ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದಿಂದ ಹೊರ ಹೋಗುವ ದ್ವಾರದಲ್ಲಿ ಅಳವಡಿಸಲಾದ ಕ್ಯಾಟಲ್ ಯಾರ್ಕ್ ಮಾದರಿಯ ಕಬ್ಬಿಣದ ಪಟ್ಟಿಗಳನ್ನು ಸಾರಿಗೆ ಸಂಸ್ಥೆ ತಾತ್ಕಾಲಿಕವಾಗಿ ಸರಿಪಡಿಸಿ ಮರುಜೋಡಣಾ ಕಾರ್ಯ ನಡೆಸಿದ್ದಾರೆ. ಬಸ್ ನಿಲ್ದಾಣದ ಆಗಮನ ಮತ್ತು ನಿರ್ಗಮನ ದ್ವಾರದಲ್ಲಿ ಕಬ್ಬಿಣದ ಪಟ್ಟಿಗಳು ಪದೇ ಪದೇ ತುಂಡಾಗಿ ವಾಹನ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ಸಮಸ್ಯೆ ಎದುರಾಗುತ್ತಿರುವ ಕುರಿತು, ಮತ್ತು ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ತಾಲೂಕಿನ ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯ ಕುಮಾರ ನಾಯ್ಕ ಮತ್ತಿತರರು ಸ್ವಾತಂತ್ರ್ಯೋತ್ಸವ ದಿನದಂದೇ ಪ್ರತಿಭಟನೆ ನಡೆಸುವುದಾಗಿ ಕುರಿತು ವಿಸ್ಮಯ ವಾಹಿನಿ ಬಸ್ ನಿಲ್ದಾಣದ ಕರ್ಮ ಕಾಂಡ ಎನ್ನುವ ತಲೆಬರಹದಡಿ ವಿಸ್ತೃತ ವರದಿ ಪ್ರಕಟಿಸಿ ಸಂಬಂಧಿಸಿದದವರ ಗಮನ ಸೆಳೆದಿತ್ತು.
ಸುದ್ದಿಯನ್ನು ಗಮನಿಸಿದ್ದ ತಹಶೀಲ್ದಾರ ಉದಯ ಕುಂಬಾರ ಅವರು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಬಸ್ ಪ್ರಯಾಣಿಕರ ಹಿತದೃಷ್ಟಿಯಿಂದ ಕೂಡಲೇ ದುರವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇದೀಗ ಮತ್ತೊಮ್ಮೆ ಸಡಿಲಗೊಂಡ ಕಬ್ಬಿಣದ ಪಟ್ಟಿಗಳನ್ನು ಹೊರತೆಗೆದು ಸರಿಪಡಿಸಿ ಪುನಃ ನಿರ್ಗಮನ ದ್ವಾರದ ಬಳಿ ಅಳವಡಿಸಿದ್ದಾರೆ.
ಇದರಿಂದಾಗಿ ಸದ್ಯದ ಮಟ್ಟಿಗೆ ಸಮಸ್ಯೆ ನಿವಾರಣೆ ಆದಂತಾಗಿದೆ. ಮತ್ತು ಸಂಬಂಧಿಸಿದ ಸಾರಿಗೆ ಸಂಸ್ಥೆ ಸ್ವಾತಂತ್ರ್ಯೋತ್ಸವ ದಿನದಂದು ಪ್ರತಿಭಟನೆ ಎದುರಿಸಬೇಕಾದ ಮುಜುಗರದಿಂದ ತಪ್ಪಸಿಕೊಳ್ಳುವಂತಾಗಿದೆ. ಈ ಹಿಂದೆ ಸಹ ಹಲವಾರು ಬಾರಿ ಕಬ್ಬಿಣದ ಪಟ್ಟಿಗಳು ತುಂಡಾಗುತ್ತಲೇ ಇದ್ದು, ಸುದ್ದಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಕೂಡಲೇ ಅದನ್ನು ತಾತ್ಕಾಲಿಕ ರಿಪೇರಿ ಮಾಡಿ ತಂದು ಜೋಡಿಸಿ, ಜವಾಬ್ದಾರಿಯಿಂದ ಕೈ ತೊಳೆದು ಕೊಳ್ಳಲಾಗುತ್ತಿದೆಯೇ ವಿನ:,ಗಟ್ಟಿ ಮುಟ್ಟಾದ ಕೆಟಲ್ ರ್ಯಾಕ್ ನಿರ್ಮಾಣ, ಬಸ್ ನಿಲ್ದಾಣದ ಆವರಣದ ನೀರು ಸರಿಯಾಗಿ ಹರಿದು ಹೋಗಲು ಮತ್ತು ಕ್ಯಾಟಲ್ ರ್ಯಾಕ್ ಕೆಳಗೆ ತುಂಬಿಕೊಳ್ಳುವ ಹೂಳು-ಕಸಕಡ್ಡಿ ತೆರವು ಗೊಳಿಸಲು ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳುವುದು ಯಾವಾಗ? ಈ ಬಾರಿ ರಿಪೇರಿ ಮಾಡಲಾಗಿರುವ ಈ ಪಟ್ಟಿಗಳು ಮತ್ತೆ ಯಾವಾಗ ಮುರಿದು ತುಂಡಾಗುವುದೋ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.
ಮುಂದಿನ ದಿನಗಳಲ್ಲಿ ಆದರೂ ಈ ಕುರಿತು ಸಾರಿಗೆ ಸಂಸ್ಥೆ ಅಧಿಕಾರಿಗಳು ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವರೇ ಕಾದು ನೋಡಬೇಕಿದೆ.