Big News
Trending

ಸುರಂಗ ಮಾರ್ಗದ ಪರಿಶೀಲನೆಗೆ ಬಂದು ಕಾರ್ ಇಳಿಯದ ತಜ್ಞ: ಕ್ಯಾಮರಾ ಕಂಡ ಬಳಿಕ ಪರಿಶೀಲನೆ

ಕಾರವಾರ: ಕಾರವಾರದಲ್ಲಿ ಟನಲ್ ಸಂಚಾರ ವಿಚಾರ ಕಳೆದ ಮೂರ್ನಾಲ್ಕು ತಿಂಗಳಿನಿoದ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮಳೆಗಾಲದಲ್ಲಿ ಸೋರಿಕೆಯಾದ ಹಿನ್ನಲೆ ಬಂದ್ ಆಗಿದ್ದ ಟನಲ್ ಸಂಚಾರವನ್ನು ಪುನರಾರಂಭಿಸಲು ಸಾರ್ವಜನಿಕರಿಂದ ಸಾಕಷ್ಟು ಒತ್ತಾಯಗಳು ಕೇಳಿಬಂದಿದ್ದರಿoದ ಜಿಲ್ಲಾಡಳಿತ ಅವಕಾಶ ಒದಗಿಸಿತ್ತು. ಅದರಂತೆ ಟನಲ್‌ನ ಫಿಟ್ನೆಸ್ ಪ್ರಮಾಣಪತ್ರ ಒದಗಿಸಲು ಇಂದು ಪರಿಶೀಲನೆ ಆಗಮಿಸಿದ್ದ ತಜ್ಞರೊಬ್ಬರು ಮಾಧ್ಯಮದವರನ್ನು ಕಂಡು ಪರಾರಿಯಾಗಲೆತ್ನಿಸಿ ಕೊನೆಗೂ ಪರಿಶೀಲನೆ ನಡೆಸಿ ತೆರಳಿದ್ದಾರೆ.

ಕಾರವಾರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ನಿರ್ಮಿಸಿರುವ ಸುರಂಗ ಮಾರ್ಗ ಕಳೆದ ಮೂರ್ನಾಲ್ಕು ತಿಂಗಳಿನಿoದ ಒಂದಿಲ್ಲೊoದು ಕಾರಣಕ್ಕೆ ಸಾಕಷ್ಟು ಸುದ್ದಿಯಾಗಿತ್ತು. ಮಳೆ ನೀರು ಸೋರಿಕೆಯಿಂದ ಎರಡು ತಿಂಗಳ ಕಾಲ ಬಂದ್ ಆಗಿದ್ದ ಟನಲ್ ಮಾರ್ಗವನ್ನ ಸಾರ್ವಜನಿಕರ ಒತ್ತಾಯದ ಮೇರೆಗೆ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಈ ವೇಳೆ ನಾಲ್ಕು ಸುರಂಗ ಮಾರ್ಗಗಳ ಸುರಕ್ಷತೆ ಬಗ್ಗೆ ಎನ್‌ಎಚ್‌ಎಐದವರಿಗೆ ಖಚಿತಪಡಿಸಲು ಜಿಲ್ಲಾಡಳಿತ ಸೂಚಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಪುಣೆಯ ಸಿಒಇಪಿ ಟೆಕ್ನಿಕಲ್ ಯೂನಿವರ್ಸಿಟಿಯ ತಜ್ಞರು ಥರ್ಡ್ ಪಾರ್ಟಿ ಸರ್ವೆ ನಡೆಸಿರುವುದಾಗಿ ಪ್ರಮಾಣ ಪತ್ರ ನೀಡಿದ್ದರು. ಆದರೆ ಜಿಲ್ಲಾಡಳಿತ ಹಾಗೂ ಎನ್‌ಎಚ್‌ಎಐದವರು ಇಲ್ಲದೆ ನಡೆದ ಸರ್ವೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಜಿಲ್ಲಾಡಳಿತ ಖಚಿತತೆಗೆ ಸೂಚಿಸಿ ಕೊನೆಗೆ ಮತ್ತೊಮ್ಮೆ ಪರಿಶೀಲನೆಗೆ ಸೂಚಿಸಿತ್ತು.

ಅದರಂತೆ ಸ್ಥಳಕ್ಕೆ ಪರಿಶೀಲನೆಗೆ ಕಾರಿನಲ್ಲಿ ಆಗಮಿಸಿದ ಪುಣೆಯ ಸಿಒಇಪಿ ಟೆಕ್ನಿಕಲ್ ಯೂನಿವರ್ಸಿಟಿಯ ಭೂಗರ್ಭ ತಜ್ಞ ಮೆಶ್ರಾಂ ಅದ್ಯಾಕೋ ಏನೋ ಮಾಧ್ಯಮದವರನ್ನು ನೋಡುತ್ತಿದ್ದಂತೆ ಕಾರಿನಿಂದ ಇಳಿಯದೇ ಪರಾರಿಯಾಗಲು ಮುಂದಾಗಿದ್ದರು. ಕೊನೆಗೆ ಕಾರಿನಿಂದ ಕೆಳಗಿದು ಮೆಶ್ರಾಂ ಅಧಿಕಾರಿಗಳೊಂದಿಗೆ ಟನಲ್ ಪರಿಶೀಲನೆ ನಡೆಸಿದರಾದರು.

ಈ ವೇಳೆ ಖುದ್ದು ಜಿಲ್ಲಾಧಿಕಾರಿ, ಶಾಸಕ ಸತೀಶ್ ಸೈಲ್ ಹಾಗೂ ಸ್ಥಳೀಯರು ಹಾಜರಿದ್ದು ಟನಲ್ ಸೋರಿಕೆ, ಟನಲ್ ಆರಂಭದಲ್ಲಿ ಕೆಲವೆಡೆ ಕಲ್ಲುಗಳು ಬೀಳುವ ಸಾಧ್ಯತೆ ಬಗ್ಗೆ, ಗುಡ್ಡ ಕುಸಿತ, ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ವಿವರಿಸಿದರು. ಬಳಿಕ ಮಾಧ್ಯಮಗಳಿಗೆ ಡಾ. ಎಸ್.ಎ.ಮೆಶ್ರಂ ಪ್ರತಿಕ್ರಿಯೆ ಕೇಳಿದರು ಕೂಡ ನೀಡಲು ನೀರಾಕರಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಸುರಂಗ ಸುರಕ್ಷತೆ ಬಗ್ಗೆ ಪ್ರಮಾಣ ಪತ್ರ ನೀಡಿದ್ದ ಪುಣೆ ಟೆಕ್ನಿಕಲ್ ಯುನಿವರ್ಸಿಟಿ ಡಾ. ಎಸ್.ಎ.ಮೆಶ್ರಂ ಇಂದು ಟನಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತಾವು ನೀಡಿರುವ ವರದಿ ಸರಿಯಾಗಿದೆ ಇದೆ ಎಂದು ತಿಳಿಸಿದ್ದಾರೆ. ಆದರೆ ಟನಲ್‌ನಲ್ಲಿರುವ ಸೋರುವಿಕೆ, ಗುಡ್ಡ ಸಡಿಲಗೊಂಡಿರುವುದು, ಕಲ್ಲು ಉರುಳುವ ಸಾಧ್ಯತೆ ಬಗ್ಗೆ ಅವರಿಗೆ ವಿವರಿಸಲಾಗಿದೆ.

ಆದರೆ ಈ ಬಗ್ಗೆ ಸ್ಥಳ ಪರಿಶೀಲನಾ ವರದಿ ಹಾಗೂ ಸಮಸ್ಯೆಗಳ ಪರಿಹಾರೋಪಾಯದ ಬಗ್ಗೆ ಸಲಹೆಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ನಾವು ಕೂಡ ಸಮಸ್ಯೆಗಳ ಬಗ್ಗೆ ಅವರಿಗೆ ಈ ಮೇಲ್ ಮೂಲಕ ತಿಳಿಸಲಾಗುವುದು. ಬಳಿಕ ಎಲ್ಲ ಸಮಸ್ಯೆಗಳನ್ನು ಐಆರ್‌ಬಿ ಅವರಿಗೆ ಸರಿಪಡಿಸುವಂತೆ ಸೂಚನೆ ನೀಡಲಾಗುವುದು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹತ್ತು ವರ್ಷ ಕಳೆದ್ರೂ ಇನ್ನೂ ಸಹ ಪೂರ್ಣಗೊಂಡಿಲ್ಲವಾಗಿದ್ದು ಐಆರ್‌ಬಿ ಕಾಮಗಾರಿ ಕುರಿತು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಶಾಸಕ ಸತೀಶ ಸೈಲ್ ಮಾತನಾಡಿ, ಟನಲ್‌ನಲ್ಲಿರುವ ಸಮಸ್ಯೆಗಳ ಬಗ್ಗೆ ತಿಳಿಸಲಾಗಿದೆ. ಆದರೆ ಅವರು ಯಾವುದೇ ಪರಿಹಾರದ ಬಗ್ಗೆ ಸೂಚನೆನೀಡಿಲ್ಲ. ವರದಿ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ಸೋರುವಿಕೆ ಸಮಸ್ಯೆ ಬಗ್ಗೆ ತಿಳಿಸಿದಾಗ ಅದು ಈಗ ಏನು ಮಾಡಲು ಸಾಧ್ಯವಿಲ್ಲ. ಮೊದಲೆ ಸರಿಪಡಿಸಬೇಕಾಗಿತ್ತು ಎಂದಿದ್ದಾರೆ. ಆದರೆ ಎಷ್ಟು ಸಮಸ್ಯೆ ಬಗೆಹರಿಸಲು ಸಾಧ್ಯವೋ ಅಷ್ಟನ್ನು ಬಗೆಹರಿಸಲು ಸೂಚಿಸಲಾಗುವುದು.

ಯಾವುದೇ ಟೈಮ್ ಬಾಂಡ್ ಕೊಟ್ಟಿಲ್ಲ. ನಾವು ಕೇಳಿ ಮತ್ತೆ ಟನಲ್ ಬಂದ್ ಆದರೆ ಜನ ಆಮೇಲೆ ನಮ್ಮನ್ನ ಕೇಳುತ್ತಾರೆ. ಅವರು ಏನು ಮಾಡುತ್ತಾರೋ ಅದಕ್ಕೆ ತಮ್ಮ ಒಪ್ಪಿಗೆ ಇದೆ. ಅಲ್ಲದೇ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದಾಗಿ ಅಮಾಯಕರು ಪ್ರಾಣಕಳೆದುಕೊಂಡ ಘಟನೆಗಳು ನಡೆಯುತ್ತಿದ್ದು ಈ ಬಗ್ಗೆ ಗಮನಹರಿಸಿ ಸರಿಪಡಿಸುವಂತೆ ಶಾಸಕ ಸೈಲ್ ಸೂಚಿಸಿದ್ರು.

ವಿಸ್ಮಯ ನ್ಯೂಸ್, ಕಾರವಾರ

Back to top button