ಜಿಲ್ಲೆಯ ಕೀರ್ತಿ ಪತಾಕೆ ಎತ್ತಿಹಿಡಿದ ಬಾಲಮಂದಿರದ ಬಾಲೆ
ಉತ್ತರಕನ್ನಡ ಜಿಲ್ಲೆಯ ಅಂಕೋಲೆಯ ಕುವರಿ
ಅಂಕೋಲಾ :ದೇಶದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ಕೇಂದ್ರಲೋಕ ಸೇವಾ ಆಯೋಗ (ಯುಪಿಎಸ್‍ಸಿ) ಯವರು ಇತ್ತೀಚಿಗೆ ಭಾರತದ ರಕ್ಷಣಾ ಇಲಾಖೆಗೆ ಸಂಬಂದಿಸಿದಂತೆ ಮಿಲಿಟರಿ ಇಂಜ ನೀಯರ ಸರ್ವಿಸ್ (ಎಂಇಎಸ್), ಡೆಪ್ಯೂಟಿ ಆರ್ಕಿಟೆಕ್ಟ್ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಅಂಕೋಲಾ ಮೂಲದ ವಿಜಯಶ್ರೀ ವಾಸುದೇವ ನಾಯಕ ಪ್ರಥಮ ರ್ಯಾಂಕ್‍ಗಳಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.
ಹಿಚ್ಕಡ ಮೂಲದ ನಿವೃತ್ತ ಡಿವೈಎಸ್ಪಿ ವಾಸುದೇವ ನಾಯಕ ಮತ್ತು ಗುಳ್ಳಾಪುರದ ಸರ್ಕಾರಿ ಕಾಲೇಜಿನ ಉಪನ್ಯಾಸಕಿಯಾಗಿರುವ ಕಲ್ಪನಾ ನಾಯಕ ದಂಪತಿಗಳ ಪುತ್ರಿಯಾದ ವಿಜಯಶ್ರೀ, ಕಾರವಾರದ ಬಾಲ ಮಂದಿರದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ನಂತರ ಬೆಂಗಳೂರಿನ ಜಯನಗರದಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದರು. ಬಸವನಗುಡಿ ಬಿಎಂಎಸ್‍ಐಟಿಯಲ್ಲಿ ಆರ್ಕಿಟೆಕ್ಟ್ ವಿಭಾಗದಲ್ಲಿ ವ್ಯಾಸಂಗ ಮಾಡಿ ದ್ದರು.
ಲಂಡನ್ ಮತ್ತಿತರ ಮಲ್ಟಿನ್ಯಾಶನಲ್ ಕಂಪನಿಗಳಲ್ಲಿ ಉದ್ಯೋಗ ದೊರೆತಿದ್ದರೂ, ದೇಶ ಸೇವೆಯ ಉತ್ಕಟ ಕನಸಿನೊಂದಿಗೆ ಯುಪಿಎಸ್‍ಸಿ ಪರೀಕ್ಷೆ ಎದುರಿಸಿದ ವಿಜಯಶ್ರೀ ಪ್ರಥಮ ರ್ಯಾಂಕ್ ಗಳಿಸುವ ಮೂಲಕ ವಿಜಯದ ನಗೆ ಬೀರಿ ತಾಯ್ನಾಡಿನ ಸೇವೆಗೆ ಅಣಿಯಾಗುತ್ತಿದ್ದಾರೆ. ವಿಜಯಶ್ರೀಯ ಸಹೋದರ ವಿಕ್ರಮಾದಿತ್ಯ ಬೆಂಗಳೂರಿನಲ್ಲಿ ಸಾಪ್ಟ್‍ವೇರ್ ಇಂಜೀಯರ್ ಆಗಿದ್ದು, ಇವರ ಮನೆತನದ ಪ್ರಸಿದ್ಧಿ ಹೆಚ್ಚಿದೆ.
ಈ ಹಿಂದೆ ಯುಪಿಎಸ್‍ಸಿ ಹುದ್ದೆ ಕೇವಲ ಉತ್ತರ ಭಾರತ, ಬಿಹಾರ ಮತ್ತಿತರ ರಾಜ್ಯಗಳಿಗಷ್ಟೇ ಸೀಮಿತ ಎಂಬ ಕಾಲವನ್ನು ಬದಲಾಯಿಸಿ ತಮ್ಮ ಸತತ ಪರಿಶ್ರಮದ ಮೂಲಕ ಕರುನಾಡಿಗರು ಮತ್ತು ಉತ್ತರ ಕನ್ನಡ ಜಿಲ್ಲೆಯವರು ಅದರಲ್ಲಿಯೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಅಂಕೋಲಿಗರು ಹೆಚ್ಚಿನ ಸಾಧನೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಇಂತಹ ಇನ್ನಷ್ಟು ಪ್ರತಿಭೆಗಳು ಅರಳಿ ತಾಲೂಕಿನ ಜಿಲ್ಲೆಯ ವಿಜಯದ ಕೀರ್ತಿಯನ್ನು ಮುಂದುವರೆಸುವಂತಾಗಲಿ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ