Big News
Trending

ಮನೆಯಂಗಳಕ್ಕೆ ಬೃಹತ್ ಕಾಳಿಂಗ ಸರ್ಪ: ಉರಗ ರಕ್ಷಕನಿಂದ ಯಶಸ್ವಿ ಕಾರ್ಯಾಚರಣೆ

ಅಂಕೋಲಾ: ಮನೆಯೊಂದರ ಅಂಗಳದ ಬಳಿಯಿಂದ ದೊಡ್ಡ ಗಾತ್ರದ ಹಾವೊಂದು ತೆವಳುತ್ತಾ ಸಾಗಿದ್ದನ್ನು ದೂರದಿಂದ ಗಮನಿಸಿದ್ದ ಮನೆಯವರು ಕ್ಷಣ ಕಾಲ ಆತಂಕ ಗೊಂಡು ಉರಗ ಸಂರಕ್ಷಕ ಮಹೇಶ್ ನಾಯ್ಕ ಅವರಿಗೆ ಕರೆ ಮಾಡಿದ್ದರು.ಸ್ಥ ಳಕ್ಕೆ ಬಂದ ಮಹೇಶ ನಾಯ್ಕ ಹರಸಾಹಸ ಪಟ್ಟು ಗಿಡಗಂಟಿಗಳ ನಡುವೆ ಅವಿತಿದ್ದ ಹಾವಿನ ಬಾಲ ಹಿಡಿದು ನಿಧಾನವಾಗಿ ಹೊರಗೆಳೆದಾಗಲೇ ಅದು ಹೆಬ್ಬಾವಿರಬಹುದೆಂದು ಅಂದು ಕೊಂಡವರೆಲ್ಲ ಹೌಹಾರುವಂತಾಗಿತ್ತು. ಏಕೆಂದರೆ ಅದು ಎಲ್ಲರೂ ಅಂದು ಕೊಂಡಂತೆ ಹೆಬ್ಬಾವಾಗಿರದೇ ಬರೋಬ್ಬರಿ 13 ಅಡಿ ಉದ್ದದ ಕಾಳಿಂಗ ಸರ್ಪವಾಗಿತ್ತು.

ರಾಜ್ಯೋತ್ಸವ ದಿನದಂದೇ ಹೆದ್ದಾರಿ ಟೋಲ್ ಪ್ಲಾಜಾ ಸಿಬ್ಬಂದಿಗಳಿಂದ ಸನ್ಮಾನ ಗೌರವ ಸ್ವೀಕರಿಸಿರುವ , ಉರಗ ಸಂರಕ್ಷಕ ಮಹೇಶ್ ನಾಯ್ಕ,ದಿನವೊಂದರಲ್ಲಿಯೇ ಬೇರೆ ಬೇರೆ ಕಡೆ ಕಾರ್ಯಾಚರಣೆ ನಡೆಸಿ ಬೃಹತ್ ಗಾತ್ರದ ಒಂದು ಕಾಳಿಂಗಸರ್ಪ, ಎರಡು ನಾಗರ ಹಾವು, ವಿಷಕಾರಿಯಲ್ಲದ ಇತರೇ ಜಾತಿಯ ಎರಡು ಹಾವು ಸೇರಿ ಒಟ್ಟೂ ಐದು ಹಾವುಗಳನ್ನು ಹಿಡಿದು ,ಸಂರಕ್ಷಿಸಿ ಸ್ಥಳೀಯರ ಮೆಚ್ಚುಗೆಗೆ ಕಾರಣರಾಗಿದ್ದಾರೆ.

ಅಂಕೋಲಾ ತಾಲೂಕಿನ ಕೃಷ್ಣಾಪುರದಲ್ಲಿ ಪ್ರಶಾಂತ ನಾಯಕ ಎನ್ನುವವರ ಮನೆಯ ಆವರಣದಲ್ಲಿ ಪೊದೆಯೊಂದರಲ್ಲಿ ಕಾಣಿಸಿಕೊಂಡ ಸುಮಾರು 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ಸಂರಕ್ಷಕ ಮಹೇಶ ನಾಯ್ಕ ಅವರು ತಮ್ಮ ಮಗ ಗಗನ ಮಹೇಶ ನಾಯ್ಕ ಮತ್ತು ಸ್ಥಳೀಯ ಯುವಕ ಸಂದೀಪ ನಾಯ್ಕ ಅವರ ಸಹಾಯದಿಂದ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಪ್ರಶಾಂತ ನಾಯಕ ಅವರ ಮನೆ ಅಂಗಳದಲ್ಲಿ ಭಾರೀ ಗಾತ್ರದ ಹಾವೊಂದು ಹರಿದು ಹೋದದ್ದನ್ನು ಕಂಡ ಮನೆಯವರು ಹೆಬ್ಬಾವು ಬಂದಿರಬಹುದೆಂಬ ಆತಂಕದಿಂದ ಮಹೇಶ ನಾಯ್ಕ ಅವರಿಗೆ ಕರೆ ಮಾಡಿದ್ದು ಮಹೇಶ ನಾಯ್ಕ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಾಳಿಂಗ ಸರ್ಪ ಇರುವುದು ಗಮನಕ್ಕೆ ಬಂದಿದೆ. ಗಿಡ ಗಂಟಿಗಳ ನಡುವೆ ಅವಿತಿದ್ದ ಕಾಳಿಂಗ ಸರ್ಪವನ್ನು ಅತ್ಯಂತ ಪ್ರಯಾಸಪಟ್ಟು ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.

ಕಾರವಾರ -ಮುದಗಾದ ನಿರಾಶ್ರಿತರ ಕಾಲನಿಯಲ್ಲಿ ಭರತ ಗೌಡ ಎನ್ನುವವರ ಮನೆಯ ಬಳಿ ಮತ್ತು ಬೇಲೇಕೇರಿಯ ಸಂತೋಷ ಖಾರ್ವಿ ಎನ್ನುವವರ ಮನೆಯ ಬಳಿ ಬಲೆಯಲ್ಲಿ ಸಿಲುಕಿದ್ದ ಪ್ರತ್ಯೇಕ – ಪ್ರತ್ಯೇಕ ನಾಗರ ಹಾವುಗಳು ಮತ್ತು ಸುಭಾಷ ತಾಂಡೇಲ್ ಎನ್ನುವವರ ಮನೆಯೊಳಗೆ ಸೇರಿಕೊಂಡಿದ್ದ ಕೇರೆ ಹಾವು, ಮುದಗಾ ಎನ್. ಸಿ.ಸಿ ಆವರಣದಲ್ಲಿ ಕಂಡು ಬಂದ ವಿಷಕಾರಿಯಲ್ಲದ ಇನ್ನೊಂದು ಹಾವು ಸೇರಿ , ಒಂದೇ ದಿನ ಒಟ್ಟೂ 5 ಹಾವುಗಳ ಸಂರಕ್ಷಣೆ ಮಾಡಿದ ಮಹೇಶ ನಾಯ್ಕ ಕಾರ್ಯಕ್ಕೆ ಸ್ಥಳೀಯ ಅನೇಕರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.ಸರ್ಕಾರ ಸಂಘ ಸಂಸ್ಥೆಗಳು ಇಂಥವರನ್ನು ಗುರುತಿಸಿ ಪ್ರಶಸ್ತಿ ಗೌರವಗಳನ್ನು ನೀಡಬೇಕೆಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button