Focus News
Trending

SDM ಪದವಿ ಕಾಲೇಜಿನ ಪ್ರಾಂಶುಪಾಲರಿಗೆ ಆತ್ಮೀಯ ಬೀಳ್ಕೊಡುಗೆ

ಹೊನ್ನಾವರ : ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿ ಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ವಿಜಯಲಕ್ಷ್ಮೀ.ಎಂ.ನಾಯ್ಕ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ನಡೆಯಿತು. 38 ವರ್ಷಗಳ ಕಾಲ ಎಸ್.ಡಿ.ಎಂ ಕಾಲೇಜಿನಲ್ಲಿ ಕಾರ್ಯವನ್ನು ನಿರ್ವಹಿಸಿದ ,ಡಾ.ವಿಜಯಲಕ್ಷ್ಮೀ .ಎಂ.ನಾಯ್ಕ 2018 ರಿಂದ ಎಸ್.ಡಿ.ಎಮ್. ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಯಶಸ್ವಿಯಾಗಿ ಕಾರ್ಯವನ್ನು ನಿರ್ವಹಿಸಿದ್ದರು.

ಎಸ್.ಡಿ.ಎಮ್.ಕಾಲೇಜಿನ ಇತಿಹಾಸದಲ್ಲೇ ಮೊದಲ ಮಹಿಳಾ ಪ್ರಾಚಾರ್ಯೆ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಅಲ್ಲದೆ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆಯಾಗಿ, ನ್ಯಾಕ್ ಪೀರ್ ಕಮಿಟಿಯ ಸದಸ್ಯರಾಗಿ , ವಿಶ್ವ ವಿದ್ಯಾಲಯದ ಇನ್ನಿತರ ಪ್ರಮುಖ ಹುದ್ದೆಯನ್ನು ಅಲಂಕರಿಸಿ ಕಾಲೇಜಿನ ಗೌರವವನ್ನು ಹೆಚ್ಚಿಸಿದವರು. 1985 ರಲ್ಲಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಹಂಗಾಮಿ ಉಪನ್ಯಾಸಕಿಯಾಗಿ ಸೇವೆ ಆರಂಭಿಸಿದ ಇವರು 2023 ಜೂನ್ 30 ರಂದು ಪ್ರಾಚಾರ್ಯರಾಗಿ ಸೇವೆಗೆ ನಿವೃತ್ತಿ ಹೊಂದಿದರು.

ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿ ಇವರಿಗೆ ಭಾವಪೂರ್ಣ ಬೀಳ್ಕೊಡುಗೆ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ವಿಜಯಲಕ್ಷ್ಮೀ ನಾಯ್ಕ ತಾವು ಕಾಲೇಜಿನಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದರು. ಆಡಳಿತ ಮಂಡಳಿ ನೀಡಿದ ಸಹಕಾರ ಹಾಗೂ ವಿದ್ಯಾರ್ಥಿಗಳು ನೀಡಿದ ಪ್ರೀತಿ ಯಾವಾಗಲೂ ನೆನಪಿನಲ್ಲಿ ಉಳಿಯುವಂತದ್ದು. ತಾವು ಕೆಲಸ ನಿರ್ವಹಿಸುವ ವೇಳೆ ಬೆನ್ನಿಗೆ ನಿಂತ ಎಲ್ಲಾ ಸಹೋದ್ಯೋಗಿಗಳನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೃಷ್ಣಮೂರ್ತಿ ಭಟ್,ಶಿವಾನಿ ಮಾತನಾಡಿ ವಿಜಯಲಕ್ಷ್ಮಿ.ನಾಯ್ಕ ಅವರು ಕೆಲಸ ಹಾಗೂ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಬಗ್ಗೆ ಅಭಿಮಾನವಿದೆ. ಅಲ್ಲದೆ ಇನ್ನು ಮುಂದೆಯೂ ಸಹ ಕಾಲೇಜಿನ ಜೊತೆ ಉತ್ತಮ ಬಾಂಧವ್ಯ ಮುಂದುವರಿಸಿಕೊಂಡು ಹೋಗಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು. ವೇದಿಕೆ ಮೇಲೆ ವಿಜಯಲಕ್ಷ್ಮಿ ನಾಯ್ಕ ಪತಿ ಎಸ್.ಬಿ.ಐ ನ ಮಾಜಿ ಮ್ಯಾನೇಜರ್ ಡಿ.ಜಿ.ನಾಯ್ಕ, ಎಂ.ಪಿ.ಇ.ಸೊಸೈಟಿಯ ಕಾರ್ಯಕಾರಿ ಸದಸ್ಯರು , ಪಿ.ಎಂ.ಹೊನ್ನಾವರ ,ಹಾಜರಿದ್ದರು. ಇದೇ ವೇಳೆ ಕಾಲೇಜಿನ ಇತರೆ ವಿಭಾಗದವರು , ಪೂರ್ವ ವಿದ್ಯಾರ್ಥಿ ಸಂಘದವರು ವಿಜಯಲಕ್ಷ್ಮಿ ನಾಯ್ಕ ಅವರನ್ನು ಗೌರವಿಸಿದರು. ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಎಸ್.ಹೆಗಡೆ ಮಾತನಾಡಿ ತಮ್ಮ ಹಾಗೂ ವಿಜಯಲಕ್ಷ್ಮಿ ನಾಯ್ಕ ಅವರ ಜೊತೆಗಿನ ಒಡನಾಟ, ಅವರು ನೀಡಿದ ಸಹಕಾರದ ಕುರಿತು ಮಾತನಾಡಿದರು.ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುರೇಶ್.ಎಸ್ ಪ್ರಾಚಾರ್ಯರ ಬಗ್ಗೆ ಮಾತನಾಡಿದರು.

ಸಂಗೀತ ವಿಭಾಗದ ಉಪನ್ಯಾಸಕಿ ಸಂಗೀತಾ ನಾಯ್ಕ ಪ್ರಾರ್ಥಿಸಿದರು. ಎಂ.ಪಿ.ಇ.ಸೊಸೈಟಿಯ ಕಾರ್ಯದರ್ಶಿ ಎಸ್.ಎಮ್.ಭಟ್ ಸ್ವಾಗತಿ‌ಸಿದರು. ಉಪನ್ಯಾಸಕ ನಾಗರಾಜ್ ಹೆಗಡೆ ,ಅಪಗಾಲ್  ಅಭಿನಂದನಾ ನುಡಿಗಳನ್ನಾಡಿದರು. ಎಂ.ಪಿ.ಇ.ಸೊಸೈಟಿ ಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ ವಂದಿಸಿದರು.ಉಪನ್ಯಾಸಕ ಪ್ರಶಾಂತ್ ಹೆಗಡೆ ನಿರೂಪಿಸಿದರು. 

ವಿಸ್ಮಯ ನ್ಯೂಸ್, ಹೊನ್ನಾವರ

Back to top button