ಅಂಕೋಲಾ: ಆಡಳಿತಾತ್ಮಕ ವಿಕೇಂದ್ರಿಕರಣ ನೀತಿಯಿಂದ ಗ್ರಾಮ ಪಂಚಾಯತಗಳು ಮಹತ್ವದ ಪಾತ್ರ ನಿಭಾಯಿಸುತ್ತಿದ್ದು, ಆಡಳಿತದ ಮೂಲ ಘಟಕಗಳಾಗಿ ಕಾರ್ಯನಿರ್ವಹಿಸುತ್ತಿವೆ. ಅಂಕೋಲಾ ತಾಲೂಕಿನಲ್ಲಿ ಒಟ್ಟೂ 21 ಗ್ರಾ.ಪಂ.ಗಳಲ್ಲಿ ಚುನಾಯಿತ ಜನಪ್ರತಿನಧಿಗಳ ಅಧಿಕಾರಾವಧಿ ಶೀಘ್ರವೇ ಕೊನೆಗೊಳ್ಳಲಿದ್ದು, ಕೊರೊನಾ ಸಂಕಷ್ಟದಿಂದ, ಮುಂದಿ ನ ಚುನಾವಣೆ ನಡೆಯುವರೆಗೆ ಹಾಲಿ ಸದಸ್ಯರೇ ಮುಂದುವರೆಯಲಿದ್ದಾರೆಯೇ? ಅಥವಾ ಸರಕಾರ ತಾತ್ಕಾಲಿಕ ವಾಗಿ ಸದಸ್ಯರನ್ನು ನಾಮನಿರ್ದೆಶಿಸಲಿದೆಯೇ ಎನ್ನುವ ಚರ್ಚೆ ಕೇಳಿ ಬರುತ್ತಿದೆ.ವಿಸ್ತಾರ ಬೌಗೋಳಿಕ ಪ್ರದೇಶ ವ್ಯಾಪ್ತಿಹೊಂದಿರುವ ಅಂಕೋಲಾ ತಾಲೂಕಿನಲ್ಲಿ ಅಗಸೂರು, ಸೇರಿದಂತೆ ಒಟ್ಟಾರೆಯಾಗಿ 21 ಗ್ರಾ.ಪಂ.ಗಳಿದ್ದು, 2015ರ ಮೇ29 ರಂದು ಚುನಾವಣೆ ನಡೆದು, ಜೂನ್ 5 ರಂದು ಮತ ಎಣಿಕೆ ನಡೆದು 241 ಸದಸ್ಯರು ಆಯ್ಕೆಯಾಗಿದ್ದರು.
ಕಾರಣಾಂತರಗಳಿಂದ ಒಂದೆರೆಡು ಗ್ರಾ.ಪಂ.ಗಳಲ್ಲಿ ಬೆರಳೆಣಿಕೆಯ ಸದಸ್ಯತ್ವ ಸ್ಥಾನ ತೆರವಾಗಿತ್ತಾದರೂ ಇತ್ತೀಚಿಗೆ ಮರು ಚುನಾವಣೆಗೆ ಆದೇಶಿಸಿದ್ದರೂ ಪಂಚಾಯತ ಅಧಿಕಾರ ಅವಧಿ ಶೀಘ್ರವೇ ಕೊನೆಗೊಳ್ಳಲಿರುವುದರಿಂದ ಸದ ಸ್ಯತ್ವಕ್ಕೆ ನಾಮ ಪತ್ರ ಸಲ್ಲಿಸದೇ ಚುನಾವಣೆ ನಡೆದಿಲ್ಲಾ ಎನ್ನಲಾಗಿದೆ. ಚುನಾಯಿತ ಪ್ರತಿನಿಧಿಗಳ 5 ವರ್ಷದ ಅಧಿಕಾರ ಅವಧಿ ಮುಕ್ತಾಯವಾಗುತ್ತಿದ್ದು, ಮತ್ತೊಮ್ಮೆ ಚುನಾವಣೆ ನಡೆಯಬೇಕಿದೆ. ಆದರೆ ರಾಜ್ಯದಲ್ಲಿ ಕಾಡುತ್ತಿರುವ ಕೊರೊನಾ ಸೋಂಕಿನಿಂದಾಗಿ ಚುನಾವಣೆ ಮುಂದೂಡಲೇಬೇಕಾದ ಅನಿವಾರ್ಯತೆಯಿದೆ. ಮುಂದಿನ ಚುನಾವಣೆ ಘೋಷಣೆಯಾಗುವರೆಗೆ ಈಗಿರುವ ಸದಸ್ಯರನ್ನೇ ಮುಂದುವರೆಸುವಂತೆ ರಾಜ್ಯದ ನಾನಾ ಭಾಗಗಳಲ್ಲಿ ಮನವಿ ನೀಡಿ ಒತ್ತಾಯಿಸಲಾಗುತ್ತಿದೆ. ಕೋವಿಡ್ ಸಂಕಷ್ಟದ ದಿನಗಳಲ್ಲಿ ಸ್ಥಳೀಯ ಮಾಹಿತಿ ಮತ್ತು ಈ ಹಿಂದಿನ ಅಧಿಕಾರದ ಅನುಭವದಿಂದ ಹಳಬರನ್ನೇ ಬಳಸಿಕೊಂಡರೆ ಉತ್ತಮ ಎನ್ನುವ ಅಭಿಪ್ರಾಯ ಒಂದೆಡೆ ಕೇಳಿ ಬರುತ್ತಿದೆ. ಇನ್ನೊಂದೆಡೆ ಸರಕಾರ ತನಗೆ ಬೇಕಾದವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿ ಪರಿಸ್ಥಿತಿಯ ಲಾಭ ಪಡೆದು ಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಗ್ರಾ.ಪಂ. ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ನೇರವಾಗಿ ಯಾವುದೇ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಅವಕಾಶ ವಿಲ್ಲವಾದರೂ, ಸ್ಥಳೀಯ ಮಟ್ಟದ ಚುನಾವಣೆಯಾಗಿರುವುದರಿಂದ ಮತ್ತು ಅಪರೋಕ್ಷವಾಗಿ ಬೇರುಮಟ್ಟದಲ್ಲಿ ತಮ್ಮ ಮತ್ತು ತಮ್ಮ ಪಕ್ಷದ ನೆಲೆ ಗಟ್ಟಿಗೊಳಿಸಿಕೊಳ್ಳಲು ವಿವಿಧ ಪಕ್ಷದ ಮುಖಂಡರು ಹಲವು ರೀತಿಯಲ್ಲಿ ಬೆಂಬಲಿಸಿ ಚುನಾವಣೆ ಕಣ ಕಾವೇರುವಂತೆ ಮಾಡುವುದು ಸುಳ್ಳಲ್ಲಾ. ಒಟ್ಟಿನಲ್ಲಿ ಅಂಕೋಲಾದ ಎಲ್ಲಾ ಗ್ರಾ.ಪಂ.ಗಳ ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಹೆಚ್ಚುವರಿ ಅಧಿಕಾರ ಲಭಿಸುವದೋ ಅಥವಾ ಚುನಾವಣೆ ನಡೆಯದೇ ನಾಮ ನಿರ್ದೇಶಿತ ಸದಸ್ಯರಿಗೆ ಅಧಿಕಾರದ ಸೌಭಾಗ್ಯ ದೊರೆಯಲಿದಿಯೇ ಎನ್ನುವ ಪ್ರಶ್ನೆಗೆ ಸರಕಾರ ಮತ್ತು ಚುನಾವಣೆ ಆಯೋಗದ ಸ್ಪಷ್ಟ ನೀತಿಯಿಂದ ಉತ್ತರ ದೊರೆಯಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ