ಬಡಗೇರಿಯಲ್ಲಿ ಪದ್ಮಶ್ರೀ ಗಳ ಸಮ್ಮಿಲನ : ಸಮಾಜ ಮತ್ತು ತಾಲೂಕಾಡಳಿತದಿಂದಲೂ ಸನ್ಮಾನ: ನಾಡಿನಾದ್ಯಂತ ತುಳಸಿ ಹಬ್ಬದ ಸಂಭ್ರಮ
ಅಂಕೋಲಾ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತಾಲೂಕಿನ ಹೊನ್ನಳ್ಳಿಯ ವೃಕ್ಷಮಾತೆ ತುಳಸಿ ಗೌಡ ಅವರು ಜಿಲ್ಲೆಯ ಭಟ್ಕಳ ಹೊನ್ನಾವರ, ಕುಮಟಾದ ವಿವಿಧೆಡೆಗಳಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಹುಟ್ಟೂರಾದ ಅಂಕೋಲಾಕ್ಕೆ ರವಿವಾರ ಮಧ್ಯಾಹ್ನ ಆಗಮಿಸಿದರು.ತಾಲೂಕಿನ ಹಟ್ಟಿಕೇರಿ ಕ್ರಾಸ್ ನಿಂದ ಬೈಕ್ ರ್ಯಾಲಿ ಮೂಲಕ ಬಡಗೇರಿಗೆ ಸ್ವಾಗತಿಸಲಾಯಿತು.
ತುಳಸಿ ಗೌಡ ಅವರು ಬಡಗೇರಿಯ ಬೇಟೆ ಬೀರ ದೇವಾಲಯಯದಲ್ಲಿ ಪೂಜೆ ಸಲ್ಲಿಸಿ, ಸಮಾಜದ ಸಾಂಪ್ರದಾಯಿಕ ಗುಮಟೆ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ಮೂಲಕ ಪದ್ಮಶ್ರೀ ಸುಕ್ರಿ ಗೌಡ ಅವರ ಮನೆಯ ಹತ್ತಿರ ನಡೆದ ಸಭಾ ಕಾರ್ಯಕ್ರಮದಲ್ಲಿ ತನಗೆ ಹಿರಿಯಕ್ಕನಂತಿರುವ ಸುಕ್ರಿ ಗೌಡ ಅವರ ಅಶೀರ್ವಾದ ಪಡೆದರು. ಸಮಾಜದ ವತಿಯಿಂದ ತುಳಿಸಿ ಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇತರೇ ಪ್ರಮುಖರು ಸಹ ಮಾಲಾರ್ಪಣೆ, ಸನ್ಮಾನ ಗೌರವ ನೆರವೇರಿಸಿದರು.ಸನ್ಮಾನ ಸ್ವೀಕರಿಸಿದ ತುಳಸಿ ಗೌಡ ಅವರು ಮಾತನಾಡಿ ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿದರೆ ತಮಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಸಾರ್ಥಕವಾಗುತ್ತದೆ ಎಂದು ತನ್ನ ಪರಿಸರ ಪ್ರೇಮನ್ನು ಚುಟುಕಾಗಿ ಹೇಳಿ,ಮಾತಿಗಿಂತ ಕೃತಿಯೇ ಮುಖ್ಯ ಎಂಬ ಸಂದೇಶ ನೀಡಿದರು..ಪದ್ಮಶ್ರೀ ಸುಕ್ರಿ ಗೌಡ ಅವರು ಮಾತನಾಡಿ, ಹಾಲಕ್ಕಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರುವ ಮೂಲಕ ಮುಂದಿನ ಪೀಳಿಗೆಗೆ ಅನುಕೂಲ ಕಲ್ಪಿಸಲು ಎಲ್ಲರೂ ಪ್ರಯತ್ನಿಸಬೇಕು.ನನ್ನ ಸಮಾಜ ಮುಂದುವರೆಯದೇ ಈ ಪ್ರಶಸ್ತಿ ಸನ್ಮಾನಗಳಿದ್ದು ಏನು ಪ್ರಯೋಜನ ಎಂದರು.
ಜಿಲ್ಲಾ ಹಾಲಕ್ಕಿ ಸಮಾಜದ ಅಧ್ಯಕ್ಷ ಹನುಮಂತ ಗೌಡ ಮಾತನಾಡಿ ನಮ್ಮ ಸಮಾಜದ ತುಳಸಿ ಗೌಡ ಅವರಿಗೆ ಪ್ರಶಸ್ತಿ ಬಂದಿರುವುದು ಇಡೀ ಹಾಲಕ್ಕಿ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ.ನಮ್ಮ ಸಮಾಜದವರು ಬಡವರಾದರೂ ಅವಶ್ಯಕ ಸಂದರ್ಭಗಳಲ್ಲಿ ಸಮಾಜದ ಉನ್ನತಿಗೆ, ಅಭಿವೃದ್ಧಿಗೆ ಹಣಕಾಸಿನ ನೆರವು ಸೇರಿದಂತೆ ಇತರೆ ಸೌಕರ್ಯಗಳ ಒದಗಿಸುವಿಕೆಗೆ ಎಲ್ಲರೂ ಸಶಕ್ತರಾಗಿದ್ದೇವೆ ಎಂದು ತಿಳಿಸಿದರು.
ಪ್ರಮುಖರಾದ ಶ್ರೀಧರ ಗೌಡ, ಗೋವಿಂದ ಗೌಡ, ಆರ್. ಪಿ.ಗೌಡ, ಎಮ್.ಬಿ.ಗೌಡ, ಮಾತನಾಡಿದರು.ಭಾವಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡು ಗೌಡ, ಸಮಾಜದ ಪ್ರಮುಖ ಮಂಗು ಗೌಡ, ಸುಬ್ರಾಯ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಪ್ರಮುಖ ಸಾತು ಗೌಡ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ರಾಮಾ ಗೌಡ ಸಂಗಡಿಗರು ಗುಮ್ಮಟೆ ವಾದನದ ಮೂಲಕ ಸ್ವಾಗತ ಗೀತೆ ಹಾಡಿದರು. ಬೆಂಗಳೂರಿನ ರಾಜೇಶ್ ಅನಿಸಿಕೆ ವ್ಯಕ್ತಪಡಿಸಿದರು. ಬಡಗೇರಿ ಹಾಗೂ ಸುತ್ತಮುತ್ತಲ ಊರ ನಾಗರಿಕರು, ಕಾರವಾರ- ಅಂಕೋಲಾ, ಕುಮಟಾ- ಹೊನ್ನಾವರ ಭಾಗಗಳ ಸಮಾಜದ ಮುಖಂಡರು, ಇತರರು ಪಾಲ್ಗೊಂಡಿದ್ದರು.
ನಂತರ ಬೈಕ್ ರ್ಯಾಲಿ ಮೂಲಕ ತುಳಸಿಗೌಡರನ್ನು ಕೇಣಿ ಮಾರ್ಗವಾಗಿ ಪಟ್ಟಣದ, ಪ್ರಮುಖ ರಸ್ತೆಗಳಲ್ಲಿ ಸಾಗಿ ಮೆರವಣಿಗೆ ಮೂಲಕ ತಹಶೀಲ್ದಾರ ಕಾರ್ಯಾಲಯಕ್ಕೆ ಕರೆತರಲಾಯಿತು.ತಾಲೂಕ ಆಡಳಿತದ ಪರವಾಗಿ ತಹಶೀಲ್ದಾರ ಉದಯ ಕುಂಬಾರ , ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರನ್ನು ಫಲ ಪುಷ್ಪ ನೀಡಿ ಅತ್ಮೀಯವಾಗಿ ಸನ್ಮಾನಿಸಿ ಗೌರವಿಸಿ, ಸಿಹಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಪಿ ಎ ಸೈ ಪ್ರವೀಣ ಕುಮಾರ , ಶಿರಸ್ತೆದಾರ ಸುರೇಶ ಹರಿಕಂತ್ರ ಸೇರಿದಂತೆ ಇಲಾಖೆಯ ಇತರೆ ಸಿಬ್ಬಂದಿಗಳು, ತುಳಸಿ ಗೌಡ ಕುಟುಂಬ ಸದಸ್ಯರು, ಸಮಾಜದ ಪ್ರಮುಖರು , ಇತರರು ಉಪಸ್ಥಿತರಿದ್ದರು.
ನಂತರ ಮೆರವಣಿಗೆ ಶಿರೂರು -ಬೆಳಸೆ – ಆಗಸೂರು ಮಾರ್ಗವಾಗಿ ಹೊನ್ನಳ್ಳಿ ತಲುಪಿತು. ದಾರಿಯುದ್ದಕ್ಕೂ ಅಲ್ಲಲ್ಲಿ ಸಮಾಜದ ಪರವಾಗಿ ಹಾಗೂ ಇತರೆ ಸಮಾಜದವರು ಸಹ ಗೌರವ ಸೂಚಿಸಿ ಪ್ರೀತಿ – ಅಭಿಮಾನ ತೋರ್ಪಡಿಸಿದರು. ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ತುಳಸಿ ಪೂಜೆಯ ಶುಭ ಘಳಿಗೆಯಲ್ಲಿ ದೆಹಲಿಯಿಂದ ಪದ್ಮಶ್ರೀ ಪುರಸ್ಕಾರದೊಂದಿಗೆ ತನ್ನೂರು ಹೊನ್ನಳ್ಳಿಗೆ ವಾಪಸ್ಸಾದ ವನದೇವತೆ ಎಂದು ಹೆಸರಾದ ತುಳಸಿ ಮಾತೆ, ಈ ಮೂಲಕ ತನ್ನ ಕುಟುಂಬ, ಊರು, ಹಾಲಕ್ಕಿ ಸಮಾಜಕ್ಕೆ ಅಷ್ಟೇ ಅಲ್ಲದೇ ಅಂಕೋಲಾ ತಾಲೂಕು, ಉತ್ತರಕನ್ನಡ ಜಿಲ್ಲೆ ಹಾಗೂ ಕರುನಾಡಿನ ತುಳಸಿ ಹಬ್ಬದ ಸಂಭ್ರಮ ಹೆಚ್ಚಿಸಿದಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ