನ್ನೋರ್ವ ಬೈಕ್ ಸವಾರ ಮಾನವೀಯತೆ ಮರೆತು ಸ್ಥಳದಿಂದ ಕಾಲ್ಕಿತ್ತ ಘಟನೆ ಪಟ್ಟಣ ವ್ಯಾಪ್ತಿಯಲ್ಲಿ ಸಂಭವಿಸಿದೆ. ತಾಲೂಕಿನ ಆಂದ್ಲೆ ಗ್ರಾಮದ ನಿವಾಸಿ ದಯಾನಂದ ಗಂಗಾಧರ ನಾಯಕ (40 ) ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದ ಬೈಕ್ ಸವಾರನಾಗಿದ್ದಾನೆ.
ಈತನು ಪಟ್ಟಣದ ಕಾರವಾರ ಅಂಕೋಲಾ ದ್ವಿಪಥ ರಸ್ತೆಗೆ ಹೊಂದಿಕೊಂಡಿರುವ ಸಹಕಾರಿಯೊಂದಕ್ಕೆ ಬ್ಯಾಂಕಿಂಗ್ ವ್ಯವಹಾರಕ್ಕೆ ಬಂದಾಗ ಈ ಅಪಘಾತ ಸಂಭವಿಸಿದೆ:ಜೋರಾಗಿ ಬಂದ ಇನ್ನೋರ್ವ ಬೈಕ್ ಸವಾರ ,ದಯಾನಂದ್ ಇವರ ಬೈಕಿಗೆ ಡಿಕ್ಕಿಪಡಿಸಿದ್ದು ,ಜನರು ಸೇರುವುದರೊಳಗೆ ಸ್ಥಳದಿಂದ ಕಾಲ್ಕಿತ್ತು ಬೈಕನ್ನೇರಿ ಪರಾರಿಯಾಗಿದ್ದಾನೆ ಎನ್ನಲಾಗಿದ್ದು ಈತನು ರಾ ಹೆ 63 ರ ಅಂಚಿನ ಗ್ರಾಮದವನು ಎನ್ನಲಾಗುತ್ತಿದೆ.
108 ಅಂಬುಲೆನ್ಸ್ ಕರೆ ಮಾಡಿದರೂ ಅದಾವುದೋ ಕಾರಣದಿಂದ ತುರ್ತು ಸೇವೆ ಲಭ್ಯವಾಗದೇ ,ಹುಲಿ ದೇವರವಾಡ ನಿವಾಸಿ ವಿಷ್ಣು ನಾಯ್ಕ ಇವರ ಆಟೋ ರಿಕ್ಷಾ ಮೇಲೆ , ಗಾಯಾಳುವನ್ನು ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನಾ ಸ್ಥಳದಿಂದ ಗಾಯಾಳುವನ್ನು ಮೇಲೆತ್ತಲು ಸೇಂಟ್ ಮಿಲಾಗ್ರಿಸ್ ಬ್ಯಾಂಕ್ ಸಿಬ್ಬಂದಿಗಳು , ಸ್ಥಳೀಯರು ಹಾಗೂ ಹೆದ್ದಾರಿ ಗಸ್ತು ವಾಹನದ ಎ ಎಸ್ ಐ ಚಂದ್ರಕಾಂತ ಮತ್ತಿತರರು , ಹಾಗೂ ಗಾಯಾಳುವಿನ ಗ್ರಾಮಸ್ಥರೇ ಆದ ಜಯರಾಮ ಗಣಪಯ್ಯ ಗುನಗ ಮತ್ತಿತರರು ಸಹ ಕರಿಸಿದರು.
ಅಪಘಾತಪಡಿಸಿ ಪರಾರಿಯಾದ ಇನ್ನೋರ್ವ ಬೈಕ್ ಸವಾರನ ಮೇಲೆ ಹಿಟ್ ಎಂಡ್ ರನ್ ಕೇಸ್ ದಾಖಲಾಗುವ ಸಾಧ್ಯತೆ ಇದ್ದು , ಪೊಲೀಸರು ತನಿಖೆ ಹಾಗೂ ಕಾನೂನು ಕ್ರಮ ಮುಂದುವರಿಸಿದ್ದಾರೆ. ಬಲಗಾಲಿಗೆ ತೀವ್ರ ಪೆಟ್ಟು ಬಿದ್ದು ಮೂಳೆ ಮುರಿತವಾಗಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ತೀವ್ರ ರಕ್ತ ಸ್ರಾವದೊಂದಿಗೆ ಗಂಭೀರ ಗಾಯಗೋಡಿರುವ ದಯಾನಂದ ಇವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸುವ ಚಿಂತನೆ ನಡೆದಿದ್ದು , ಸಾಯಂಕಾಲ 5. 20 ರ ವರೆಗೆ ಅಂಬುಲೆನ್ಸ್ ಸೇವೆ ಸಿಗದೇ ಸ್ವಲ್ಪ ವಿಳಂಬವಾದಂತಿತ್ತು. ತದನಂತರ ಖಾಸಗಿ ಅಂಬುಲೆನ್ಸ್ ಸೇವೆ ಹೊಂದಿಸಲಾಯಿತು. ಜಿಲ್ಲೆ ಹಾಗೂ ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆಯ ಕೊರತೆ ನಡುವೆ ,ಆಂಬುಲೆನ್ಸ್ ಮತ್ತು ಇತರ ಕೆಲ ತುರ್ತು ಸೇವೆಗಳು ಸಕಾಲದಲ್ಲಿ ಸಿಗದೇ ಆಗಾಗ ರೋಗಿಗಳ ಕುಟುಂಬಸ್ಥರು ಪರದಾಡುವ ಸ್ಥಿತಿ ನಿಜಕ್ಕೂ ಅತೀವ ನಾಚಿಕೆಗೇಡಿನ ಸಂಗತಿಯಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ