Follow Us On

WhatsApp Group
Important
Trending

ಅಂಕೋಲಾದಲ್ಲಿಂದು ಹೆಚ್ಚಿದ ಕರೊನಾ ಕೇಸ್: ಯಲ್ಲಾಪುರದಲ್ಲಿ ಟೆಸ್ಟ್ ಗೆ ಮುಗಿಬಿದ್ದ ವ್ಯಾಪಾರಿಗಳು

  • 21 ಕೊವಿಡ್ ಕೇಸ್ ದಾಖಲು
  • ಗುಣಮುಖ 1 : ಸಕ್ರಿಯ 101
  • ಸರ್ಕಾರದ ವಿರುದ್ಧ ರೈತ-ಕಾರ್ಮಿಕರ ಪ್ರತಿಭಟನೆ ತಹಶೀಲ್ದಾರ ಮೂಲಕ ಮನವಿ
  • ಕರೊನಾ ಪರೀಕ್ಷೆ ಮಾಡಿಕೊಳ್ಳಲು
  • ಆಸ್ಪತ್ರೆಗೆ ವ್ಯಾಪಾರಿಗಳು ಮುತ್ತಿಗೆ ಹಾಕಿದ್ದು ಯಾಕೆ?

ಅಂಕೋಲಾ : ತಾಲೂಕಿನಲ್ಲಿ ಸೋಮವಾರ ಒಟ್ಟೂ 21 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಸೋಂಕು ಮುಕ್ತರಾದ ಓರ್ವರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನಲ್ಲಿರುವ 55 ಮಂದಿ ಸಹಿತ ತಾಲೂಕಿನಲ್ಲಿ ಒಟ್ಟೂ 101 ಪ್ರಕರಣಗಳು ಸಕ್ರಿಯವಾಗಿದೆ.

ಇಂದು ಅವರ್ಸಾ, ಸಕಲಬೇಣ, ಬಾಳೆಗುಳಿ, ಬಿಳಿಸಿರೆ, ಅಗ್ರಗೋಣ ಪಳ್ಳಿ, ಹೆಗ್ಗೆ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಒಟ್ಟೂ 194 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.


ಸೋಂಕು ಪ್ರಕರಣಗಳು : ಬೆಳಂಬಾರ, ಅಜ್ಜಿಕಟ್ಟಾ, ಕಾಕರಮಠ, ಹೊನ್ನೆಕೇರಿ, ಹನುಮಟ್ಟಾ, ಭಾವಿಕೇರಿ, ಅಂಬೇಡ್ಕರ ಕಾಲನಿ ಸೇರಿದಂತೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ.

ಸರ್ಕಾರದ ವಿರುದ್ದ ರೈತ-ಕಾರ್ಮಿಕರ ಪ್ರತಿಭಟನೆ :

ಕೇಂದ್ರ ಸರಕಾರ ಜಾರಿಗೆ ತಂದ ರೈತ ವಿರೋಧಿ ಭೂ ಸುಧಾರಣೆ ಕಾಯ್ದೆ, ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡೆ ಸೇರಿದಂತೆ ವಿವಿಧ ಜನವಿರೋಧಿ ನೀತಿಯನ್ನು ಖಂಡಿಸಿ ವಿವಿಧ ಸಂಘಟನೆಯವರು ಪ್ರತಿಭಟಿಸಿ, ತಹಶೀಲ್ದಾರ ಉದಯ ಕುಂಬಾರ ಅವರ ಮೂಲಕ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು.

ವಿವಿಧ ಸಂಘಟನೆಗಳು ಸ್ವಯಂ ಪ್ರೇರಿತ ಬಂದ್‍ಗೆ ಕರೆ ನೀಡಿದ್ದವಾದರೂ, ಪಟ್ಟಣದಲ್ಲಿ ವ್ಯಾಪರ-ವಹಿ ವಾಟುಗಳು ಎಂದಿನಂತೆ ಸಹಜವಾಗಿದ್ದವು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ತಾ.ಪಂ. ಅಧ್ಯಕ್ಷೆ ಸುಜಾತಾ ಗಾಂವಕರ, ಪ್ರಮುಖರಾದ ರಮಾನಂದ ನಾಯಕ, ಸಂದೀಪ ಬಂಟ, ಉದಯ ನಾಯ್ಕ ಸೇರಿದಂತೆ ಇತರರು ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಮಾತ ನಾಡಿದರು.

ರೈತ, ಕಾರ್ಮಿಕ ಮತ್ತಿತರ ಸಂಘಟನೆಗಳ ಪ್ರಮುಖರು, ವಿವಿಧ ಪಕ್ಷದ ಮುಖಂಡರು, ಜನ ಪ್ರತಿನಿಧಿಗಳು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಸಿ.ಪಿಐ ಕೃಷ್ಣಾನಂದ ನಾಯಕ, ಪಿ.ಎಸ್.ಐ ಇ.ಸಿ ಸಂಪತ್ತ್ ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.

ಕೊವಿಡ್ ಪರೀಕ್ಷೆ ಮಾಡಿಕೊಳ್ಳಲು
ಆಸ್ಪತ್ರೆಗೆ ವ್ಯಾಪಾರಿಗಳ ಮುತ್ತಿಗೆ:

ಯಲ್ಲಾಪುರ: ತಹಶೀಲ್ದಾರರ ಖಡಕ್ ಎಚ್ಚರಿಕೆಯ ಕಾರಣಕ್ಕಾಗಿ ಪಟ್ಟಣ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವ ಹಲವಾರು ವ್ಯಾಪಾರಿಗಳು ಸೋಮವಾರ ಕೊವಿಡ್ ಪರೀಕ್ಷೆ ಮಾಡಿಕೊಳ್ಳಲು ತಾಲ್ಲೂಕು ಆಸ್ಪತ್ರೆಯಲ್ಲಿ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಶನಿವಾರ ಕೊವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು. ಅಲ್ಲಿಗೆ ಭೇಟಿ ನೀಡಿದ್ದ ತಹಸೀಲ್ದಾರ ಗಣಪತಿ ಶಾಸ್ತ್ರಿ ಪ್ರತೀ ಅಂಗಡಿಗೂ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳನ್ನು ಕಳುಹಿಸಿ ವ್ಯಾಪಾರಿಗಳು ಅವರ ಸಹಾಯಕರನ್ನು ಪರೀಕ್ಷೆಗೆ ಒಳಪಡುವಂತೆ ವಿನಂತಿಸಿದ್ದರು.

ವ್ಯಾಪಾರಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ, ಪರೀಕ್ಷೆಗೆ ಒಳಗಾಗದೆ ವ್ಯಾಪಾರ ನಡೆಸುವ ಅಂಗಡಿ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಅಂಗಡಿಯನ್ನು ಮುಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಈ ಎಚ್ಚರಿಕೆಯಿಂದಾಗಿ ಸೋಮವಾರ ತಾಲ್ಲೂಕು ಆಸ್ಪತ್ರೆಯಲ್ಲಿ ವ್ಯಾಪಾರಸ್ಥರು ಹಾಗೂ ಹಾಗೂ ಅವರ ಸಹಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಕರೊನಾ ಪರೀಕ್ಷೆ
ಮಾಡಿಸಿಕೊಳ್ಳಲು ಆಗಮಿಸಿರುವುದು ಕಂಡು ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button