ಸೂರ್ವೆ ಬ್ರಹ್ಮಾನಂದ ನಾಯಕ ವಿಧಿವಶ

ಅಂಕೋಲಾ : ತಾಲೂಕಿನ ಸೂರ್ವೆ ಗ್ರಾಮದ ಬ್ರಹ್ಮಾನಂದ ಬೀರಣ್ಯ ನಾಯಕ(65) ಸೋಮವಾರ ಮುಂಜಾನೆ ವಿಧಿವಶರಾದರು. ಪಟ್ಟಣದ ಹೋಟೆಲ್ ಒಂದರಲ್ಲಿ ಸಹಾಯಕ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೃತ ಬ್ರಹ್ಮಾನಂದ ನಾಯಕ ತಾನು ಉಳಿದುಕೊಂಡಿದ್ದ ಹೋಟೆಲ್‍ನಲ್ಲಿಯೇ ಆಕಸ್ಮಿಕ ಆರೋಗ್ಯ ಏರು-ಪೇರಿನಿಂದ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟರು ಎನ್ನಲಾಗಿದೆ.

ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತ

ಕಾಲೇಜು ದಿನಗಳಿಂದಲೇ ಕಾಂಗ್ರೆಸ್‍ನತ್ತ ಅಪಾರ ಒಲವು ಹೊಂದಿದ್ದ ಬ್ರಹ್ಮಾನಂದ ನಾಯಕ, ಈವರೆಗೂ ಮಾತೃಪಕ್ಷದಲ್ಲಿಯೇ ನಿಷ್ಠೆ ತೋರ್ಪಡಿಸಿದ್ದರು. ಹಲವು ರಾಜಕೀಯ ನಾಯಕರ ವಿಶ್ವಾಸ ಗಳಿಸಿದ್ದರು. ಕೆ.ಎಚ್.ಗೌಡ ಶಾಶಕತ್ವದ ಅವಧಿಯಲ್ಲಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡು ತಾಲೂಕಿನ ಹಲವು ಜನರ ಸೇವೆಗೆ ನೆರವಾಗಿದ್ದರು.

ಕೆನರಾ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಅಧಿಕಾರವಧಿಯಲ್ಲಿ, ಉ.ಕ ಜಿಲ್ಲಾ ದೂರವಾಣಿ ಸಲಹಾ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದ ಬ್ರಹ್ಮಾನಂದ ನಾಯಕ, ದೂರವಾಣಿ ಗ್ರಾಹಕರ ಕುಂದು-ಕೊರತೆ ನೀಗಿಸಲು ಪ್ರಯತ್ನಿಸಿದ್ದರು.

ತನ್ನ ಕೆಲ ಬಿರುಸು ನುಡಿಗಳಿಂದ ಕೆಲವರ ವಿರೋದಕ್ಕೂ ಒಳಗಾಗುತ್ತಿದ್ದ ಮೃತ ಬ್ರಹ್ಮಾನಂದ ನಾಯಕ, ಒಳ ಮನಸ್ಸಿನಿಂದ ಉತ್ತಮ ವ್ಯಕ್ತಿತ್ವ ಹೊಂದಿದ್ದ ಎನ್ನುವುದು ಆತನ ಒಡನಾಟದಲ್ಲಿದ್ದ ಹಲವರ ಅಭಿಪ್ರಾಯವಾಗಿದೆ.

ಸ್ವಾತಂತ್ರ್ಯೋತ್ಸವದ ಆಚರಣೆ ವೇಳೆ ತಾಲೂಕಿನಲ್ಲಿ ಈ ಹಿಂದೆ ಬಾಳಿ ಬದುಕಿದ್ದ ಸ್ವಾತಂತ್ರ್ಯ ಯೋಧರನ್ನಿ ಅತಿ ಕಾಳಜಿಯಿಂದ ಕರೆತರುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದ ಮೃತ ನಾಯಕ, ಸ್ವಾತಂತ್ರ್ಯ ಯೋಧರ ಮತ್ತು ಅವಲಂಭಿತ ಕುಟುಂಬದವರ ಹಿತರಕ್ಷಣೆ ಉದ್ದೇಶದಿಂದ ಸ್ಥಾಪಿಸಲಾಗಿದ್ದ ಸಮಿತಿಯ ಕಾರ್ಯದರ್ಶಿಯಾಗಿಯೂ ಉತ್ತಮ ಸೇವೆ ಸಲ್ಲಿಸಿದ್ದರು.

ಮೃತರ ಅಂತ್ಯಕ್ರಿಯೆಯನ್ನು ಸ್ವ ಗ್ರಾಮ ಸೂರ್ವೆಯಲ್ಲಿ ನೆರವೇರಿಸಲಾಯಿತು. ಆಪ್ತರು, ಗೆಳೆಯರು ಪಾಲ್ಗೊಂಡಿದ್ದರು. ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ವಾಯ್, ನಾಯ್ಕ ಮೃತದೇಹ ಸಾಗಿಸಿದರು. ಊರನಾಗರಿಕರು ಸಹಕರಿಸಿದರು. ಪ್ರಮುಖರಾದ ನಿವೇದಿತಾ ಆಳ್ವಾ, ತಾ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಆರ್ ನಾಯಕ ಸೂರ್ವೆ ಸೇರಿದಂತೆ, ಮಾಜಿ ಸಚಿವರು, ಮಾಜಿ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಅನೇಕ ಹಿರಿ-ಕಿರಿಯ ಮುಖಂಡರು ಮತ್ತು ಆಪ್ತರು ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version