Join Our

WhatsApp Group
Important
Trending

ಶಂಕರ ಜಯಂತಿ ಅರ್ಥಪೂರ್ಣವಾಗಿ ಆಚರಣೆ: ಶಾರದಾಂಬಾ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜನೆ

ಹೊನ್ನಾವರ: ಪಟ್ಟಣದ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಶ್ರೀ ಶಂಕರ ಭಗವತ್ಪಾದ ಜಯಂತ್ಯುತ್ಸವ ಕಾರ್ಯಕ್ರಮ ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಂಪನ್ನವಾಯಿತು. ಜ್ಞಾನೇಶ್ವರಿ ಪೀಠದ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ಹಾಗೂ ಹಳದೀಪುರದ ಶ್ರೀಕೃಷ್ಣಾಶ್ರಮ ಮಠದ ಪರಮ ಪೂಜ್ಯ ಶ್ರೀ ಶ್ರೀ ವಾಮನಾಶ್ರಮ ಮಹಾಸ್ವಾಮಿಗಳು ಪಾಲ್ಗೊಂಡು ಶ್ರೀ ಶಾರದಾಂಬಾ ದೇವಿಗೆ ಹಾಗೂ ಶ್ರೀ ಶಂಕರಾಚಾರ್ಯರ ಮೂರ್ತಿಗೆ ಪೂಜೆ ಸಲ್ಲಿಸಿದರು.

ನಂತರ ನಡೆದ ಆಶೀರ್ವಚನದಲ್ಲಿ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ಮಾತನಾಡಿ, ನಾವು ಒಳ್ಳೆಯದನ್ನು ಮನಸ್ಸಿನಲ್ಲಿ ತುಂಬಿಕೊಂಡರೆ,ಒಳಿತನ್ನು ನೀಡಬಹುದು.ಇಂದಿನ ದಿನಗಳಲ್ಲಿ ಮಕ್ಕಳ ಕೈಗೆ ಮೊಬೈಲ್ ನೀಡುತ್ತಿರುವುದರಿಂದ ಗಂಭೀರ ಪರಿಣಾಮ ಕಂಡುಬರುತ್ತಿದೆ,ಇದು ದುರಂತವಾಗಿದೆ. ಆದಿಶಂಕರಾಚಾರ್ಯರು ಹೇಳಿದಂತ ಮುದ್ರೆಗಳನ್ನು ದಿನಕ್ಕೆ 20 ಬಾರಿ ಅನುಸರಿಸೋಣ ಎಂದರು.

ಪರಮ ಪೂಜ್ಯ ಶ್ರೀ ವಾಮನಾಶ್ರಮ ಮಹಾಸ್ವಾಮಿಗಳು ಮಾತನಾಡಿ, ಚಿಂತನೆ,ಧ್ಯಾನ ಮಾಡಬೇಕು.ಪರಮಾತ್ಮ,ಜೀವಾತ್ಮ ಒಂದಾಗಿದ್ದು,ಅದು ತುಂಬಾ ಸಾಧನೆಯ ನಂತರ ಸಿದ್ದಿಸುತ್ತದೆ.ಇದು ಮನುಷ್ಯ ಜನ್ಮದ ಮುಖ್ಯ ಧ್ಯೇಯ. ಮನುಷ್ಯನಾದವನು ಪ್ರತಿಯೊಂದು ವಸ್ತುವನ್ನು ಸದುಪಯೋಗಪಡಿಸಬೇಕು.ಭಗವಂತನ ನಾಮಸ್ಮರಣೆ ಮಾಡಿದಾಗ ನಾಲಿಗೆ ಸಾರ್ಥಕವಾಗುತ್ತದೆ.ಆದರೆ ಇಂದು ಭಗವಂತನ ನಾಮಸ್ಮರಣೆಯಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಹೊರಜಗತ್ತಿನ ಬಗ್ಗೆ ಆಸಕ್ತಿ,ಕೂತೂಹಲ ಹೆಚ್ಚುತ್ತಿದೆ. ಇದೆಲ್ಲವು ನಿಯಂತ್ರಿಸಬೇಕಾದರೆ ಭಗವಂತನ ನಾಮಸ್ಮರಣೆ ಮಾಡಲೆಬೇಕು ಎಂದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಬಾಲ ಶಂಕರಾಚಾರ್ಯರ ಛದ್ಮವೇಶ ಸ್ಪರ್ಧೆ ಎರ್ಪಡಿಸಲಾಗಿತ್ತು. ಈ ವೇಳೆ ಚಿಕ್ಕಮಕ್ಕಳು ಬಾಲಶಂಕರಾಚಾರ್ಯರ ವೇಷಭೂಷಣ ತೊಟ್ಟು ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಒಬ್ಬರಿಗಿಂತ ಒಬ್ಬರು ಆಕರ್ಷಣೆಗೆಯಾಗಿ ಎಲ್ಲರ ಗಮನ ಸೆಳೆದರು. ವಿಜೇತರಿಗೆ ಬಹುಮಾನ ನೀಡಿ ಶ್ರೀಗಳು ಆಶಿರ್ವಾದ ಮಾಡಿದರು.

ನಂತರ ಶ್ರೀಗಳು ಭಕ್ತಾಧಿಗಳಿಗೆ ಮಂತ್ರಾಕ್ಷತೆ ನೀಡಿದರು. ಊದ್ಯಮಿ ಸತ್ಯನಾರಾಯಣ ಶೇಟ್ ಭಕ್ತಾಧಿಗಳಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಿದ್ದರು. ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button