ಮಾದಕದ್ರವ್ಯ ಕಳ್ಳ ಸಾಗಾಟ ಪ್ರಕರಣ: ಇಬ್ಬರ ಬಂಧನ: ಎಸ್ಪಿ ಮಾರ್ಗದರ್ಶನ : ಜಿಲ್ಲೆಯಾದ್ಯಂತ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿರುವ ಪೊಲೀಸ್ ಇಲಾಖೆ: ಆರಂಭದಲ್ಲಿಯೇ ಸಂತೋಷದ ಸುದ್ದಿ ನೀಡಿದ ಅಂಕೋಲಾ ಸಿಪಿಐ

ಅಂಕೋಲಾ ಜುಲೈ 4: ಎಸ್ಪಿ ಶಿವಪ್ರಕಾಶ ದೇವರಾಜು ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಚುರುಕಿನ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಒಂದೇ ವಾರದಲ್ಲಿ 20 ಕ್ಕೂ ಹೆಚ್ಚು ಮನೆಗಳ್ಳತನ, ದೇವಸ್ಥಾನ ಕಳುವು ಮತ್ತಿತರ ಕಳ್ಳತನ ಪ್ರಕರಣ ಭೇದಿಸಿ ಜಿಲ್ಲೆಯ ಹಲವೆಡೆ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಡಿ ವೈಎಸ್ಪಿ ಅರವಿಂದ ಕಲಗುಜ್ಜೆ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಶೆಟ್ಟಿಯವರ ನೇತ್ರತ್ವದ ಅಂಕೋಲಾ ಪೋಲೀಸರ ತಂಡ, ಪಿಎಸೈ ಪ್ರವೀಣ ಕುಮಾರ್ ಆರ್ ಮತ್ತು ಸಿಬ್ಬಂದಿಗಳೊಂದಿಗೆ ಬೆಳಿಗ್ಗೆ 7.35 ರ ಸುಮಾರಿಗೆ, ಅಂಕೋಲಾ ತಾಲೂಕಿನ ರಾ.ಹೆ 66ರ ಬಾಳೆಗುಳಿ ಹತ್ತಿರದ ಕೃಷ್ಲಾಪುರ ಕ್ರಾಸ್ ಬಳಿ ಹಠಾತ್ತನೇ ದಾಳಿ ನಡೆಸಿ, ಕಾನೂನು ಬಾಹಿರವಾಗಿ ಮಾರಾಟಕ್ಕೆ ಗಾಂಜಾ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಆರೋಪಿತರಿಂದ 270 ಗ್ರಾಂ ತೂಕದ ಗಾಂಜಾ ಮಾದಕ ದ್ರವ್ಯದ ಪಾಕೆಟ್‌ಗಳು, ಸ್ಯಾಮಸಂಗ್ ಮೊಬೈಲ್, ನಗದು, ಹಾಗೂ ಮೋಟಾರ್ ಬೈಕ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಈ ಮೂಲಕ ನೂತನ ಸಿಪಿಐ ಸಂತೋಷ ಶೆಟ್ಟಿ ಅವರು, ಈ ಹಿಂದೆ ಕುಮಟಾ, ಕಾರವಾರಗಳಲ್ಲಿ ನಿರ್ವಹಿಸಿದ ದಕ್ಷತೆಯ ಪರಿಪಾಠವನ್ನು ಮುಂದುವರೆಸಿ, ಅಂಕೋಲಾ ತಾಲೂಕಿನ ಜನತೆಗೂ ಆರಂಭದಲ್ಲಿಯೇ ಸಂತೋಷದ ಸುದ್ದಿ ನೀಡಿದಂತಿದೆ. ಇತ್ತೀಚೆಗೆ ಅಂಕೋಲಾದ ನೂತನ ಪಿಎಸೈ ಆಗಿ ಅಧಿಕಾರ ಸ್ವೀಕರಿಸಿರುವ ಪ್ರವೀಣ ಕುಮಾರ ಸಹ ಯುವ ಅಧಿಕಾರಿಯಾದ್ದು, ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳ ಆಶಯಕ್ಕನುಗುಣವಾಗಿ ಚುರುಕಿನಿಂದ ಕಾರ್ಯಾಚರಿಸಿ, ತಾಲೂಕಿನಲ್ಲಿ ಕಾನೂನು ಬಾಹಿರ ಚಟುವಟಕೆಗಳಿಗೆ ಕಣಿವಾಣ ಹಾಕಲು ವಿಶೇಷ ಅಸಕ್ತಿ ವಹಿಸಿ, ಠಾಣೆಯ ಸಹೋದ್ಯೋಗಿ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಹೆಚ್ಚಿನ ಕಾರ್ಯಚರಣೆ ನಡೆಸುವ ಮೂಲಕ ತನ್ನ ಪ್ರಾವೀಣ್ಯತೆ ತೋರಿ,ಇಲಾಖೆ ಬಗ್ಗೆ ಜನತೆಯಲ್ಲಿ ಮತ್ತಷ್ಟು ಭರವಸೆ ಮೂಡಿಸಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

ಅಜ್ಜಿಕಟ್ಟಾ ಶೇಡಗೇರಿ ಮೂಲನಿವಾಸಿ ಹಾಲಿ ಬೊಬ್ರ ವಾಡಾ ವ್ಯಾಪ್ತಿಯ ಗೇರುಕೊಪ್ಪಾ- ಪಳ್ಳಿಕೇರಿ ಹತ್ತಿರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಅನ್ವರ ತಂದೆ ಗೌಸ್ ಸೈಯದ್ (30), ಕೋಟೆವಾಡಾ ಗುಜರಿ ಅಡ್ಡೆ ಹತ್ತಿರದ ನಿವಾಸಿ ಮಂಜುನಾಥ ತಂದೆ ಶಿವಾಜಿ ವಾಸ್ಟರ್ (31), ಬಂಧಿತ ಆರೋಪಿಗಳಾಗಿದ್ದು, ಇವರು ಕಾನೂನು ಬಾಹಿರವಾಗಿ ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಸಿಪಿಐ ನೇತ್ರತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು.
ಸಿಪಿಐ ಸಂತೋಷ ಶೆಟ್ಟಿ ನೇತ್ರತ್ವದಲ್ಲಿ, ಪಿಎಸೈ ಪ್ರವೀಣ ಕುಮಾರ, ಅಪರಾಧ ವಿಭಾಗದ ಹಿರಿಯ ಹವಾಲ್ದಾರ ಮೋಹನದಾಸ ಶೆಣ್ಣಿ, ಮಂಜುನಾಥ ಲಕ್ಮಾಪುರ, ಆಸೀಫ್ ಕುಂಕೂರ, ಶ್ರೀಕಾಂತ ಕಟಬರ, ರೋಹಿದಾಸ ದೇವಾಡಿಗ, ಜಗದೀಶ ನಾಯ್ಕ, ಸತೀಶ ನಾಯ್ಕ ಹಾಗೂ ಇತರರು ಯಶಸ್ವೀ ಕಾರ್ಯಾಚರಣೆ ನಡೆಸಿದರು.

ಜೂನ್ 26 ರಂದು ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಪ್ರಯುಕ್ತ ಜಿಲ್ಲೆಯ ವಿವಿಧ ಪ್ರಾಪ್ರಿಯ 79 ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್ಪಿ ಶಿವಪ್ರಕಾಶ್ ಮಾರ್ಗದರ್ಶನದಲ್ಲಿ ಗಾಂಜಾ, ಚರಸ್ ಸೇರಿ ಸುಮಾರು 24 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮಾದಕ ವಸ್ತುಗಳನ್ನು ಅಂಕೋಲಾ ತಾಲೂಕಿನ ಬೊಗ್ರಿಬೈಲ್ ಘನತ್ಯಾಜ್ಯ ಘಟಕದಲ್ಲಿ ದಹಿಸಿ, ನಾಶ ಮಾಡಲಾಗಿತ್ತು.
ಈ ವೇಳೆ ಮಾತನಾಡಿದ ಎಸ್ಪಿ, ಜಿಲ್ಲೆಯಲ್ಲಿ ಯಾರೇ ಮಾದಕ ದ್ರವ್ಯ ಕಳ್ಳಸಾಗಾಟ ಮತ್ತು ಮಾರಾಟ ಮಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. ಅದಾದ ಬೆನ್ನಿಗೇ ಕಳೆದ 2-3 ದಿನಗಳ ಹಿಂದೆ ಶಿರಸಿಯ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಗಾಂಜಾ ಪ್ರಕರಣವೊಂದನ್ನು ಭೇದಿಸಿ ಭೇಷ್ ಎನಿಸಿಕೊಂಡಿದ್ದರು. ಈಗ ಅಂಕೋಲಾ ಪೊಲೀಸರು ಸಹ ಗಾಂಜಾ ಪ್ರಕರಣ ಭೇದಿಸಿದ್ದು ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಹಾಗೂ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಂಕೋಲಾದ ಸುತ್ತ ಮುತ್ತಲೂ ಅಲ್ಲಲ್ಲಿ ಈ ಹಿಂದಿನಿಂದಲೂ ಗಾಂಜಾ ಘಮಲಿನ ವಾಸನೆ ಬಗ್ಗೆ ಅಲ್ಲಲ್ಲಿ ಕೇಳಿ ಬರುತ್ತಲೇ ಇತ್ತು ಎನ್ನಲಾಗಿದೆ.ಕೊವಿಡ್ ಸಂಬಂಧಿತ ಇಲಾಖಾ ಜವಾಬ್ದಾರಿ ನಿರ್ವಹಣೆ ಮತ್ತಿತರ ಪರಿಸ್ಥಿತಿಗಳ ಒತ್ತಡದಿಂದಲೋ ಏನೋ ಈ ಹಿಂದೆ ಅಂಕೋಲಾ ಪೊಲೀಸರು ಕೆಲ ಪ್ರಕರಣದ ಜಾಡು ಬೆನ್ನತ್ತುವಲ್ಲಿ ಜನ ನಿರೀಕ್ಷೆಯ ಯಶಸ್ಸು ಕಾಣಿಸದಿದ್ದರೂ, ಅಪರೂಪಕ್ಕೆ ಒಂದೆರೆಡು ಪ್ರಕರಣ ಬೇಧಿಸಿ,ಭರವಸೆ ಮೂಡಿಸಿದ್ದೂ ಇದೆ.

ಆದರೂ ಸ್ಮಶಾನ, ಹಳ್ಳದಂಚಿನ ಪ್ರದೇಶ ಸೇರಿದಂತೆ ಜನಸಂಚಾರ ವಿರಳ ಇರುವ ಬಹುತೇಕ ಕಡೆ 16ರಿಂದ 35 ವಯೋಮಿತಿ ಒಳಗಿನ ಕೆಲ ಯುವಕರೇ ಹೆಚ್ಚಾಗಿ ಕೆಟ್ಟ ವ್ಯಸನಕ್ಕೆ ಮಾರು ಹೋಗುತ್ತಿದ್ದರು ಎನ್ನಲಾಗಿದೆ. ಮಾದಕ ಪ್ರಿಯರು ಹಾಗೂ ವ್ಯಸನಿಗಳು ಮತ್ತು ಮಾರಾಟಗಾರರ ಮಧ್ಯೆ ಅಪರಿಚಿತರು ಬಂದು ಸಿಕ್ಕಿ ಹಾಕಿಕೊಳ್ಳುವ ಅಪಾಯ ಇರುವುದರಿಂದ, ತಮ್ಮ ವ್ಯವಹಾರಿಕ ಸುರಕ್ಷತೆಗೆ ವಿಶೇಷ ಅಚ್ಚುಳ್ಳ ಟೀ ಶರ್ಟ್ ಸೇರಿದಂತೆ ಅವರ ಇತರೆ ಡ್ರೆಸ್ ಕೋಡ್, ತಲೆಜುಟ್ಟು, ದಾಡಿ ಮತ್ತಿತರ ಗುಪ್ತ ವ್ಯವಹಾರಿಕ ಸಂಜ್ಞೆ ಮತ್ತು ಸಂಕೇತಗಳನ್ನು ಕೆಲವೊಮ್ಮೆ ಬಳಸುತ್ತಾರೆ ಎನ್ನಲಾಗಿದೆ
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ